ಬುಧವಾರ, ಆಗಸ್ಟ್ 21, 2019
28 °C
ಭೋಪಾಲ್ ವಿಷಾನಿಲ ದುರಂತ

ಮೂರು ದಶಕವಾದರೂ ಮುಗಿಯದ ಯಾತನೆ

Published:
Updated:

ಭೋಪಾಲ್: ವಿಷಾನಿಲ ಹೊರ ಸೂಸಿ ಸಾವಿರಾರು ಜನರ ಸಾವಿಗೆ ಕಾರಣವಾದ ಭೋಪಾಲ್ ಅನಿಲ ದುರಂತ ಸಂಭವಿಸಿ ಮೂರು ದಶಕಗಳಾಗುತ್ತಿವೆ. ಜಗತ್ತನ್ನೇ ಬೆಚ್ಚಿ ಬೀಳಿಸಿದ ಆ ಕರಾಳ ಘಟನೆಯನ್ನು ಇಂದಿಗೂ ಮರೆಯಲು ಆಗುತ್ತಿಲ್ಲ.  ಏಕೆಂದರೆ, ವಿಷಾನಿಲದ ದುಷ್ಪರಿಣಾಮ ಇನ್ನೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಂಗ ವೈಕಲ್ಯದೊಂದಿಗೆ ಜನಿಸುತ್ತಿರುವ ಮಕ್ಕಳು ಒಂದೆಡೆಯಾದರೆ, ವಯಸ್ಕರಲ್ಲಿ ಕಾಣುವ ರಕ್ತಹೀನತೆ ಇನ್ನೊಂದೆಡೆ...ಭೋಪಾಲ್ ಸುತ್ತಮುತ್ತ ಜನರು ಅನುಭವಿಸುತ್ತಿರುವ ಯಾತನೆಗಳ ಕುರಿತು ಅಧ್ಯಯನವೊಂದನ್ನು ನಡೆಸಲಾಗಿದ್ದು, ಅಂತರರಾಷ್ಟ್ರೀಯ ನಿಯತಕಾಲಿಕವೊಂದರಲ್ಲಿ ಈ ಕುರಿತು ವರದಿ ಪ್ರಕಟವಾಗಿದೆ.ಭೋಪಾಲ್ ಗ್ರೂಪ್ ಫಾರ್ ಇಂಟರ್‌ನ್ಯಾಷನಲ್ ಅಂಡ್ ಆ್ಯಕ್ಷನ್ (ಬಿಜಿಐಎ) ಹಾಗೂ ಸಂಭಾವನಾ ಟ್ರಸ್ಟ್ ಕ್ಲಿನಿಕ್ (ಎಸ್‌ಟಿಸಿ) ನೇತೃತ್ವದಲ್ಲಿ ನಡೆಸಲಾದ ಅಧ್ಯಯನಕ್ಕೆ ಯೂನಿಯನ್ ಕಾರ್ಬೈಡ್ ಫ್ಯಾಕ್ಟರಿ ಸುತ್ತ ವಾಸವಾಗಿರುವ 20,000 ಕುಟುಂಬಗಳ 1.2 ಲಕ್ಷ ಜನರನ್ನು ಒಳಪಡಿಸಲಾಗಿತ್ತು.ತಲಾ 5,000 ಕುಟುಂಬಗಳಂತೆ ಒಟ್ಟು ನಾಲ್ಕು ವಿಭಾಗಗಳ ಅಡಿ ಈ ಅಧ್ಯಯನ ನಡೆಯಿತು. ಅವುಗಳೆಂದರೆ- 1984ರಲ್ಲಿ ವಿಷಾನಿಲಕ್ಕೆ ನೇರವಾಗಿ ತುತ್ತಾದವರು; ಕಲುಷಿತ ನೀರು ಇರುವ ಪ್ರದೇಶದಲ್ಲಿ ವಾಸಿಸುತ್ತಿರುವವರು; ವಿಷಾನಿಲ ವ್ಯಾಪಿಸಿದ ಪ್ರದೇಶದಲ್ಲಿ ಜೀವಿಸುತ್ತಿರುವವರು ಹಾಗೂ ಅನಿಲ ವ್ಯಾಪಿಸದ ಪ್ರದೇಶದಲ್ಲಿ ಇರುವವರು.