ಭಾನುವಾರ, ಏಪ್ರಿಲ್ 11, 2021
20 °C

ಮೂರುಸಾವಿರ ಮಠದ ಜಮೀನು ಕೆಎಲ್‌ಇಗೆ ಬಳುವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಇಲ್ಲಿಗೆ ಸಮೀಪದ ಬಿಡ್ನಾಳದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಮೂರುಸಾವಿರ ಮಠಕ್ಕೆ ಸೇರಿದ 24 ಎಕರೆ ಜಮೀನನ್ನು ಬೆಳಗಾವಿಯ ಕೆಎಲ್‌ಇ ಸಂಸ್ಥೆಗೆ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ನಿರ್ಮಾಣಕ್ಕಾಗಿ ಬಳುವಳಿಯಾಗಿ ನೀಡಲಾಗಿದೆ.ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಮೂರುಸಾವಿರ ಮಠದ ಹಿಂದಿನ ಪೀಠಾಧಿಪತಿ ಜಗದ್ಗುರು ಡಾ.ಗಂಗಾಧರ ರಾಜಯೋಗೀಂದ್ರ ಸ್ವಾಮೀಜಿ (ಮೂಜಗಂ) ಅವರ ಹೆಸರಿಡುವ ಷರತ್ತಿನೊಂದಿಗೆ ಕೆಎಲ್‌ಇ ಸಂಸ್ಥೆಗೆ ಈ ಜಮೀನು ಬಿಟ್ಟುಕೊಡಲಾಗಿದೆ.ಮಠದ ಉನ್ನತ ಸಮಿತಿ ಹಾಗೂ ಕೆಎಲ್‌ಇ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಸತತ ಚರ್ಚೆಗಳ ನಂತರ ಜೂನ್ ಕೊನೆಯ ವಾರದಲ್ಲಿ `ಬಳುವಳಿ ಒಪ್ಪಂದ~ದ (ಗಿಫ್ಟ್ ಡೀಡ್) ಪ್ರಕ್ರಿಯೆ ಅಂತಿಮಗೊಂಡಿರುವುದನ್ನು ಮಠದ ಉನ್ನತಾಧಿಕಾರ ಸಮಿತಿ ಸಂಚಾಲಕ ಮೋಹನ ಲಿಂಬಿಕಾಯಿ `ಪ್ರಜಾವಾಣಿ~ಗೆ ಖಚಿತಪಡಿಸಿದರು.ಮೂಜಗಂ ಅವರ ಕನಸು: ಮಠಕ್ಕೆ ಸೇರಿದ ಈ ಜಮೀನನ್ನು ಬಿಡ್ನಾಳದ ಅಸುಂಡಿ ಮನೆತನದವರು ಹಾಗೂ ಕೆಲವು ರೈತರು ಮೊದಲಿನಿಂದಲೂ ಗೇಣಿದಾರರಾಗಿ ಉಳುಮೆ ಮಾಡುತ್ತಿದ್ದರು. ಮೂಜಗಂ ಅವರು ಈ ಜಮೀನು ಬಿಡಿಸಿಕೊಳ್ಳಲು ಮುಂದಾಗಿದ್ದರು.ಆಗ ಉಂಟಾದ ವ್ಯಾಜ್ಯ ಮುಂದೆ ಭೂ ನ್ಯಾಯ ಮಂಡಳಿಯಲ್ಲಿ ಬಗೆಹರಿದು ಜಮೀನು 2000ನೇ ಇಸವಿಯಲ್ಲಿ ಮಠದ ಸುಪರ್ದಿಗೆ ಬಂದಿತ್ತು. ಅಲ್ಲೊಂದು ಸಾರ್ವಜನಿಕ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ನಿರ್ಮಿಸಲು ಸ್ವಾಮೀಜಿ ಉದ್ದೇಶಿಸಿದ್ದರು. ದೊಡ್ಡ ಮೊತ್ತ ಹೂಡಿಕೆ ಮಾಡಲು ಮಠಕ್ಕೆ ಶಕ್ತಿ ಇಲ್ಲದ ಕಾರಣ ತಮ್ಮ ಹೆಸರಿನಲ್ಲಿ ವೈದ್ಯಕೀಯ ಸಂಸ್ಥೆ ಕಟ್ಟಿಸುವ ಷರತ್ತಿನೊಂದಿಗೆ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಗೆ ದಾನವಾಗಿ ನೀಡಲು ನಿರ್ಧರಿಸಿದ್ದರು.ಮಠದ ಜಮೀನು ದಾನವಾಗಿ ನೀಡಲು ಧಾರ್ಮಿಕ-ದತ್ತಿ ಇಲಾಖೆಯ ಧರ್ಮದರ್ಶಿಯಿಂದ (ಆಯುಕ್ತರು) ಒಪ್ಪಿಗೆ ಪಡೆದು 2002ರಲ್ಲಿ ಕೆಎಲ್‌ಇ ಸಂಸ್ಥೆಯೊಂದಿಗೆ ಪ್ರಾಥಮಿಕ ಒಪ್ಪಂದ ಮೂಜಗಂ ಮಾಡಿಕೊಂಡಿದ್ದರು. ಅದೇ ವೇಳೆಗೆ ಮಠದಲ್ಲಿ ಹಿಂದಿನ ಕಿರಿಯ ಸ್ವಾಮೀಜಿಯೊಂದಿಗೆ ಉಂಟಾದ ಗಲಾಟೆಯ ಕಾರಣದಿಂದ ಆಗ ಒಪ್ಪಂದ ಅಂತಿಮ ಗೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ಲಿಂಬಿಕಾಯಿ ತಿಳಿಸಿದರು.

 

ಈ ಒಪ್ಪಂದದಲ್ಲಿ ಮಠಕ್ಕೆ ಲಾಭದ ಪ್ರಶ್ನೆಯೇ ಇಲ್ಲ. ಮೂಜಗಂ ಅವರ ಹೆಸರನ್ನು ಚಿರ ಸ್ಥಾಯಿಯಾಗಿಸಲು, ಬಿಡ್ನಾಳ ಭಾಗದಲ್ಲಿ ವೈದ್ಯ ಕೀಯ ಕಾಲೇಜು ಆರಂಭಿಸುವ ಮೂಲಕ ಸುತ್ತಲಿನ ಪ್ರದೇಶದ ಅಭಿವೃದ್ಧಿಗೆ ಅವಕಾಶ ಮಾಡಿಕೊಡ ಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ವೈದ್ಯಕೀಯ ಸೀಟು ನೀಡುವಾಗ ಮಠದ ಭಕ್ತರಿಗೆ ಆದ್ಯತೆ ನೀಡುವಂತೆ ಹಾಗೂ ವೈದ್ಯಕೀಯ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಮಠದ ಪ್ರತಿನಿಧಿಯೊಬ್ಬರಿಗೆ ಅವಕಾಶ ಮಾಡಿಕೊಡಬೇಕು ಎಂಬ ಷರತ್ತು ಗಳೊಂದಿಗೆ ಜಮೀನನ್ನು ಕೆಎಲ್‌ಇ ಸ್ವಾಧೀನಕ್ಕೆ ಕೊಡಲಾಗಿದೆ ಎಂದು ಲಿಂಬಿಕಾಯಿ ಹೇಳಿದರು.`ದೊಡ್ಡ ಅಜ್ಜ (ಡಾ. ಮೂಜಗಂ) ಅವರ ಆಸೆ ಯಂತೆ 100 ಹಾಸಿಗೆಗಳ ಆಸ್ಪತ್ರೆ ಹಾಗೂ ವೈದ್ಯ ಕೀಯ ಕಾಲೇಜು ನಿರ್ಮಿಸುತ್ತಿದ್ದೇವೆ~ ಎನ್ನುತ್ತಾರೆ ಕೆಎಲ್‌ಇ ಸಂಸ್ಥೆಯ  ಆಡಳಿತ ಮಂಡಳಿ ನಿರ್ದೇಶಕ ಶಂಕರಣ್ಣ ಮುನವಳ್ಳಿ. ಆರಂಭಿಕವಾಗಿ 100 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಬೆಳಗಾವಿಗಿಂತಲೂ ಅತ್ಯಾಧುನಿಕ ಕ್ಯಾಂಪಸ್ ನಿರ್ಮಾಣವಾಗಲಿದೆ ಎಂದು ಹೇಳುತ್ತಾರೆ.`ಉನ್ನತಾಧಿಕಾರ ಸಮಿತಿಗೆ ಹೊಣೆ~

ಕೆಎಲ್‌ಇಗೆ ಜಮೀನು ಬಳುವಳಿಯಾಗಿ ನೀಡಿರುವ ವಿಷಯದ ಕುರಿತು ಪ್ರತಿಕ್ರಿಯಿಸಿದ ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಅದನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದ ಮಠದ ಉನ್ನತಾಧಿಕಾರ ಸಮಿತಿ ನೋಡಿಕೊಳ್ಳುತ್ತಿದೆ. ಸಮಿತಿಯ ಸಂಚಾಲಕ  ಮೋಹನ ಲಿಂಬಿಕಾಯಿ ಅವರಿಗೆ ಸಮಗ್ರ ಮಾಹಿತಿ ಇದೆ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.