ಭಾನುವಾರ, ಏಪ್ರಿಲ್ 18, 2021
31 °C

ಮೂರು ಎಕರೆಯಲ್ಲಿ ಬಣ್ಣ ಬಣ್ಣದ ಹೂವುಗಳು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಆ ಪುಷ್ಪ ವನ ಪ್ರವೇಶಿಸತ್ತಲೇ ಒಂದೇ ತರಹದ ಬಣ್ಣ ಬಣ್ಣದ ಹೂವುಗಳು ಕಣ್ಣನ್ನು ಬಾಚಿ ತಬ್ಬಿಕೊಳ್ಳುತ್ತವೆ. ಒಂದು ಕ್ಷಣ ಈ ವನದಲ್ಲಿ ಮನಷ್ಯರೂ ದುಂಬಿಗಳಂತಾಗುತ್ತಾರೆ. ಬಣ್ಣದ ಆ ಹೂವುಗಳನ್ನು ಮುಟ್ಟಿ ನೋಡಿ ಆನಂದಿಸುತ್ತಾರೆ...! ಅದು ವಿಜಯಪುರದ ಪುಷ್ಪೋದ್ಯಮಿ ಲಕ್ಷ್ಮಿನಾರಾಯಣ ಅವರ ಹೂ ತೋಟ. ಆ ತೋಟದಲ್ಲಿ ವಿವಿಧ ಬಗೆಯ ಅಲಂಕಾರಿ ಪುಷ್ಪಗಳನ್ನು ಬೆಳೆಯಲಾಗುತ್ತಿದೆ. ನೀರಿನ ಕೊರತೆ, ಅಲ್ಪ ಜಮೀನು.. ಹೀಗೆ ಹಲವು ಸಮಸ್ಯೆಗಳ ನಡುವೆಯೂ ಇವರ ತೋಟದಲ್ಲಿ ಬಣ್ಣ ಬಣ್ಣದ ಹೂವುಗಳು ಅರಳಿವೆ.ಇದು ಅನೇಕ ವರ್ಷಗಳ ಪ್ರಯತ್ನ. ಆರಂಭದಲ್ಲಿ ಗುಲಾಬಿ ಬೆಳೆದ ಲಕ್ಷ್ಮಿನಾರಾಯಣ, ಅದರಲ್ಲಿ ಹೊಸ ತಳಿಗಳ ಉತ್ಪಾದನೆಗೆ ಮುಂದಾದರು. ಈ ಸಾಧನೆ ನಂತರ ಗ್ಲಾಡಿಯೋಲಸ್ ಅಲಂಕಾರಿಕ ಪುಷ್ಪ ಕೃಷಿಗೆ ಮುಂದಾದರು. ಪ್ರಸ್ತುತ ತಮ್ಮ ಮೂರು ಎಕರೆ ಜಮೀನಿನಲ್ಲಿ ಗ್ಲಾಡಿಯೋಲಸ್ ತಳಿಗಳನ್ನು ಸ್ವ ಪರಾಗಸ್ಪರ್ಶದ ಮೂಲಕ ಬೆಳೆಸುತ್ತಿದ್ದಾರೆ. ಅಮೇರಿಕನ್ ಗ್ಲಾಡಿವಿಲ್ಲೆ ಕೌನ್ಸಿಲ್‌ನ ಸದಸ್ಯರಾಗಿದ್ದಾರೆ.