ಶುಕ್ರವಾರ, ಆಗಸ್ಟ್ 23, 2019
22 °C
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪ ಚುನಾವಣೆ

ಮೂರು ದಶಕಗಳ ಹೋರಾಟಕ್ಕೆ ಈಗ ಇನ್ನಷ್ಟು ರಂಗು

Published:
Updated:

ರಾಮನಗರ: ಜಿಲ್ಲೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಕಾಂಗ್ರೆಸ್  ಶಾಸಕ ಡಿ.ಕೆ.ಶಿವಕುಮಾರ್ ಕುಟುಂಬದ ನಡುವೆ ರಾಜಕೀಯ ಹೋರಾಟ ಮೂರು ದಶಕದಿಂದ ನಡೆದು ಬಂದಿದ್ದು, ಅದರ ಮುಂದುವರೆದ ಭಾಗ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಂಡು ಬರಲಿದೆ.ಈ ಎರಡೂ ಕುಟುಂಬಗಳ ನಡುವೆ ಚುನಾವಣೆ ಇರಲಿ, ಇಲ್ಲದಿರಲಿ ಒಂದಿಲ್ಲೊಂದು ಬಗೆಯ ಹೋರಾಟ, ತಿಕ್ಕಾಟ ನಿರಂತರವಾಗಿ ನಡೆದುಕೊಂಡು ಬಂದಿದೆ. ಒಬ್ಬರನ್ನು ತುಳಿಯಲು ಮತ್ತೊಬ್ಬರು ಸತತ ಪ್ರಯತ್ನ ನಡೆಸಿಕೊಂಡು ಬಂದಿದ್ದಾರೆ. ಇದರಲ್ಲಿ ಕೆಲವೊಮ್ಮೆ ದೇವೇಗೌಡರ ಕುಟುಂಬಕ್ಕೆ ಮೇಲುಗೈ ಸಿಕ್ಕಿದರೆ, ಕೆಲವೊಮ್ಮೆ ಶಿವಕುಮಾರ್ ಕುಟುಂಬಕ್ಕೆ ಮೇಲುಗೈ ದೊರೆತಿದೆ.ಈ ಕುಟುಂಬಗಳ ವೈರತ್ವ ಹೇಗಿದೆ ಎಂದರೆ ಎದುರಿಗೆ ಬಂದರೂ ಒಬ್ಬರನ್ನೊಬ್ಬರು ನೋಡುವುದಿಲ್ಲ. ಮುಖದಲ್ಲಿ ನಗು ಕಾಣುವುದಿಲ್ಲ. ಬದಲಿಗೆ ದ್ವೇಷ, ಆಕ್ರೋಶ ಉಕ್ಕುವಂತೆ ಎರಡೂ ಕುಟುಂಬದವರು ಮುಖವನ್ನು ಗಂಟಿಕ್ಕಿಕೊಂಡಿರುವುದು ಸಾಮಾನ್ಯವಾಗಿದೆ.ಹಾಸನದಲ್ಲಿ ಸೋತಾಗ ಅಥವಾ ರಾಜಕೀಯವಾಗಿ ಪುನರ್ಜನ್ಮ ಪಡೆಯಬೇಕು ಎಂದಾಗೆಲ್ಲ ದೇವೇಗೌಡರು ಕನಕಪುರದತ್ತ ಮುಖ ಮಾಡುತ್ತಾರೆ. ಅವರಿಗೆ ಸಮರ್ಥ ಎದುರಾಳಿಯಾಗಿ ಶಿವಕುಮಾರ್ ಕುಟುಂಬ ಪೈಪೋಟಿ ನೀಡುವ ಮೂಲಕ ರಾಜಕೀಯ ಅಸ್ತಿತ್ವ ಉಳಿಸಿಕೊಂಡು ಬಂದಿದೆ.1985ರಿಂದ ಹೋರಾಟ ಆರಂಭ: ಈ ಎರಡೂ ಕುಟುಂಬಗಳ ನಡುವಣ ರಾಜಕೀಯ ಹೋರಾಟ 1985ರಿಂದ ಆರಂಭವಾಗಿದೆ. ಆಗ ಸಾತನೂರು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ದೇವೇಗೌಡರು ಸ್ಪರ್ಧಿಸಿದ್ದರು. ಅವರಿಗೆ ಎದುರಾಗಿ ಶಿವಕುಮಾರ ಕಣಕ್ಕಿಳಿದಿದ್ದರು. ಇದರಲ್ಲಿ ದೇವೇಗೌಡರು ಜಯ ಸಾಧಿಸಿದರು.ಆದರೆ, ದೇವೇಗೌಡರು ಆಗ ಹೊಳೆನರಸಿಪುರ ಕ್ಷೇತ್ರದಲ್ಲೂ ಜಯಗಳಿಸಿದ್ದರಿಂದ, ಅವರು ಹೊಳೆನರಸಿಪುರ ಕ್ಷೇತ್ರ  ಉಳಿಸಿಕೊಂಡು, ಸಾತನೂರು ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರಿಂದ ಎದುರಾದ ಉಪ ಚುನಾವಣೆಯಲ್ಲಿ ಸ್ಪರ್ಧಿದಿಸಿದ ಡಿ.ಕೆ.ಶಿವಕುಮಾರ್ ಶಾಸಕರಾಗಿ ಆಯ್ಕೆಯಾದರು.ಈ ರಾಜಕೀಯ ವೈರತ್ವ 1989ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಎದುರಾಯಿತು. ಆಗ ದೇವೇಗೌಡ ಮತ್ತು ಶಿವಕುಮಾರ್ ಪ್ರತಿ ಸ್ಪರ್ಧಿಗಳಾಗಿ ಚುನಾವಣೆ ಎದುರಿಸಿದರು. ಅದರಲ್ಲಿಯೂ ದೇವೇಗೌರಿಗೆ ಜಯ ದೊರೆಯಿತು. 1994ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಶಿವಕುಮಾರ್ ಅವರು ದೇವೇಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸೋಲಿಸಿ ಹಳೆ ಸೇಡನ್ನು ತೀರಿಸಿಕೊಂಡರು. ಆದರೆ ರಾಜಕೀಯ ವೈರತ್ವ ಅಲ್ಲಿಗೆ ಮುಗಿಯಲಿಲ್ಲ.ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ದೊರೆಯುವ ಅವಕಾಶವನ್ನು ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ತಪ್ಪಿಸಿದರು ಎಂಬ ಅಸಮಾಧಾನವನ್ನು ಶಿವಕುಮಾರ್ ಅವರು ಕೆಲ ವೇದಿಕೆಗಳಲ್ಲಿ ಬಹಿರಂಗವಾಗಿಯೇ ತೋಡಿಕೊಂಡಿದ್ದಾರೆ. ಇದಲ್ಲದೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ತೆಗೆದುಕೊಂಡಿದ್ದ ಕೆಲಸ ನಿರ್ಧಾರಗಳು ಶಿವಕುಮಾರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದ್ದವು.

