ಸೋಮವಾರ, ಜೂನ್ 21, 2021
27 °C

ಮೂರು ಕಡೆ ಸರ ಕಿತ್ತು ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ವೈಯಾಲಿಕಾವಲ್ ಮತ್ತು ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ದುಷ್ಕರ್ಮಿಗಳು ಮಹಿಳೆಯರ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರಗಳನ್ನು ದೋಚಿದ್ದಾರೆ.ಕಿಡಿಗೇಡಿಯೊಬ್ಬ ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ವೈಯಾಲಿಕಾವಲ್ ಎರಡನೇ ಅಡ್ಡರಸ್ತೆಯಲ್ಲಿ ನಡೆದಿದೆ.ಸುಶೀಲಾ ಸರ ಕಳೆದುಕೊಂಡವರು. ಅವರು ಬೆಳಿಗ್ಗೆ 6.20ರ ಸುಮಾರಿಗೆ ಮನೆಯ ಮುಂದೆ ನಿಂತಿದ್ದ ಸಂದರ್ಭದಲ್ಲಿ ದುಷ್ಕರ್ಮಿಯೊಬ್ಬ ಬೈಕ್‌ನಲ್ಲಿ ಬಂದು 30 ಗ್ರಾಂ ತೂಕದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.ವೈಯಾಲಿಕಾವಲ್‌ನ ಕಾಡು ಮಲ್ಲೇಶ್ವರ ದೇವಸ್ಥಾನ ರಸ್ತೆಯಲ್ಲಿ ಬೆಳಿಗ್ಗೆ 6.30ರ ಸುಮಾರಿಗೆ ನಡೆದ ಮತ್ತೊಂದು ಘಟನೆಯಲ್ಲಿ ಭಾಗ್ಯ ಎಂಬುವರ ಸರವನ್ನು ದೋಚಲಾಗಿದೆ.ಅವರು ಮನೆ ಸಮೀಪವೇ ಇರುವ ಕಸದ ತೊಟ್ಟಿಗೆ ಕಸ ಸುರಿದು ವಾಪಸ್ ಬರುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಹಿಂಬಾಲಿಸಿ ಬಂದು 30 ಗ್ರಾಂ ತೂಕದ ಸರ ದೋಚಿದ್ದಾರೆ.ಒಂದೇ ಗುಂಪಿನ ಸದಸ್ಯರು ಹತ್ತು ನಿಮಿಷಗಳ ಅಂತರದಲ್ಲಿ ಈ ಎರಡು ಸ್ಥಳಗಳಲ್ಲೂ ಸರ ದೋಚಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ವೈಯಾಲಿಕಾವಲ್ ಠಾಣೆಯಲ್ಲಿ ಎರಡೂ ಪ್ರಕರಣಗಳು ದಾಖಲಾಗಿವೆ.

ಆಡುಗೋಡಿ: ಮನೆ ಬಳಿ ರಂಗೋಲಿ ಹಾಕುತ್ತಿದ್ದ ಮಹಿಳೆಯ ಸರವನ್ನು ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಆಡುಗೋಡಿಯ ನಂಜಪ್ಪಲೇಔಟ್‌ನಲ್ಲಿ ನಡೆದಿದೆ.ನಂಜಪ್ಪಲೇಔಟ್ ನಾಲ್ಕನೇ ಅಡ್ಡರಸ್ತೆ ನಿವಾಸಿ ರತ್ನಮ್ಮ ಎಂಬುವರು ಈ ಸಂಬಂಧ ದೂರು ಕೊಟ್ಟಿದ್ದಾರೆ.   ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ. ಸರದ ಮೌಲ್ಯ ಸುಮಾರು ಎರಡು ಲಕ್ಷ ರೂಪಾಯಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಡುಗೋಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಡ್ರಾಪ್ ಸೋಗಿನಲ್ಲಿ ಹಲ್ಲೆ; ದರೋಡೆಡ್ರಾಪ್ ನೀಡುವ ನೆಪದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರನ್ನು ಕಾರಿನಲ್ಲಿ ಕರೆದೊಯ್ದ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ ಸುಮಾರು ರೂ 1.20 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ವಜ್ರದ ಉಂಗುರ ದರೋಡೆ ಮಾಡಿರುವ ಘಟನೆ ಜಯನಗರದಲ್ಲಿ ಗುರುವಾರ ರಾತ್ರಿ ನಡೆದಿದೆ.ಎಲೆಕ್ಟ್ರಾನಿಕ್‌ಸಿಟಿ ಸಮೀಪದ ನೀಲಾದ್ರಿನಗರ ನಿವಾಸಿ ದುರ್ಗಪ್ರಸಾದ್ ದರೋಡೆಗೆ ಒಳಗಾದವರು. ಕೆಲಸದ ನಿಮಿತ್ತ ಜೆ.ಪಿ.ನಗರಕ್ಕೆ ಬಂದಿದ್ದ ಅವರು ಜಯನಗರ ಒಂಬತ್ತನೇ ಬ್ಲಾಕ್‌ನ 41ನೇ ಅಡ್ಡರಸ್ತೆಯ ಬಳಿ ಬಿಎಂಟಿಸಿ ಬಸ್‌ಗೆ ಕಾಯುತ್ತಾ ನಿಂತಿದ್ದರು. ಅದೇ ವೇಳೆಗೆ ಅಲ್ಲಿಗೆ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಡ್ರಾಪ್ ನೀಡುವುದಾಗಿ ಹೇಳಿ ಅವರನ್ನು ವಾಹನಕ್ಕೆ ಹತ್ತಿಸಿಕೊಂಡರು.

 

ನಂತರ ಸ್ವಲ್ಪ ದೂರ ಕರೆದೊಯ್ದು ಹಲ್ಲೆ ನಡೆಸಿ ಚಿನ್ನದ ಸರ ಮತ್ತು ವಜ್ರದ ಉಂಗುರ ಕಿತ್ತುಕೊಂಡು ಕಾರಿನಿಂದ ಕೆಳಗಿಳಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ತಿಲಕ್‌ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.