ಪ್ರತಿ ಗುಂಟೆಗೆ ಸುಮಾರು 1200 ರಿಂದ 1300 ಗೆಡ್ಡೆಗಳನ್ನು ನಾಟಿ ಮಾಡಿದೆ. ತೋಟಕ್ಕೆ ಸಂಪೂರ್ಣ ಹನಿನೀರಾವರಿ ಪದ್ಧತಿ ಮೂಲಕ ನೀರು ಕೊಡುತ್ತಿದ್ದೇವೆ. ನಾಟಿಯ ಆರಂಭದಲ್ಲಿ ಡಿಎಪಿ ಗೊಬ್ಬರ ಕೊಟ್ಟಿದೆ. ನಂತರ 15 ಆಲ್ ಗೊಬ್ಬರ ಬಳಸಲಾಗುತ್ತಿದ್ದಾರೆ. ‘ಪ್ರಸ್ತುತ ಮ್ಯುಟೇಶನ್ ಮೂಲಕ ವಿವಿಧ ಬಣ್ಣದ ಹೊಸ ಹೂವಿನ ತಳಿಗಳನ್ನು ಉತ್ಪಾದಿಸುತ್ತಿದ್ದೇವೆ. ಇದು ರಾಜ್ಯದಲ್ಲೇ ಮೊದಲ ಪ್ರಯತ್ನ’ ಎನ್ನುತ್ತಾರೆ ಲಕ್ಷ್ಮಿನಾರಾಯಣ  ಪ್ರಸ್ತುತ ಇವರ ತೋಟದಲ್ಲಿ ಎಲೆಕೋನಿಯಾ ಮತ್ತು ಉಪತಳಿಗಳು, ಕೆರಿಬಿಯಾ, ವಗ್ನೇರಿಯಾ ಟರ್ಬೊ, ಕೆಂಪು, ಬಿಳಿ, ಪಿಂಕ್ ಮತ್ತು ಕಪ್ಪು ಬಣ್ಣದ ಟಾರ್ಚ್ ಜಿಂಜರ್, ಇಂಡೋನೇಶಿಯಾ ವ್ಯಾಕ್ಸ್ ಜಿಂಜರ್, ಶಾಂಪೂ ಜಿಂಜರ್,  ಹಾಗೂ ಟುಲಿಪ್ ಟಾರ್ಚ್ ಜಿಂಜರ್‌ಗಳ ತಳಿ, ಬೀಹಾಯ್ ಲ್ಯಾಪ್‌ಸ್ಟಾರ್-1 ಮತ್ತು 3 ತಳಿಯ ಹೂವು ಗಳಿವೆ.ಥೇಟ್ ಹಕ್ಕಿಯಂತೆ ಕಾಣುವ ಬರ್ಡ್ ಆಫ್ ಪ್ಯಾರಾಡೈಸ್, ಮುದುಡಿದಂತಿರುವ ಅಸ್ಪಾರಾಗಸ್ ಮಾರಿಕ್ಲಾಡಸ್, ಮುದ್ದು ಮುಖದ ಗೋಲ್ಡನ್ ಮೆಲಲಿಕಾ, ಸಿಪ್ರಸ್, ಡ್ರೆಸ್ಸೇನಿಯಾ, ಪುಟ್ಟ ಚಿಟ್ಟೆಯ ಸಿಂಗಪೂರ್ ಚೆರ್ರಿ, ಅಲಂಕಾರಿಕ ಪೈನಾಪಲ್, ಪಿಟ್ಸ್‌ಸ್ಪರ್ನ್‌, ಮಯೂರಿಯಂತಹ ಅಲಂಕಾರಿಕ ಬಳ್ಳಿ, ಎಲೆ, ಗಿಡಗಳನ್ನು ತೋಟದಲ್ಲಿ ಬೆಳೆದಿದ್ದಾರೆ. ಕೃತಕ ಪರಾಗಸ್ಪರ್ಶದ ಮೂಲಕ ಹೊಸ ತಳಿಗಳನ್ನು ಉತ್ಪಾದಿಸುವ ಲಕ್ಷ್ಮಿನಾರಾಯಣ್ ಅವರು, ಕರೇಬಿಯಾ ಕವಚ್ ಮತ್ತು ಲ್ಯಾಪ್‌ಸ್ಟಾರ್ ಬಳಸಿ ‘ಕೈನಾಟ’ ಎಂಬ ಹೂವಿನ ತಳಿಯನ್ನು ಅನುಶೋಧಿಸಿದ್ದಾರೆ. ಇದು ಪುಷ್ಪ ತಳಿ ಉತ್ಪಾದನೆಯಲ್ಲೇ ಪ್ರಥಮ ಸಂಶೋಧನೆಯಾಗಿದೆ. ಗ್ಲಾಡಿಯೋಲಸ್‌ಗಳಲ್ಲಿ 15 ಕ್ಕೂ ಹೆಚ್ಚು ಬಗೆ ಹೂವುಗಳನ್ನು ಬೆಳದಿರುವ ಇವರು,  ‘ವಿದೇಶಗಳಲ್ಲಿ ಪ್ರತಿ ಪುಷ್ಪದ ಹೊಸ ಹೊಸ ತಳಿ ಸಂಶೋಧನೆಗೂ ಪ್ರತ್ಯೇಕ ಕೌನ್ಸಿಲ್ ಇದೆ. ಆದರೆ ನಮ್ಮಲ್ಲಿ ಅಂಥ ವ್ಯವಸ್ಥೆಗಳಿಲ್ಲ’ ಎಂದು ವಿಷಾದಿಸುತ್ತಾರೆ.ಇತ್ತೀಚೆಗೆ ಅಂತರ್ಜಲ ಮಟ್ಟ ಕುಸಿದಿದೆ. ನೀರಿನ ಕೊರತೆ ಹೆಚ್ಚಾಗಿದೆ. ರಾತ್ರಿ 1 ಗಂಟೆಗೇ ಮಾರುಕಟ್ಟೆಗೆ ಹೂವುಗಳನ್ನು ಸರಬರಾಜು ಮಾಡಬೇಕು. ಆದರೆ ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲ. ಸ್ವಂತ ವಾಹನದ ವ್ಯವಸ್ಥೆ ಮಾಡಿಕೊಳ್ಳಲು ಆರ್ಥಿಕ ಮುಗ್ಗಟ್ಟು ಎಂದು ತಮ್ಮ ಉದ್ಯಮಕ್ಕಿರುವ ತೊಡಕುಗಳನ್ನು ಲಕ್ಷ್ಮಿನಾರಾಯಣ ವಿವರಿಸುತ್ತಾರೆ. ಇಂಥ ಸವಾಲುಗಳ ನಡುವೆಯೂ ಹೂವುಗಳ ಮಾರಾಟ ಜೋರಾಗೇ ಇದೆ. ಪ್ರಸ್ತುತ ಇವರ ತೋಟದ ಹೂ ಕೊಳ್ಳಲು ಕೇರಳ, ಮುಂಬೈ, ದೆಹಲಿಯಿಂದ ರಫ್ತುದಾರರು ಬರುತ್ತಿದ್ದಾರೆ.ಇಂಥ ಬಗೆಬಗೆಯ ಹೂಗಳನ್ನು ಉತ್ಪಾದಿಸಿದ ಕೀರ್ತಿ ಸಸ್ಯವಿಜ್ಞಾನಿಗಳಿಗೆ ತಲುಪಬೇಕು ಎಂದು ಸ್ಮರಿಸುವ ಅವರು, ಹೂವಿನ ವ್ಯಾಪಾರ ಒಂದೇ ಸಮನಾಗಿರುವುದಿಲ್ಲ. ಒಂದೊಂದು ಸೀಸನ್‌ನಲ್ಲಿ ಮಾರುಕಟ್ಟೆ ಕ್ಷೀಣಿಸಿರುತ್ತದೆ. ಆದರೂ ಹೂಡಿದ ಬಂಡವಾಳ ನಷ್ಟವಾಗುವುದಿಲ್ಲ ಎನ್ನುತ್ತಾರೆ ಲಕ್ಷ್ಮಿನಾರಾಯಣ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.