ಸೋಮವಾರ, ಏಪ್ರಿಲ್ 12, 2021
25 °C

ಮೂರನೇ ಮಹಡಿಯಿಂದ ಬಿದ್ದು ಗಾಯಗೊಂಡಿದ್ದ ಬಾಲಕಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶೇಷಾದ್ರಿಪುರದ ಕುಮಾರಪಾರ್ಕ್ ಪಶ್ಚಿಮ ಬಡವಾಣೆಯಲ್ಲಿರುವ ಕಟ್ಟಡದ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಬಾಲಕಿ ಶ್ವೇತಾ (15) ಬುಧವಾರ ರಾತ್ರಿ ಸಾವನ್ನಪ್ಪಿದಳು.ಕುಮಾರಪಾರ್ಕ್ ಪಶ್ಚಿಮ ಬಡಾವಣೆಯಲ್ಲಿರುವ ರಾಜೇಶ್ ಜೈನ್ ಎಂಬ ವ್ಯಾಪಾರಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಶ್ವೇತಾ, ಭಾನುವಾರ (ಜು.8) ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ತೀವ್ರ ಗಾಯಗೊಂಡಿದ್ದ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶ್ವೇತಾ ಸಾವನ್ನಪ್ಪಿದಳು ಎಂದು ಪೊಲೀಸರು ತಿಳಿಸಿದರು.`ಶ್ವೇತಾಳ ದೇಹದ ಮೇಲೆ ಗಾಯದ ಗುರುತುಗಳಿದ್ದು, ರಾಜೇಶ್ ಜೈನ್‌ರ ಕುಟುಂಬ ಸದಸ್ಯರು ಮಗಳಿಗೆ ಕಿರುಕುಳ ನೀಡುತ್ತಿದ್ದರು~ ಎಂದು ಶ್ವೇತಾ ಪೋಷಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜೇಶ್ ಜೈನ್ (77), ಅವರ ಪತ್ನಿ ಕಾಂಚನಾ (72), ಮಕ್ಕಳಾದ ಜತಿನ್ (35) ಮತ್ತು ಖುಷ್ಬು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈಗಾಗಲೇ ಜತಿನ್ ಅವರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.`ಭಾನುವಾರ ನನ್ನ ಮಗಳ ಬಗ್ಗೆ ವಿಚಾರಿಸಲು ರಾಜೇಶ್ ಜೈನ್ ಅವರ ಮನೆಗೆ ಹೋದಾಗ ನಿಮ್ಮ ಮಗಳು ಆಸ್ಪತ್ರೆಯಲ್ಲಿದ್ದಾಳೆ ಎಂದು ಅವರು ಖಾರವಾಗಿ ಹೇಳಿದರು. ಎರಡು ವರ್ಷದಿಂದ ಶ್ವೇತಾ ಇವರ ಮನೆಯಲ್ಲಿ ದುಡಿದಿದ್ದಾಳೆ. ತಿಂಗಳಿಗೆ ಎರಡು ಸಾವಿರ ರೂಪಾಯಿ ಸಂಬಳ ಕೊಡುತ್ತಿದ್ದರು. ನಾನು ಮತ್ತು ಪತಿ ಇಬ್ಬರೂ ಅನಾರೋಗ್ಯದಿಂದ ಬಳಲುತ್ತಿದ್ದೇವೆ. ಮಗಳೇ ನಮ್ಮ ಕುಟುಂಬಕ್ಕೆ ಆಧಾರವಾಗಿದ್ದಳು~ ಎಂದು ವಿನಾಯಕನಗರದಲ್ಲಿ ವಾಸವಾಗಿರುವ ಶ್ವೇತಾಳ ತಾಯಿ ಗೀತಾ ರೋದಿಸಿದರು.  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ವೇತಾಳನ್ನು ಮಂಗಳವಾರ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಮೀನಾ ಕೆ. ಜೈನ್ ಅವರು ಭೇಟಿ ಮಾಡಿದ್ದರು. `ರಾಜೇಶ್ ಕುಟುಂಬ ಸದಸ್ಯರು ತಮಗಾಗಿ ಮಾಡಿಟ್ಟುಕೊಂಡಿದ್ದ ತಿಂಡಿಯನ್ನು ನಾನು ತಿಂದಿದ್ದೆ. ಈ ವಿಷಯ ಗೊತ್ತಾಗಿ ಅವರು ನನ್ನ ತಲೆಯನ್ನು ಗೋಡೆಗೆ ಗುದ್ದಿಸಿದ್ದರು. ಈ ವೇಳೆ ಅವರಿಂದ ತಪ್ಪಿಸಿಕೊಳ್ಳಲು ಮುಂದಾದಾಗ ಕೋಣೆಯಲ್ಲಿ ನನ್ನನ್ನು ಕೂಡಿ ಹಾಕಿ ಹಿಂಸಿಸಿದರು. ಇದರಿಂದ ಕಟ್ಟಡದಿಂದ ಕೆಳಗೆ ಬಿದ್ದೆ ಎಂದು ಹೇಳಿದಳು. ಈ ಬಗ್ಗೆ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು~ ಎಂದು ಮೀನಾ ಜೈನ್ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.