ಮುಖ್ಯಮಂತ್ರಿಯಾಗಿದ್ದಾಗ ವೇದಿಕೆಯೊಂದರಲ್ಲಿ ಕುಮಾರಸ್ವಾಮಿ ಆಡಿದ್ದ ಮಾತು ದೊಡ್ಡ ಪ್ರಮಾಣದಲ್ಲಿ ಎರಡೂ ಕುಟುಂಬಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು.ಸಾತನೂರಿನಲ್ಲಿ ಬಿಗಿ ಭದ್ರತೆಯಿಂದ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿ ಅವರು ಶಿವಕುಮಾರ್ ಮತ್ತು ಅವರ ತಾಯಿ ಸಮ್ಮುಖದಲ್ಲಿಯೇ ಕ್ಷಮೆ ಕೋರಿದ್ದರು. ಆದರೆ, ಅಲ್ಲಿಗೆ ಈ ಎರಡೂ ಕುಟುಂಬದ ರಾಜಕೀಯ ದ್ವೇಷ ಕೊನೆಯಾಗಲಿಲ್ಲ. ಆಗಾಗ ಎರಡೂ ಕುಟುಂಬದವರ ನಡುವೆ ವಾಕ್ ಸಮರ ನಡೆದೇ ಇದೆ.ಇದೀಗ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಎದುರಾಗಿರುವ ಉಪ ಚುನಾವಣೆಯಲ್ಲಿ ದೇವೇಗೌಡರ ಸೊಸೆ, ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರೆ, ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರು ಕಾಂಗ್ರೆಸ್‌ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದ ಈ ಎರಡೂ ಕುಟುಂಬಗಳ ನಡುವಿನ ರಾಜಕೀಯ ಹೋರಾಟ ಮತ್ತಷ್ಟು ಕುತೂಹಲ ಕೆರಳಿಸಿದೆ.ಡಿ.ಕೆ.ಸುರೇಶ್‌ಗೆ ಮೊದಲ ಚುನಾವಣೆ

ಡಿ.ಕೆ.ಸುರೇಶ್ ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿದೆ. ಶಿವಕುಮಾರ್ ಅವರ ಪ್ರತಿ ಚುನಾವಣೆಯಲ್ಲೂ ಇಡೀ ಕ್ಷೇತ್ರದ ಉಸ್ತುವಾರಿಯನ್ನು ಇವರೇ ವಹಿಸಿಕೊಂಡು ಅಣ್ಣನ ಗೆಲುವಿಗೆ ಶ್ರಮಿಸುತ್ತಿದ್ದರು.ಸಮಾಜ ಸೇವೆಯಲ್ಲಿ ತೊಡಗಿರುವ ಸುರೇಶ್, ಕನಕಪುರದ ಯಾವುದೇ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಳ್ಳುವುದಿಲ್ಲ. ತೆರೆಯ ಮರೆಯಲ್ಲಿದ್ದು, ಕಾರ್ಯಕ್ರಮ ಆಯೋಜಿಸುವ, ಸಂಘಟಿಸುವ ಮೂಲಕ ಯಶಸ್ವಿಯಾಗುವಂತೆ ಮಾಡುತ್ತಾರೆ. ಅಣ್ಣನ ಕೈ ಬಲ ಪಡಿಸುವ ಕಾಯಕದಲ್ಲಿ ತೊಡಗಿದ್ದ ಅವರಿಗೆ ಇದೀಗ ಲೋಕಸಭಾ ಉಪ ಚುನಾವಣೆ ಎದುರಿಸಬೇಕಾಗಿದೆ.`ಡಿ.ಕೆ.ಶಿವಕುಮಾರ್ ಗೆಲುವಿನಲ್ಲಿ ಸುರೇಶ್ ಪಾತ್ರ ಶೇ 75ರಷ್ಟಿದ್ದರೆ, ಶಿವಕುಮಾರ್ ಪಾತ್ರ ಶೇ 25 ಮಾತ್ರ' ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಅವರು ರಾಮನಗರದಲ್ಲಿ ಶನಿವಾರ ಹೇಳಿರುವುದು ಸುರೇಶ್ ಅವರ ಸಂಘಟನಾ ಕೌಶಲಕ್ಕೆ ಕನ್ನಡಿ ಹಿಡಿಯುತ್ತದೆ.

Post Comments (+)