ಗುರುವಾರ , ಮೇ 6, 2021
33 °C

ಮೂರು ದಿನಗಳ ಸದ್ಭಾವನಾ ಉಪವಾಸ ಮುಕ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್, (ಪಿಟಿಐ): `ನಮ್ಮ ಸರ್ಕಾರ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ಎಂಬ ಭೇದ ಭಾವ ಮಾಡುತ್ತಿಲ್ಲ~ ಎಂದು ಹೇಳುವ ಮೂಲಕ ಕೋಮು ಸೌಹಾರ್ದದ ಹೊಸ ಇಮೇಜ್ ಸೃಷ್ಟಿಸಿದ ಮುಖ್ಯಮಂತ್ರಿ ನರೇಂದ್ರ ಮೋದಿ, ತಮ್ಮ ಮೂರು ದಿನಗಳ ಸದ್ಭಾವನಾ ಉಪವಾಸವನ್ನು ಸೋಮವಾರ ಸಂಜೆ ಅಂತ್ಯಗೊಳಿಸಿದರು.ಇದರ ಜತೆಗೆ ತಾವು ಬಿಜೆಪಿಯ ಪ್ರಧಾನ ಮಂತ್ರಿ ಹುದ್ದೆಯ ಆಕಾಂಕ್ಷಿ ಎನ್ನುವ ಕಾರಣಕ್ಕೆ ಈ ಉಪವಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಎಂಬ ಭಾವನೆ ಮೂಡದಂತೆ ಮಾಡುವ ಯತ್ನವನ್ನೂ ಅವರು ಮಾಡಿದರು. ವಿವಿಧ ಧರ್ಮದ ಜನರು ನೀಡಿದ ಲಿಂಬೆ ರಸವನ್ನು ಕುಡಿಯುವ ಮೂಲಕ ಸುಷ್ಮಾ ಸ್ವರಾಜ್ ಮತ್ತು ವೆಂಕಯ್ಯ ನಾಯ್ಡು ಅವರ ಸಮ್ಮುಖದಲ್ಲಿ ಮೋದಿ ಉಪವಾಸವನ್ನು ಅಂತ್ಯಗೊಳಿಸಿದರು.ಪಕ್ಷದ ಹಿರಿಯ ಮುಖಂಡ ವೆಂಕಯ್ಯ ನಾಯ್ಡು ಅವರು ಮಾತನಾಡುತ್ತ, ಮೋದಿ ತಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಹೇಳಿದರು. ನಂತರ ಮಾತನಾಡಿದ ಮೋದಿ ತಮ್ಮ ಕಾರ್ಯಕ್ರಮ ರಾಜಕೀಯ ಉದ್ದೇಶದ್ದಲ್ಲ, ಬದಲಿಗೆ ರಾಷ್ಟ್ರೀಯ ಹಿತಾಸಕ್ತಿಯಿಂದ ಕೂಡಿದ್ದು ಎಂದು ಹೇಳಿದರು.ಎಹ್ಸಾನ್ ಜಾಫ್ರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಯಾವುದೇ ಆದೇಶ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ ನಂತರ ಹಾಗೂ ಅಮೆರಿಕದ ಕಾಂಗ್ರೆಸ್ ವರದಿಯು ತಮ್ಮನ್ನು ಭವಿಷ್ಯದ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದ ನಂತರ ಈ ಸದ್ಭಾವನಾ ಉಪವಾಸ ಆರಂಭಿಸಿದ್ದ ಅವರು, ತಮ್ಮ ಭಾಷಣದಲ್ಲಿ ಎಲ್ಲಿಯೂ ಪ್ರಧಾನಿ ಹುದ್ದೆಯ ಆಕಾಂಕ್ಷಿ ಎಂದು ಹೇಳಲಿಲ್ಲ. ಇದೇ ಸಂದರ್ಭದಲ್ಲಿ ಅವರು `ಮತ ಬ್ಯಾಂಕ್ ರಾಜಕೀಯ~ಕ್ಕೆ ಅಂತ್ಯ ಹಾಡುವ ಶಪಥ ಮಾಡಿದರು.ವಿಭಿನ್ನ ಧರ್ಮದವರು ತಮ್ಮ ಉಪವಾಸ ಕಾರ್ಯಕ್ರಮವನ್ನು ಬೆಂಬಲಿಸಿದರು. ಇದರಲ್ಲಿ ಎಲ್ಲ ಧರ್ಮದವರೂ ಸುಮ್ಮನೆ ಪಾಲ್ಗೊಳ್ಳಲಿಲ್ಲ. 10 ವರ್ಷಗಳಿಂದ ತಮ್ಮ ಸರ್ಕಾರ ಸಾಧಿಸಿದ ಸಾಧನೆಯ ಫಲವಾಗಿ ಇದು ಸಾಧ್ಯವಾಯಿತು. ಎಲ್ಲ ವರ್ಗದ ಜನರಲ್ಲಿ ಅಂತಹ ನಂಬಿಕೆ ಮತ್ತು ವಿಶ್ವಾಸ ತುಂಬುವಂತಹ ಕೆಲಸವನ್ನು ತಮ್ಮ ಸರ್ಕಾರ 10 ರ್ಷಗಳ ಅವಧಿಯಲ್ಲಿ ಮಾಡಿದೆ ಎಂದ ಅವರು, ತಪ್ಪಿಯೂ ಗೋದ್ರಾ ನಂತರದ ಹಿಂಸಾಚಾರದ ಪ್ರಸ್ತಾಪವನ್ನು ಮಾಡಲಿಲ್ಲ. ಭಾಷಣದುದ್ದಕ್ಕೂ ತಮ್ಮ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಸಾಧಿಸಿದ ಆರ್ಥಿಕ ಪ್ರಗತಿಗೇ ಹೆಚ್ಚಿನ ಒತ್ತು ನೀಡಿದರು.ಸ್ವಾತಂತ್ರ್ಯಾನಂತರ ದೇಶದ ಯಾವುದೇ ರಾಜ್ಯವೂ ಸಾಧಿಸದ ಪ್ರಗತಿಯನ್ನು ತಮ್ಮ ಸರ್ಕಾರ ಸಾಧಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.