ಮೂರು ಉಪಗ್ರಹಗಳ ಯಶಸ್ವಿ ಉಡಾವಣೆ

7

ಮೂರು ಉಪಗ್ರಹಗಳ ಯಶಸ್ವಿ ಉಡಾವಣೆ

Published:
Updated:
ಮೂರು ಉಪಗ್ರಹಗಳ ಯಶಸ್ವಿ ಉಡಾವಣೆ

ಶ್ರೀಹರಿಕೋಟ (ಆಂಧ್ರ ಪ್ರದೇಶ) (ಪಿಟಿಐ): ಪಿಎಸ್‌ಎಲ್‌ವಿ ರಾಕೆಟ್ ಬಳಸಿಕೊಂಡು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಎರಡು ವಿದೇಶಿ ಉಪಗ್ರಹಗಳೂ ಸೇರಿದಂತೆ ಮೂರು ಉಪಗ್ರಹಗಳನ್ನು ಒಟ್ಟಿಗೆ ಅಂತರಿಕ್ಷದ ಕಕ್ಷೆಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.ಕಳೆದ ಡಿಸೆಂಬರ್ ತಿಂಗಳಿನಲ್ಲಿ ಜಿಎಸ್‌ಎಲ್‌ವಿ ಉಡಾವಣೆ ವಿಫಲವಾದ ನಂತರ ಇದೇ ಪ್ರಥಮ ಬಾರಿಗೆ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಇಸ್ರೊ ವಿಜ್ಞಾನಿಗಳಲ್ಲಿ ಭರವಸೆ ಮೂಡಿಸಿದೆ.ಬಾಹ್ಯಾಕಾಶ ಉಡಾವಣಾ ವಾಹಕ (ಪಿಎಸ್‌ಎಲ್‌ವಿ) ರಾಕೆಟ್ ಮೂಲಕ 18ನೇ ಬಾರಿಗೆ ಯಶಸ್ವಿಯಾಗಿ ಬೆಳಿಗ್ಗೆ 10.12 ಗಂಟೆಗೆ ಬಿಳಿ ಧೂಮವನ್ನು ಕಾರುತ್ತಾ ಉಪಗ್ರಹ ಮೇಲಕ್ಕೇರಿತು.

ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ವಿಜ್ಞಾನಿಗಳ ದಂಡೇ ನೆರೆದಿತ್ತು. ಉಪಗ್ರಹಗಳು ಉಡಾವಣೆಗೊಂಡ 18 ನಿಮಿಷಗಳ ಬಳಿಕ ಮೂರು ಉಪಗ್ರಹಗಳು 822 ಕಿ.ಮೀ ದೂರದ ಕಕ್ಷೆಗೆ ಯಶಸ್ವಿಯಾಗಿ ಸೇರಿದವು. ಉಡಾವಣಾ ಕೇಂದ್ರದಲ್ಲಿದ್ದ ಇಸ್ರೋ ಅಧ್ಯಕ್ಷ ಕೆ.ರಾಧಾಕೃಷ್ಣನ್, ರಾಕೆಟ್ ನಿಗದಿತ ಯೋಜನೆಯಂತೆ ಉಡಾವಣೆಯಾಗಿದ್ದು, ಉಪಗ್ರಹಗಳನ್ನು ನಿಖರವಾದ ಕಕ್ಷೆಯಲ್ಲಿ ಸೇರಿಸಲು ಯಶಸ್ವಿಯಾಗಿದೆ ಎಂದು ತಿಳಿಸಿದರು.ದೇಶದ ಸುಧಾರಿತ ದೂರ ನಿಯಂತ್ರಣ ಭೂಮಿ ನಿಗಾ ಉಪಗ್ರಹ 1,206 ಕೆ.ಜಿ ತೂಕದ ‘ರಿಸೋರ್ಸ್ ಸ್ಯಾಟ್-2’, ಭಾರತ-ರಷ್ಯ ಉಪಗ್ರಹ ಅಂತರಿಕ್ಷ ಅಧ್ಯಯನ ಉದ್ದೇಶದ  92 ಕೆ.ಜಿ ತೂಕದ ‘ಯೂತ್ ಸ್ಯಾಟ್’ ಮತ್ತು 106 ಕೆ.ಜಿ ತೂಕದ ‘ಎಕ್ಸ್-ಸ್ಯಾಟ್’ ಉಪಗ್ರಹಗಳನ್ನು ಯಶಸ್ವಿಯಾಗಿ ನಿಗದಿತ ಕಕ್ಷೆಯಲ್ಲಿ ಸೇರಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾದರು.ಎಕ್ಸ್-ಸ್ಯಾಟ್ ಉಪಗ್ರಹ ಸಿಂಗಪುರ ಮೂಲದ ನನ್‌ಯಾಂಗ್ ತಾಂತ್ರಿಕ ವಿವಿ ಅಭಿವೃದ್ಧಿ ಪಡಿಸಿದ್ದಾಗಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಜಿಎಸ್‌ಎಲ್‌ವಿ ಉಡಾವಣೆ ಸಂದರ್ಭದಲ್ಲಿ ವಿಫಲರಾಗಿದ್ದ ವಿಜ್ಞಾನಿಗಳು, ಇಸ್ರೊ ಅಧ್ಯಕ್ಷರು ಉಪಗ್ರಹಗಳ ಯಶಸ್ವಿ ಉಡಾವಣೆಯ ಬಗ್ಗೆ ಘೋಷಣೆ ಮಾಡುತ್ತಿದ್ದಂತೆಯೇ ನಿಯಂತ್ರಣ ಕೇಂದ್ರದಲ್ಲಿ ಹರ್ಷೋದ್ಗಾರ ಮಾಡಿದರು.‘ರಿಸೋರ್ಸ್ ಸ್ಯಾಟ್-2’ ಉಪಗ್ರಹದ ಕಾರ್ಯನಿರ್ವಹಣೆಯ ಅವಧಿ ಐದು ವರ್ಷಗಳದ್ದಾಗಿದ್ದು, ಈಗಾಗಲೇ ಅಂತರಿಕ್ಷದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ರಿಸೋರ್ಸ್ ಸ್ಯಾಟ್-1’ ಬದಲಿಗೆ ಉಡಾವಣೆ ಮಾಡಲಾಗಿದೆ. ‘ರಿಸೋರ್ಸ್ ಸ್ಯಾಟ್-1’ನ್ನು 2003ರಲ್ಲಿ ಉಡಾವಣೆ ಮಾಡಲಾಗಿತ್ತು. ಈಗ ಉಡಾವಣೆ ಮಾಡಿರುವ ‘ರಿಸೋರ್ಸ್ ಸ್ಯಾಟ್-2’ ನೈಸರ್ಗಿಕ ಸಂಪನ್ಮೂಲಗಳ ಅಧ್ಯಯನ ಮತ್ತು ನಿರ್ವಹಣೆ ಕಾರ್ಯವನ್ನು ಮಾಡಲಿದೆ.ಜಿಎಸ್‌ಎಲ್‌ವಿ ಎಫ್-06 ಸಂವಹನ ಉಪಗ್ರಹ ಜಿ-ಸ್ಯಾಟ್-5ಪಿ ಉಪಗ್ರಹವನ್ನು ಅಂತರಿಕ್ಷಕ್ಕೆ ಕಳುಹಿಸುವ ಸಂದರ್ಭದಲ್ಲಿ ಬಂಗಾಳ ಕೊಲ್ಲಿಯಲ್ಲಿ ಸ್ಫೋಟವಾಗಿತ್ತು.

ಇದಕ್ಕೂ ಮುನ್ನ 2010ರ ಏಪ್ರಿಲ್‌ನಲ್ಲಿ ಜಿಎಸ್‌ಎಲ್‌ವಿ-ಡಿ3 ಜಿ-ಸ್ಯಾಟ್-4ರನ್ನು ಹೊತ್ತೊಯ್ಯುವ ಸಂದರ್ಭದಲ್ಲಿಯೂ ಸಹ ವಿಫಲವಾಗಿದ್ದು, ಬಾಹ್ಯಾಕಾಶ ಯೋಜನೆಗಳಿಗೆ ಹಿನ್ನಡೆಯಾಗಿತ್ತು.ಆದರೆ ಬುಧವಾರ ಪಿಎಸ್‌ಎಲ್‌ವಿ ರಾಕೆಟ್ 17ನೇ ಬಾರಿಗೆ ಯಶಸ್ವಿಯಾಗಿ ಉಪಗ್ರಹಗಳನ್ನು ಹೊತ್ತೊಯ್ದಿದೆ. ಆದರೆ ಈ ರಾಕೆಟ್ ತನ್ನ ಪ್ರಥಮ ಯತ್ನದಲ್ಲಿ 1993ರಲ್ಲಿ ವಿಫಲವಾಗಿತ್ತು.

ಎರಡು ವಿದೇಶಿ ಉಪಗ್ರಹಗಳನ್ನು ಸೇರಿ ಮೂರು ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಪಿಎಸ್‌ಎಲ್‌ವಿ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ನಂಬಿಕೆಗೆ ಅರ್ಹವಾಗಿದೆ ಎಂದೂ ರಾಧಾಕೃಷ್ಣನ್ ಹೇಳಿದರು.‘ಇಸ್ರೊ ಸಮುದಾಯದಲ್ಲಿ ಇದು ಸುವರ್ಣ ಸಂದರ್ಭ. ತಮ್ಮ ಗುರಿಯನ್ನು ಸಾಧಿಸುವಲ್ಲಿ ಇಸ್ರೊ ವಿಜ್ಞಾನಿಗಳು ಪಟ್ಟ ಶ್ರಮ ಸಾರ್ಥಕವಾಗಿದೆ. ತನ್ನ ಮೇಲೆ ನಂಬಿಕೆ ಇಟ್ಟ ದೇಶದ ಜನರಲ್ಲಿ ವಿಶ್ವಾಸ ಮೂಡಿಸಿದೆ’ ಎಂದು ಯೋಜನೆಯ ನಿರ್ದೇಶಕ ಪಿ.ಕುನ್ಹಿಕೃಷ್ಣನ್ ಹರ್ಷ ವ್ಯಕ್ತಪಡಿಸಿದರು.‘ರಿಸೋರ್ಸ್ ಸ್ಯಾಟ್-2’ ಮೂರು ಅತ್ಯುತ್ತಮ ಕ್ಯಾಮೆರಾಗಳನ್ನು ಹೊಂದಿದ್ದು, ಈ ಕ್ಯಾಮೆರಾಗಳು ಸೆರೆ ಹಿಡಿಯುವ ಚಿತ್ರಗಳಿಂದ ಭೂಮಿಯಲ್ಲಿ ಬೆಳೆದ ಪೈರಿನ ಸ್ಥಿತಿಗತಿ, ಅರಣ್ಯ ಮತ್ತು ಜಲಾಶಯಗಳಲ್ಲಿನ ನೀರಿನ ಮಟ್ಟವನ್ನು ಅಳೆಯಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry