ಶನಿವಾರ, ಮೇ 8, 2021
27 °C
ಶವಸಂಸ್ಕಾರಕ್ಕೆ ಸೋಲಾರ್ ಬೇಲಿ ಅಡ್ಡಿ

ಮೂರು ದಿನ ಶವ ಇಟ್ಟು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್.ಡಿ.ಕೋಟೆ: ಆದಿವಾಸಿ ಮಹಿಳೆಯ ಶವ ಸಂಸ್ಕಾರಕ್ಕೆ ಆದಿವಾಸಿಗಳು `ಜಮ್ಮಾ' ಕ್ಕೆ ತೆರಳಲು ಅರಣ್ಯ ಇಲಾಖೆ ಅಧಿಕಾರಿಗಳು ಸೋಲಾರ್ ಬೇಲಿ ತೆರೆದುಕೊಡಲಿಲ್ಲ ಎಂದು 3 ದಿನ ಶವವನ್ನು ಇಟ್ಟುಕೊಂಡು ಕಾಯುತ್ತಿದ್ದ ಘಟನೆ ತಾಲ್ಲೂಕಿನ ಹೂಣಸೇಕುಪ್ಪೆ ಗ್ರಾಮದಲ್ಲಿ ನಡೆದಿದೆ.



ಕಳೆದ ಮೂರು ದಿನಗಳ ಹಿಂದೆ ತಾಲ್ಲೂಕಿನ ಹುಣಸೇಕುಪ್ಪೆ ಹಾಡಿಯಲ್ಲಿ ಮೃತಪಟ್ಟ ಗೌರಿ (35)ಯ ಶವ ಸಂಸ್ಕಾರಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಸೋಲಾರ್ ಬೇಲಿ ತೆಗೆದುಕೊಟ್ಟಿದ್ದಾರೆ.



ಬುಧವಾರ ಮೃತಪಟ್ಟ ಗೌರಿಯ ಶವವನ್ನು ಗುರುವಾರ  ಆದಿವಾಸಿಗಳ `ಜಮ್ಮಾ'(ಸ್ಮಶಾನ) ದಲ್ಲಿ ಶವ ಸಂಸ್ಕಾರ ಮಾಡುವ ಸಲುವಾಗಿ ಎಷ್ಟೇ ಪ್ರಯತ್ನ ಮಾಡಿದರೂ ಇದು ಸಫಲವಾಗಲಿಲ್ಲ. ನಂತರ ಶವವನ್ನು ಇಟ್ಟು ಕಾಯುತ್ತಿದ್ದುದನ್ನು ಗಮನಿಸಿ ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಬೇಲಿಯನ್ನು ತೆರವುಗೊಳಿಸಿದ್ದಾರೆ. ನಂತರ ಶವ ಸಂಸ್ಕಾರ ಮಾಡಲು ಆದಿವಾಸಿಗಳು ಮುಂದಾದರು.



ಕಳೆದ 6 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಈ ಆದಿವಾಸಿ ಮಹಿಳೆಯನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವಲ್ಲಿ ತಾಲ್ಲೂಕಿನ ಗಿರಿಜನ ಸಂಚಾರಿ ಆರೋಗ್ಯ ಘಟಕ ಮತ್ತು ಇತರೆ ಇಲಾಖೆಗಳು ಸೂಕ್ತ ನಿಗಾ ವಹಿಸಿಲ್ಲ ಎಂದು `ಸಿಕ್ರಂ' ಮಾನವ ಹಕ್ಕುಗಳ ಸಮಿತಿಯ ಸದಸ್ಯ ಪ್ರಸನ್ನ ಆರೋಪಿಸಿದ್ದಾರೆ.



ಅರಣ್ಯ ಹಕ್ಕು 2006 ಕಾಯ್ದೆ ಜಾರಿಗೆ ಬಂದಿದ್ದರೂ ಆದಿವಾಸಿಗಳು ಶವ ಸಂಸ್ಕಾರಕ್ಕೆ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು `ಬದುಕು' ಟ್ರಸ್ಟ್‌ನ ಧನಂಜಯ ಆರೋಪಿಸಿದ್ದಾರೆ. ಹಾಡಿಯ ಪುರದ ಕರಿಯಪ್ಪ, ಕೆಂಚಮ್ಮ, ಚಿಕ್ಕದಾಸಪ್ಪ ಇತರರು ಶವ ಸಂಸ್ಕಾರದಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.