`ಈಗ ಬಿಜಿಐಎ ಹಾಗೂ ಎಸ್‌ಟಿಸಿ ನಡೆಸಿರುವ ಅಧ್ಯಯನಕ್ಕಿಂತ ಹತ್ತು ವರ್ಷ ಹಿಂದೆ (2003ರಲ್ಲಿ) ಇಂಥದೊಂದು ಅಧ್ಯಯನ ನಡೆದಿತ್ತು. ದುರ್ಘಟನೆ ಬಳಿಕ ಮೂವತ್ತು ವರ್ಷಗಳ ಅವಧಿಯಲ್ಲಿ ಬಾಧಿತ ಪ್ರದೇಶದ ಜನರ ಆರೋಗ್ಯ ಸ್ಥಿತಿ ಹೇಗಿದೆ ಎಂಬುದನ್ನು ತಿಳಿಯಲು ಪ್ರಸ್ತುತ ನಮ್ಮ ತಂಡದಿಂದ ಅಧ್ಯಯನ ನಡೆದಿದೆ. ಇದರ ಫಲಿತಾಂಶಗಳನ್ನು 2013ರ ಅಂತ್ಯದ ಹೊತ್ತಿಗೆ ಅಂತರರಾಷ್ಟ್ರೀಯ ಮಟ್ಟದ ನಿಯತಕಾಲಿಕೆ ಯಲ್ಲಿ ಪ್ರಕಟಿಸಲಿದ್ದೇವೆ' ಎಂದು ಕಾರ್ಯಕರ್ತ ಸತಿನಾಥ ಸಾರಂಗಿ `ಪ್ರಜಾವಾಣಿ'ಗೆ ತಿಳಿಸಿದರು.ಹುಟ್ಟು ಅಂಗವೈಕಲ್ಯ:  `ಪ್ರಾಥಮಿಕ ಸಂಗತಿಗಳ ಅನುಸಾರ, ಕಲುಷಿತ ನೀರು ಇರುವ ಪ್ರದೇಶದಲ್ಲಿ ಜನಿಸುವ ಶಿಶುಗಳು ಹುಟ್ಟುತ್ತಲೇ ಅಂಗವೈಕಲ್ಯದಿಂದ ಬಳಲುತ್ತಿರುತ್ತವೆ. ಪುರುಷರು ಹಾಗೂ ಮಕ್ಕಳಲ್ಲಿ ರಕ್ತಹೀನತೆ ಹೆಚ್ಚಾಗಿ ಕಾಡುತ್ತಿದೆ. ವಿಷಾನಿಲ ಮುಕ್ತವಾದ ಭಾಗಕ್ಕಿಂತ ಈ ಪ್ರದೇಶದಲ್ಲಿ ಇಂಥ ಸಮಸ್ಯೆಗಳು ಹೆಚ್ಚಾಗಿವೆ. ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ' ಎಂದು ಅಧ್ಯಯನದಲ್ಲಿ ಭಾಗವಹಿಸಿರುವ ಕಾರ್ಯಕರ್ತೆ ರಚನಾ ಢಿಂಗ್ರಾ ಹೇಳಿದರು.ಅಧ್ಯಯನಕ್ಕೆ ತಜ್ಞ ವೈದ್ಯರ ನೆರವು: ಬಾಧಿತ ಪ್ರದೇಶದಲ್ಲಿ ಗರ್ಭಿಣಿಯರ ಆರೋಗ್ಯ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಿದ್ದ ಡಾ.ದಯಾ ವರ್ಮಾರಂಥ ತಜ್ಞವೈದ್ಯರ ನೆರವನ್ನು ಇದಕ್ಕೆ ಪಡೆಯಲಾಗಿದೆ.   30 ವರ್ಷ ವಯಸ್ಸಿನೊಳಗಿನವರು ಅನುಭವಿಸುತ್ತಿರುವ ಜನನ ಸಂಬಂಧಿ ದುಷ್ಪರಿಣಾಮ, ಸಂತಾನೋತ್ಪತ್ತಿ ವಿವರ ಹಾಗೂ ಶಿಶು ಮರಣ ಪ್ರಮಾಣ ಸೇರಿದಂತೆ ಒಟ್ಟು ಒಂಬತ್ತು ಬಗೆಯ ಮಾನದಂಡಗಳನ್ನು ಇದಕ್ಕೆ ಅನುಸರಿಸಲಾಗಿದ್ದು, ದುರ್ಘಟನೆಯ ಬಳಿಕದ ಮೊದಲಿನ ಐದು ವರ್ಷಗಳು ಹಾಗೂ ಈ ಹಿಂದಿನ ಐದು ವರ್ಷಗಳ ಅವಧಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕ್ಯಾನ್ಸರ್, ಕ್ಷಯ ಹಾಗೂ ಪಾರ್ಶ್ವವಾಯು ರೋಗಿಗಳನ್ನೂ ಅಧ್ಯಯನಕ್ಕೆ ಒಳಪಡಿಸಲಾಗಿದೆ.ದುರ್ಘಟನೆ ನಡೆದ ಬಳಿಕ 1987-89ರಲ್ಲಿ ಅಧ್ಯಯನವೊಂದನ್ನು ನಡೆಸಲು ಸರ್ಕಾರ ಸೂಚಿಸಿತ್ತು. ವಿಷಾನಿಲ ಹೊರಸೂಸುವಿಕೆ ಬಳಿಕ ಜನಿಸಿದ ಶಿಶುಗಳು ಹಾಗೂ ಪ್ರೌಢಾವಸ್ಥೆ ತಲುಪಿದವರ ಮೇಲೆ ಬೀರಿದ ಪರಿಣಾಮ ಕುರಿತು ಮಾತ್ರ ತಾವು ಅಧ್ಯಯನ ನಡೆಸುತ್ತಿರುವುದಾಗಿ ಪ್ರಧಾನ ತನಿಖಾಧಿಕಾರಿ ಹೇಳಿದರೂ, ಸರ್ಕಾರ ಆ ಅಧ್ಯಯನ ಸ್ಥಗಿತಗೊಳಿಸಿತ್ತು.ಆ ಬಳಿಕ ಸಂಭಾವನಾ ಟ್ರಸ್ಟ್ ಕ್ಲಿನಿಕ್ ಕೈಗೊಂಡಿದ್ದ ಅಧ್ಯಯನದಲ್ಲಿ, ಬಾಧಿತ ಪ್ರದೇಶದ ಗಂಡುಮಕ್ಕಳು ಇತರ ಪ್ರದೇಶದವರಿಗಿಂತ ಎಂಟು ಕೆಜಿಗಳಷ್ಟು ಕಡಿಮೆ ತೂಕ ಹಾಗೂ 13 ಸೆಂ.ಮೀ. ಕಡಿಮೆ ಎತ್ತರ ಇರುವುದು ತಿಳಿದುಬಂದಿತ್ತು ಎಂದು ಸತಿನಾಥ ಸಾರಂಗಿ ಮಾಹಿತಿ ನೀಡಿದರು.ಇನ್ನಷ್ಟು ಅಧ್ಯಯನ ಅಗತ್ಯ: ಯೂನಿಯನ್ ಕಾರ್ಬೈಡ್ ಫ್ಯಾಕ್ಟರಿ ಒಳಗೆ ಹಾಕಿರುವ ಅಪಾಯಕಾರಿ ರಾಸಾಯನಿಕ ತ್ಯಾಜ್ಯದಿಂದಾಗಿ ನೆಲ- ಜಲ ಕಲುಷಿತಗೊಂಡಿದ್ದು, ಜನರ ಮೇಲೆ ದುಷ್ಪರಿಣಾಮ ಬೀರಿದೆ.ವಿಷಾನಿಲ ದುರ್ಘಟನೆಯಿಂದಾಗಿ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮದ ಕುರಿತು ಯಾವುದೇ ದೀರ್ಘಾವಧಿ ಅಧ್ಯಯನ ನಡೆದಿಲ್ಲ. ಹೀಗಾಗಿ ಸಂತ್ರಸ್ತರ ಪರ ಹೋರಾಡಲು ಇಂಥ ಇನ್ನಷ್ಟು ಅಧ್ಯಯನಗಳು ಅಗತ್ಯ ಎಂಬುದು ಕಾರ್ಯಕರ್ತರ ಪ್ರತಿಪಾದನೆ.

Post Comments (+)