ಮೂರರ ಒಳಗಿನ ಸ್ಥಾನ...

7
ವಿಕಾಸ್ ಗೌಡ ಆತ್ಮವಿಶ್ವಾಸದ ಅನಿಸಿಕೆ; ಮುಂದಿನ ಋತುವಿನಲ್ಲಿ ಇನ್ನೂ ಎತ್ತರಕ್ಕೆ

ಮೂರರ ಒಳಗಿನ ಸ್ಥಾನ...

Published:
Updated:
ಮೂರರ ಒಳಗಿನ ಸ್ಥಾನ...

ಬೆಂಗಳೂರು: ಅಂತರರಾಷ್ಟ್ರೀಯ ಎತ್ತರದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಈವರೆಗೆ ಕರ್ನಾಟಕದ ಯಾರೂ ಮಾಡದ ಸಾಧನೆಯನ್ನು ಮಾಡಿರುವ ಅನನ್ಯ ಅಥ್ಲೀಟ್ ವಿಕಾಸ್ ಗೌಡ ಅವರಿಗೆ ಈ ಋತುವಿನಲ್ಲಿ ಬಿಡುವು ಸಿಕ್ಕಿದ್ದೇ ಇಲ್ಲ. ಪ್ರತಿಯೊಂದು ಕೂಟದಲ್ಲಿಯೂ ಡಿಸ್ಕಸ್ ಎಸೆತದಲ್ಲಿ ಅಪೂರ್ವ ಸಾಮರ್ಥ್ಯ ತೋರಿರುವ ಇವರು ಸೋಮವಾರ ಬೆಂಗಳೂರಿಗೆ ಬಂದಿದ್ದಾರೆ.ತಿಂಗಳ ಹಿಂದೆ ಪುಣೆಯಲ್ಲಿ ನಡೆದಿದ್ದ ಏಷ್ಯಾ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದ ಇವರು ಈಚೆಗೆ ಆಸ್ಟ್ರೀಯಾದ ಲಿಂಜ್ ನಗರದಲ್ಲಿ ನಡೆದಿದ್ದ ಅಂತರ ರಾಷ್ಟ್ರೀಯ ಕೂಟ ಒಂದರಲ್ಲಿ ಬಂಗಾರದ ಸಾಮರ್ಥ್ಯ ತೋರಿದ್ದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಏಳನೇ ಸ್ಥಾನ ಗಳಿಸಿರುವ ಇವರು ಮುಂದಿನ ದಿನಗಳಲ್ಲಿ ಇನ್ನೂ ಎತ್ತರದ ಸಾಧನೆ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ.`ಪ್ರಜಾವಾಣಿ' ಜತೆಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ವಿಕಾಸ್ ಗೌಡ `ಈ ಋತುವಿನಲ್ಲಿ ನಾನು ವಿಶ್ವದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹಲವು ಸಲ ಪ್ರಯಾಣ ಮಾಡಿದ್ದೊಂದು ವಿಶಿಷ್ಠ ಅನುಭವವಾಗಿದ್ದು, ಮುಂದಿನ ಋತುವಿನಲ್ಲಿ ಇಂತಹ ಒತ್ತಡಗಳನ್ನು ಲೀಲಾಜಾಲವಾಗಿ ನಿಭಾಯಿಸುವ ಆತ್ಮವಿಶ್ವಾಸ ಮೂಡಿದೆ' ಎಂದರು.`ಈ ಸಲ ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್‌ನ ಕೆಲವು ಡೈಮಂಡ್ ಲೀಗ್‌ಗಳಲ್ಲಿ ಸ್ಪರ್ಧಿಸಿದೆನಾದರೂ, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಐದನೇ ಸ್ಥಾನದೊಳಗೆ ಏರಲು ಸಾಧ್ಯವಾಗದ ಬಗ್ಗೆ ಅತೃಪ್ತಿ ಇದೆ, ನಿಜ. ಆದರೆ ಈ ಅನುಭವವನ್ನು ಬೆನ್ನಿಗಿಟ್ಟು ಮುಂದಿನ ಋತುವಿನಲ್ಲಿ ಮೊದಲ ಮೂರು ಸ್ಥಾನಗಳಿಗೆ ಏರಲಿದ್ದೇನೆ' ಎಂದರು.`ಈ ವರ್ಷದ ಆರಂಭದಲ್ಲಿ ನನಗೆ ಬೆನ್ನುನೋವು ಇನ್ನಿಲ್ಲದಂತೆ ಕಾಡಿತ್ತು. ಆದರೆ ಅದರಿಂದ ಚೇತರಿಸಿಕೊಂಡು ನಾನು ಈ ಮಟ್ಟಿಗಿನ ಸಾಮರ್ಥ್ಯ ತೋರಿದ್ದೇನೆ' ಎನ್ನುವುದನ್ನೂ ಅವರು ಮರೆಯಲಿಲ್ಲ.`ಮುಂದಿನ ಋತುವಿನಲ್ಲಿ ದೊಡ್ಡ ಸವಾಲುಗಳನ್ನು ಎದುರಿಸಲಿದ್ದೇನೆ. ಏಷ್ಯನ್ ಕ್ರೀಡಾಕೂಟ ಸೇರಿದಂತೆ ಹಲವು ಪ್ರಮುಖ ಅಂತರ ರಾಷ್ಟ್ರೀಯ ಕೂಟಗಳಲ್ಲಿ ಎತ್ತರಕ್ಕೇರುವ ಮಹದಾಸೆ ಇರಿಸಿಕೊಂಡಿದ್ದೇನೆ' ಎಂದರು.ಅಥೆನ್ಸ್, ಬೀಜಿಂಗ್, ಲಂಡನ್ ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಂಡ ಅನುಭವಿ ವಿಕಾಸ್‌ಗೆ ಮುಂದಿನ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮಹದಾಸೆ ಇದೆ.ಪ್ರಸಕ್ತ ಕ್ರೀಡಾರಂಗದಲ್ಲಿ ಉದ್ದೀಪನಾ ಮದ್ದು ಸೇವನೆಯ ಹಗರಣ ಸಾಮಾನ್ಯವಾಗಿಬಿಟ್ಟಿದೆ. ಆದರೆ ಈವರೆಗೆ ಒಂದೇ ಒಂದು ಸಲ ಇಂತಹ ಪ್ರಕರಣದಲ್ಲಿ ಹೆಸರು ಕೆಡಿಸಿಕೊಳ್ಳದ ನಿಜವಾದ ಅಥ್ಲೀಟ್ ವಿಕಾಸ್ ಗೌಡ ಎನ್ನುವುದು ಭಾರತೀಯರೆಲ್ಲರೂ ಹೆಮ್ಮ ಪಡುವಂತಹ ಸಂಗತಿಯೇ ಆಗಿದೆ.ಹಣಕಾಸಿನ ಅಡಚಣೆಯ ನಡುವೆಯೂ ಸಾಧನೆ...

