ಮೂರನೇ ಸುತ್ತಿಗೆ ಸೆರೆನಾ ಲಗ್ಗೆ

ರಿಯೊ ಡಿ ಜನೈರೊ (ಎಎಫ್ಪಿ): ಒಲಿಂಪಿಕ್ಸ್ನಲ್ಲಿ ಐದನೇ ಚಿನ್ನದ ಮೇಲೆ ಕಣ್ಣಿಟ್ಟಿರುವ ಅಮೆರಿಕದ ಸೆರೆನಾ ವಿಲಿಯಮ್ಸ್ ಅವರು ಸಿಂಗಲ್ಸ್ ವಿಭಾಗದಲ್ಲಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
ಮಹಿಳೆಯರ ವಿಭಾಗದ ಎರಡನೇ ಸುತ್ತಿನ ಹೋರಾಟದಲ್ಲಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಸೆರೆನಾ 7–6, 6–2ರ ನೇರ ಸೆಟ್ಗಳಿಂದ ಫ್ರಾನ್ಸ್ನ ಅಲೈಜ್ ಕಾರ್ನೆಟ್ ಅವರನ್ನು ಪರಾಭವಗೊಳಿಸಿದರು.
2014ರಲ್ಲಿ ಉಭಯ ಆಟಗಾರ್ತಿ ಯರು ಮೂರು ಬಾರಿ ಮುಖಾಮುಖಿ ಯಾಗಿದ್ದರು. ಆಗ ಎಲ್ಲಾ ಪಂದ್ಯಗಳಲ್ಲೂ ಕಾರ್ನೆಟ್ ಗೆಲುವು ಗಳಿಸಿದ್ದರು. ಈ ಪಂದ್ಯದಲ್ಲಿ ಜಯಿಸಿ ಸೆರೆನಾ ಹಿಂದಿನ ಸೋಲುಗಳಿಗೆ ಸೇಡು ತೀರಿಸಿಕೊಂಡಿ ದ್ದಾರೆ. ಡಬಲ್ಸ್ನಲ್ಲಿ ಹಿರಿಯ ಸಹೋದರಿ ವೀನಸ್ ಜತೆಗೂಡಿ ಆಡಿದ್ದ ಸೆರೆನಾ ಆರಂಭಿಕ ಸುತ್ತಿನಲ್ಲೇ ಆಘಾತ ಅನುಭವಿಸಿದ್ದರು. ಹೀಗಾಗಿ ಅವರು ಸಿಂಗಲ್ಸ್ ವಿಭಾಗದಲ್ಲಿ ಪದಕದ ಸಾಧನೆ ಮಾಡಿ ಈ ನಿರಾಸೆಯನ್ನು ಮರೆಯುವ ಗುರಿ ಹೊಂದಿದ್ದಾರೆ.
ಕೂಟದಲ್ಲಿ ಅಗ್ರಶ್ರೇಯಾಂಕ ಹೊಂದಿರುವ ಅಮೆರಿಕದ ಆಟಗಾರ್ತಿ ಮೊದಲ ಸೆಟ್ನ ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು.
ಎರಡು ಬಾರಿ ಎದುರಾಳಿಯ ಸರ್ವ್ ಮುರಿದ ಅವರು ಒಮ್ಮೆ ತಮ್ಮ ಸರ್ವ್ ಉಳಿಸಿಕೊಂಡು 3–0ರ ಮುನ್ನಡೆ ಕಂಡುಕೊಂಡರು. ನಾಲ್ಕನೇ ಗೇಮ್ನಲ್ಲೂ ಸೆರೆನಾ ಮಿಂಚು ಹರಿಸಿ ಮುನ್ನಡೆ ಹೆಚ್ಚಿಸಿಕೊಂಡರು.
ಈ ಹಂತದಲ್ಲಿ ಕಾರ್ನೆಟ್ ಲಯ ಕಂಡುಕೊಂಡರು. ಅಮೋಘ ಸರ್ವ್ ಮತ್ತು ಶರವೇಗದ ರಿಟರ್ನ್ಗಳ ಮೂಲಕ ಅಮೆರಿಕದ ಆಟಗಾರ್ತಿಯನ್ನು ಕಂಗೆಡಿಸಿದ ಕಾರ್ನೆಟ್ ಸತತ ನಾಲ್ಕು ಗೇಮ್ ಗೆದ್ದು 4–4ರಲ್ಲಿ ಸಮಬಲ ಮಾಡಿಕೊಂಡರು.
ಆ ಬಳಿಕದ ನಾಲ್ಕು ಗೇಮ್ಗಳಲ್ಲಿ ಉಭಯ ಆಟಗಾರ್ತಿಯರು ಸರ್ವ್ ಉಳಿಸಿಕೊಂಡಿದ್ದರಿಂದ ಪಂದ್ಯ ‘ಟೈ ಬ್ರೇಕರ್’ಗೆ ಸಾಗಿತು.
ಒತ್ತಡವನ್ನು ಮೆಟ್ಟಿನಿಂತು ಆಡುವ ಕಲೆ ಕರಗತ ಮಾಡಿಕೊಂಡಿದ್ದ ಸೆರೆನಾ ಆಕರ್ಷಕ ಡ್ರಾಪ್ ಮತ್ತು ಅಮೋಘ ಕ್ರಾಸ್ಕೋರ್ಟ್ ಸ್ಮ್ಯಾಷ್ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿ 77ನೇ ನಿಮಿಷದಲ್ಲಿ ಸೆಟ್ ತಮ್ಮ ದಾಗಿಸಿಕೊಂಡರು.
ಎರಡನೇ ಸೆಟ್ನಲ್ಲಿ 34 ವರ್ಷದ ಸೆರೆನಾ ಅವರ ಆಟ ಇನ್ನಷ್ಟು ಕಳೆಗಟ್ಟಿತು. 22 ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಅಮೆರಿಕದ ಆಟಗಾರ್ತಿ ಆರಂಭದಿಂದಲೇ ಗೇಮ್ ಬೇಟೆಗೆ ಮುನ್ನುಡಿ ಬರೆದರು.
ಒಂದು ಹಂತದಲ್ಲಿ ಇಬ್ಬರು 2–2ರಲ್ಲಿ ಸಮಬಲ ಮಾಡಿಕೊಂಡಿದ್ದರು. ಆ ಬಳಿಕ ಸೆರೆನಾ ಅಂಗಳದಲ್ಲಿ ಮಿಂಚು ಹರಿಸಿದರು. ಅಮೆರಿಕದ ಆಟಗಾರ್ತಿಯ ರ್ಯಾಕೆಟ್ನಿಂದ ಹೊರಹೊಮ್ಮುತ್ತಿದ್ದ ಬಿರುಗಾಳಿ ವೇಗದ ಸರ್ವ್ಗಳನ್ನು ರಿಟರ್ನ್ ಮಾಡಲು ಕಾರ್ನೆಟ್ ಪ್ರಯಾಸ ಪಟ್ಟರು. ಇದರ ಪೂರ್ಣ ಲಾಭ ಎತ್ತಿಕೊಂಡ ಸೆರೆನಾ ಸತತ ನಾಲ್ಕು ಗೇಮ್ ಜಯಿಸಿ ಸಂಭ್ರಮಿಸಿದರು.
ಮೂರನೇ ಸುತ್ತಿನಲ್ಲಿ ಸೆರೆನಾಗೆ ಉಕ್ರೇನ್ನ ಎಲಿನಾ ಸ್ವಿಟೋಲಿನಾ ಸವಾಲು ಎದುರಾಗಲಿದೆ.
ಎರಡನೇ ಸುತ್ತಿನ ಇತರೆ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಏಂಜಲಿಕ್ ಕೆರ್ಬರ್ 6–4, 6–2ರಲ್ಲಿ ಕೆನಡಾದ ಯೂಜ್ನಿ ಬೌಷಾರ್ಡ್ ಎದುರೂ, ಆಸ್ಟ್ರೇಲಿಯಾದ ಸಮಂತಾ ಸೊಸುರ್ 6–3, 6–4ರಲ್ಲಿ ಜಪಾನ್ನ ಮಿಸಾಕಿ ಡೊಯಿ ಮೇಲೂ ಗೆದ್ದರು.
ಪೊಟ್ರೊ ಗೆಲುವಿನ ಓಟ:
ಆರಂಭಿಕ ಸುತ್ತಿನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ಗೆ ಆಘಾತ ನೀಡಿ ಭರವಸೆ ಮೂಡಿಸಿದ್ದ ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಗೆಲುವಿನ ಓಟ ಮುಂದುವರಿಸಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 141ನೇ ಸ್ಥಾನದಲ್ಲಿರುವ ಪೊಟ್ರೊ 6–3, 1–6, 6–3 ರಲ್ಲಿ ಪೋರ್ಚುಗಲ್ನ ಜಾವೊ ಸೌಸಾ ಅವರನ್ನು ಮಣಿಸಿದರು. 27 ವರ್ಷದ ಆಟಗಾರ ಆರಂಭಿಕ ಸೆಟ್ನಲ್ಲಿ ಛಲದ ಆಟ ಆಡಿದರಾದರೂ, ಎರಡನೇ ಸೆಟ್ನಲ್ಲಿ ನಿರಾಸೆ ಕಂಡರು. ಮೂರನೇ ಸೆಟ್ನಲ್ಲಿ ದಿಟ್ಟ ಹೋರಾಟ ನಡೆಸಿ ಗೆಲುವು ತಮ್ಮದಾಗಿಸಿಕೊಂಡರು.
ನಿಶಿಕೋರಿ ಮಿಂಚು:
ಜಪಾನ್ನ ಕೀ ನಿಶಿಕೋರಿ ಎರಡನೇ ಸುತ್ತಿನಲ್ಲಿ ಮನಮೋಹಕ ಆಟ ಆಡಿ ಗೆಲುವು ಒಲಿಸಿಕೊಂಡರು.
ನಿಶಿಕೋರಿ 7–6, 6–4ರನೇರ ಸೆಟ್ಗಳಿಂದ ಆಸ್ಟ್ರೇಲಿಯಾದ ಜಾನ್ ಮಿಲ್ಮ್ಯಾನ್ಗೆ ಸೋಲುಣಿಸಿದರು.
ಇನ್ನೊಂದು ಪಂದ್ಯದಲ್ಲಿ ಲಕ್ಸೆಮ್ಬರ್ಗ್ನ ಗಿಲ್ಲೆಸ್ ಮುಲ್ಲರ್ 6–4, 6–3ರ ನೇರ ಸೆಟ್ಗಳಿಂದ ಫ್ರಾನ್ಸ್ನ ಐದನೇ ಶ್ರೇಯಾಂಕಿತ ಆಟಗಾರ ಜೋ ವಿಲ್ಫ್ರೆಡ್ ಸೊಂಗಾಗೆ ಆಘಾತ ನೀಡಿದರು.
ಡಬಲ್ಸ್ನಲ್ಲೂ ಮುಗ್ಗರಿಸಿದ ನೊವಾಕ್:
ಸಿಂಗಲ್ಸ್ನಲ್ಲಿ ಆಘಾತ ಅನುಭವಿಸಿದ್ದ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಡಬಲ್ಸ್ ವಿಭಾಗದಲ್ಲೂ ಸೋತು ಕೂಟದಿಂದ ಹೊರಬಿದ್ದಿದ್ದಾರೆ.
ಜೊಕೊವಿಚ್ ಮತ್ತು ನೆನಾದ್ ಜಿಮೊಂಜಿಕ್ 4–6, 4–6ರಲ್ಲಿ ಬ್ರೆಜಿಲ್ನ ಮಾರ್ಷೆಲೊ ಮೆಲೊ ಮತ್ತು ಬ್ರೂನೊ ಸೋರೆಸ್ ವಿರುದ್ಧ ಶರಣಾದರು.
ಎರಡನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಸ್ಪೇನ್ನ ರಫೆಲ್ ನಡಾಲ್ ಮತ್ತು ಮಾರ್ಕ್ ಲೋಪೆಜ್ 6–3, 5–7, 6–2ರಲ್ಲಿ ಡೆಲ್ ಪೊಟ್ರೊ ಮತ್ತು ಮ್ಯಾಕ್ಸಿಮೊ ಗೊಂಜಾಲೆಜ್ ವಿರುದ್ಧ ಗೆದ್ದರು.
16 ರ ಘಟ್ಟಕ್ಕೆ ಮರ್ರೆ
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಬ್ರಿಟನ್ನ ಆ್ಯಂಡಿ ಮರ್ರೆ 16ರ ಘಟ್ಟಕ್ಕೆ ಲಗ್ಗೆ ಇಟ್ಟರು. ವಿಶ್ವ ಕ್ರಮಾಂಕಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿರುವ ಮರ್ರೆ ಎರಡನೇ ಸುತ್ತಿನ ಹಣಾಹಣಿಯಲ್ಲಿ 6–3, 6–1ರ ನೇರ ಸೆಟ್ಗಳಿಂದ ಅರ್ಜೆಂಟೀನಾದ ಜುವಾನ್ ಮೊನಾಕೊ ಅವರನ್ನು ಪರಾಭವಗೊಳಿಸಿದರು.
ಮರ್ರೆ 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.