ಶುಕ್ರವಾರ, ಮೇ 7, 2021
22 °C

ಮೂರು ದಶಕದ ನಂತರ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ತಮಗೆ ದೊರೆಯಬೇಕಿದ್ದ ವೇತನ ಹೆಚ್ಚಳ ತಡೆ ಹಿಡಿದ ಭಾರತೀಯ ಆಹಾರ ನಿಗಮದ ವಿರುದ್ಧ ಅದರ ಉದ್ಯೋಗಿಯೊಬ್ಬರು ಸುಮಾರು 30 ವರ್ಷಗಳಿಂದ ಅವಿರತವಾಗಿ ನಡೆಸುತ್ತಾ ಬಂದ ಕಾನೂನು ಹೋರಾಟದಲ್ಲಿ ಕೊನೆಗೂ ಜಯ ಗಳಿಸಿದ್ದಾರೆ.ನವದೆಹಲಿಯ ಭಾರತೀಯ ಆಹಾರ ನಿಗಮದ ಶಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದ ಎನ್.ಪಿ.ಸಿಂಗ್ ಎಂಬುವವರು 1988ರಲ್ಲಿ ತಮ್ಮದೇ ಇಲಾಖೆಯ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಸಿಂಗ್ ಪರ ತೀರ್ಪು ನೀಡಿದ್ದು, ತಡೆಹಿಡಿದ ವೇತನ ಹೆಚ್ಚಳವನ್ನು ನೀಡುವಂತೆ ಆಹಾರ ನಿಗಮಕ್ಕೆ ಸೂಚಿಸಿದೆ.ಮೂರು ದಶಕದ ಕಥೆ:   1981ರಲ್ಲಿ ಎನ್.ಪಿ.ಸಿಂಗ್ ವಿರುದ್ಧ ಅವರ ಸಹೋದ್ಯೋಗಿಯೊಬ್ಬರು ದೂರು ದಾಖಲಿಸಿದ್ದರು. ತಮ್ಮ ಕಾರ್ಮಿಕರ ಭವಿಷ್ಯ ನಿಧಿ ದಾಖಲೆಗಳನ್ನು ಸಿಂಗ್ ಅಕ್ರಮವಾಗಿ ತಿದ್ದುಪಡಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಈ ಕುರಿತು ನಡೆದ ಇಲಾಖಾ ಆಂತರಿಕ ತನಿಖೆ ವರದಿಯ ಶಿಫಾರಸಿನ ಮೇರೆಗೆ ಸಿಂಗ್ ಮೇಲಿನ ಆರೋಪ ಸಾಬೀತಾಗಿತ್ತು. ಹೀಗಾಗಿ ಅವರ 2 ವೇತನ ಹೆಚ್ಚಳ ತಡೆ ಹಿಡಿಯಲಾಗಿತ್ತು. ಇದರ ವಿರುದ್ಧ ಸಿಂಗ್ ನ್ಯಾಯಾಲಯದ ಮೊರೆ ಹೋಗಿದ್ದರು.ಕಾರ್ಮಿಕರ ಭವಿಷ್ಯ ನಿಧಿ ಕಡತಗಳು ತಮ್ಮ ವಶದಲ್ಲಿ ಇಲ್ಲದ ಕಾರಣ ತಿದ್ದುಪಡಿಗೆ ತಾವು ಹೊಣೆಯಲ್ಲ ಎಂಬ ಅರ್ಜಿದಾರರ ವಾದವನ್ನು ನ್ಯಾಯಾಲಯ ಮಾನ್ಯ ಮಾಡಿದೆ. ತಮ್ಮದೇ ಇಲಾಖೆಯ ವಿರುದ್ಧ 30 ವರ್ಷಗಳ ಕಾಲ ಛಲ ಬಿಡದ ತ್ರಿವಿಕ್ರಮನಂತೆ ಅವಿರತವಾಗಿ ಹೋರಾಟ ನಡೆಸಿದ ಸಿಂಗ್ ಪರ ಕೊನೆಗೂ ತೀರ್ಪು ಹೊರಬಿದ್ದಿದೆ. ಈ ಪ್ರಕರಣ ನಡೆದಾಗ ಸೇವೆಯಲ್ಲಿದ್ದ ಅವರು ಈಗ ನಿವೃತ್ತರಾಗಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.