`ವಿಕಾಸ್ ಇದೀಗ ವಿಶ್ವ ಮಟ್ಟದ ಸಾಮರ್ಥ್ಯ ತೋರಿದ್ದಾನೆ, ನಿಜ. ಆದರೆ ಇದಕ್ಕಾಗಿ ಕಳೆದ ಒಂದೂವರೆ ದಶಕದಿಂದ ನಾನು ಅನುಭವಿಸಿದ ಆರ್ಥಿಕ ಸಮಸ್ಯೆ ಪದಗಳಿಗೆ ನಿಲುಕುವಂತಹದ್ದಲ್ಲ' ಎಂದು ವಿಕಾಸ್ ಗೌಡರ ತಂದೆ ಶಿವೇಗೌಡ ಅವರು `ಪ್ರಜಾವಾಣಿ' ಜತೆಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.ಹಾಸನ ಜಿಲ್ಲೆಯ ಶಿವೇಗೌಡರು ಮೂರು ದಶಕಗಳ ಹಿಂದೆ ಇಲ್ಲಿ ಅಥ್ಲೆಟಿಕ್ಸ್ ಕೋಚ್ ಆಗಿದ್ದರು. ನಂತರ ತಮ್ಮ ಪತ್ನಿ, ಇಬ್ಬರು ಪುತ್ರರ ಜತೆಗೆ ಅಮೆರಿಕಾಕ್ಕೆ ಹೋಗಿ ನೆಲೆಸಿದರು. ಅಲ್ಲಿ ತಮ್ಮ ಹಿರಿಯ ಪುತ್ರ ವಿಕಾಸ್‌ಗೆ ಡಿಸ್ಕಸ್ ಎಸೆತದ ತರಬೇತು ನೀಡಿದರು.

`ಪ್ರಸಕ್ತ ಋತು ಒಂದರಲ್ಲೇ ವಿಕಾಸ್ ಹತ್ತಾರು ದೇಶಗಳಲ್ಲಿ ತನ್ನ ಸಾಮರ್ಥ್ಯ ತೋರಿದ್ದಾನೆ. ಅಲ್ಲಿಗೆಲ್ಲಾ ಹೋಗಿ ಬರುವ ವೆಚ್ಚಗಳನ್ನೆಲ್ಲಾ ವೈಯಕ್ತಿಕವಾಗಿ ನಾನೇ ಭರಿಸಿದ್ದೇನೆ. ಈ ಋತುವಿನಲ್ಲಿ ವಿಕಾಸ್‌ಗಾಗಿ ಸುಮಾರು ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ಖರ್ಚಾಗಿದೆ' ಎಂದೂ ಅವರು ಹೇಳಿದರು.`ಕೇಂದ್ರ ಸರ್ಕಾರವಾಗಲೀ, ಭಾರತ ಅಥ್ಲೆಟಿಕ್ ಫೆಡರೇಷನ್ ಇರಲಿ, ಯಾರಿಂದಲೂ ವಿಕಾಸ್‌ಗೆ ಈ ಋತುವಿನಲ್ಲಿ ನಯಾಪೈಸೆ ಬಂದಿಲ್ಲ. ವಿಕಾಸ್ ಎತ್ತರದ ಸಾಮರ್ಥ್ಯ ತೋರಿದಾಗ ಎಲ್ಲರೂ ಇದು ಭಾರತದ ಹೆಮ್ಮೆ ಎಂದು ಬೀಗುತ್ತಾರೆ' ಎಂದೂ ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry