ಶನಿವಾರ, ಮಾರ್ಚ್ 6, 2021
21 °C

ಮೂರು ದೋಣಿಯ ಚೆಲುವೆ

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ಮೂರು ದೋಣಿಯ ಚೆಲುವೆ

ಕಿರುತೆರೆ ಹಾಗೂ ಸಿನಿಮಾಗಳಲ್ಲಿ ತೊಡಗಿಸಿಕೊಂಡೇ ‘ನಾಟಕ ನನಗಿಷ್ಟ’ ಎನ್ನುವ ಗಟ್ಟಿ ಹುಡುಗಿ ನಿಖಿಲಾ ಸುಮನ್. ‘ಶ್ರೀನಿವಾಸ ಕಲ್ಯಾಣ’ದಲ್ಲಿ ಅವರದು ಹೊಡಿ–ಬಡಿ ಎನ್ನುವ ‘ರೌಡಿ’ ಯುವತಿಯ ಪಾತ್ರ.‘ರಂಗಭೂಮಿ ಬದುಕುವುದನ್ನು ಕಲಿಸಿಕೊಟ್ಟಿದೆ. ಸಪ್ತತಾರಾ ಹೋಟೆಲ್‌ನಲ್ಲಿಯೂ ಇರಬಲ್ಲೆ, ಗುಡಿಸಲಿನಲ್ಲಿ ಬಿಟ್ಟರೂ ಬದುಕಬಲ್ಲೆ. ಸಿನಿಮಾಗಳಲ್ಲಿ ಹೀರೋಯಿನ್‌ಗಳಿಗೆ ಕುರ್ಚಿ ಹಾಕಿ ಕೂರಿಸಿ, ಜ್ಯೂಸ್‌ ಕೊಡುವಂತಹ ಸಂಪ್ರದಾಯ ರಂಗಭೂಮಿಯಲ್ಲಿಲ್ಲ. ಕುಡಿಯುವ ನೀರು ಬೇಕು ಎಂದರೆ ನಾವೇ ತೆಗೆದುಕೊಳ್ಳಬೇಕು. ಯಾವುದೋ ಊರಲ್ಲಿ ನಾಟಕ ಮಾಡುವಾಗ ರಾತ್ರಿ ಎರಡು ಗಂಟೆಗೆ ಟೀ–ಬನ್‌ನಲ್ಲಿಯೇ ಹೊಟ್ಟೆ ತುಂಬಿಸಿಕೊಳ್ಳಬೇಕಾಗಬಹುದು. ಆದರೂ ರಂಗಭೂಮಿಯಲ್ಲಿಯೇ ಬದುಕಿನ ನೈಜ ಅನುಭವದ ಮುದ ಇರುವುದು’.

ರಂಗಭೂಮಿಯಲ್ಲಿ ಬದುಕು ಮತ್ತು ವೃತ್ತಿಯ ಸುಖವನ್ನು ಕಾಣುತ್ತಿರುವ ನಟಿ ನಿಖಿಲಾ ಸುಮನ್‌, ಸಿನಿಮಾ ಬದುಕಿನತ್ತ ಹೆಚ್ಚು ಒಲವು ತೋರುವ ನಟಿಯರಿಗಿಂತ ತಾನು ಭಿನ್ನ ಎಂಬುದನ್ನು ತಮ್ಮ ಮಾತುಗಳಲ್ಲಿಯೇ ವ್ಯಕ್ತಪಡಿಸುತ್ತಾರೆ. ರಂಗಭೂಮಿಯಾಚೆಗಿನ ಬಣ್ಣದ ಜಗತ್ತೂ ಅವರಿಗೆ ಪ್ರಿಯವೇ. ಅತ್ತ ಕಿರುತೆರೆ, ಇತ್ತ ಹಿರಿತೆರೆಗಳಲ್ಲಿ ನಟಿಸುವ ಬಯಕೆಗಳನ್ನೂ ತಣಿಸಿಕೊಳ್ಳುತ್ತಿದ್ದಾರೆ. ಈ ಮೂರು ದೋಣಿಯ ಪಯಣ ಅವರಿಗೆ ಸವಾಲಿನದ್ದೇನೂ ಆಗಿಲ್ಲ. ಸವಾಲುಗಳಿಗೆ ಎದುರಾಗುವ ತವಕ ಅವರದು.‘ಟೋಪಿವಾಲ’ ನಿರ್ದೇಶಕ ಶ್ರೀನಿವಾಸ್‌, ನಾಯಕರಾಗಿಯೂ ಬಣ್ಣಹಚ್ಚಿರುವ ‘ಶ್ರೀನಿವಾಸ ಕಲ್ಯಾಣ’ ಚಿತ್ರದ ಇಬ್ಬರು ನಾಯಕಿಯರಲ್ಲಿ ಒಬ್ಬರು ನಿಖಿಲಾ. ತಮ್ಮ ನಟನಾ ಪ್ರತಿಭೆಗೆ ಸಾಣೆ ಹಿಡಿಯುವ ವಿಭಿನ್ನ ಪಾತ್ರಗಳಿದ್ದರೆ ಮಾತ್ರ ಸಿನಿಮಾ ಹೊಸ್ತಿಲು ದಾಟುವುದು ಎಂಬ ಸ್ಪಷ್ಟ ನೀತಿ ಅವರದು. ನಿಖಿಲಾಗೆ ‘ಶ್ರೀನಿವಾಸ ಕಲ್ಯಾಣ’ ಎರಡನೇ ಸಿನಿಮಾ. ಈ ಹಿಂದೆ ‘ನನ್‌ ಲೈಫ್ ಅಲ್ಲಿ’ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಧಾರಾವಾಹಿ ಪ್ರಿಯರಿಗೆ ಅವರು ಸುಪರಿಚಿತರೇ.  ನೆರೆಯ ತಮಿಳುನಾಡಿನಲ್ಲಿಯೂ ಅವರು ಕಿರುತೆರೆಯ ಮೂಲಕ ಪರಿಚಿತರು.ಬಾಲ್ಯದಿಂದಲೇ ರಂಗಭೂಮಿ

ಮನೆಯಲ್ಲಿ ಸಾಂಪ್ರದಾಯಿಕವಾದ, ಕಲೆ ಮತ್ತು ಸಂಸ್ಕೃತಿಗೆ ಹೆಚ್ಚು ಆದ್ಯತೆ ನೀಡುವ ವಾತಾವರಣ. ತಾತ ಮತ್ತು ಅಮ್ಮ ಇಬ್ಬರೂ ಚಿತ್ರ ಕಲಾವಿದರು. ಹೀಗಾಗಿ ಕಲೆಯ ಮತ್ತೊಂದು ಪ್ರಾಕಾರವನ್ನು ಆಯ್ದುಕೊಳ್ಳುವುದು ಅವರಿಗೆ ಕಷ್ಟವಾಗಲಿಲ್ಲ. ಮೂರನೇ ತರಗತಿಯಲ್ಲಿರುವಾಗಲೇ ಅವರು ರಂಗಮಂಟಪವನ್ನೇರಿದ್ದರು. ಮುಂದೆ ಬೆಂಗಳೂರಿನಿಂದ ಮೈಸೂರಿಗೆ ವಾಸಸ್ಥಳ ಬದಲಾದಾಗ ಅಭಿನಯದ ಸೆಳೆತಕ್ಕೆ ಸ್ಪಷ್ಟ ರೂಪ ನೀಡಿದ್ದು ಮಂಡ್ಯ ರಮೇಶ್ ಅವರ ‘ನಟನಾ’ ಸಂಸ್ಥೆ.‘ಬದುಕಿನ ಅತ್ಯಂತ ಸೂಕ್ಷ್ಮ ವಯಸ್ಸು ಹೈಸ್ಕೂಲಿನದು. ಆಗ ಮನಸು ಜಾರಿದರೆ ಬದುಕು ಹಳಿ ತಪ್ಪುವ ಅಪಾಯವಿರುತ್ತದೆ. ಇಂತಹ ವೇಳೆಯಲ್ಲಿ ನನ್ನ ಆಸಕ್ತಿಗೆ ನಿರ್ದಿಷ್ಟ ರೂಪ ನೀಡಿ, ಮಾರ್ಗದರ್ಶನ ನೀಡಿದವರು ಮಂಡ್ಯ ರಮೇಶ್‌. ಇಂದು ನಾನು ಏನಾಗಿದ್ದೇನೋ ಅದಕ್ಕೆ ಕಾರಣವೇ ಅವರು. ಅವರಂತಹ ಗಾಡ್‌ಫಾದರ್‌ ದೊರಕಲು ನಾನು ಅದೃಷ್ಟವಂತೆ’ ಎಂದು ನೆನೆಯುತ್ತಾರೆ ನಿಖಿಲಾ.ನಟನಾ ತಂಡದಲ್ಲಿದ್ದಾಗ ‘ಚೋರ ಚರಣದಾಸ’, ‘ಸತ್ರು ಅಂದ್ರೆ ಸತ್ರಾ’, ‘ಮೋಜಿನ ಸೀಮೆ ಆಚೆ ಒಂದೂರು’ ನಾಟಕಗಳಲ್ಲಿ ನಟಿಸಿದ್ದ ಅವರನ್ನು ಕಂಡು ಅನೇಕ ಧಾರಾವಾಹಿ ನಿರ್ದೇಶಕರು ಕಿರುತೆರೆಗೆ ಆಹ್ವಾನ ನೀಡಿದ್ದರು. ಆದರೆ ಅವುಗಳಿಗೆ ಕಳುಹಿಸಲು ನಿರಾಕರಿಸಿದ್ದ ಮಂಡ್ಯ ರಮೇಶ್‌, ಹೈಸ್ಕೂಲು ಮುಗಿದ ಬಳಿಕ ಬಿ. ಸುರೇಶ್‌ ಅವರ ‘ಪ್ರೀತಿ ಪ್ರೇಮ’ ಧಾರಾವಾಹಿಯಲ್ಲಿ ಅವಕಾಶ ನೀಡುವ ಮೂಲಕ ಮುಂದಿನ ಪಯಣದ ಹಾದಿಯನ್ನೂ ಸಿದ್ಧಪಡಿಸಿಕೊಟ್ಟರು.ಮನಶಾಸ್ತ್ರ ವಿಷಯದಲ್ಲಿ ಬಿ.ಎ. ಪದವಿ ಮುಗಿಸಿರುವ ಅವರೀಗ ಪೂರ್ಣ ಪ್ರಮಾಣದಲ್ಲಿ ಅಭಿನಯ ಲೋಕಕ್ಕೆ ಜಾರಿದ್ದಾರೆ. ವಾರದಲ್ಲಿ ಎರಡು ಮೂರು ದಿನ ಚೆನ್ನೈನಲ್ಲಿ ಚಿತ್ರೀಕರಣ. ಅಲ್ಲಿಂದ ನೇರವಾಗಿ ರಂಗಸ್ಥಳದಲ್ಲಿ ತಾಲೀಮು, ಪ್ರದರ್ಶನ. ಹೀಗೆ ನಿರಂತರ ಬಿಜಿಯಾಗಿರುವ ಅವರು ಅದರ ನಡುವೆಯೇ ಸಿನಿಮಾದಲ್ಲಿ ನಟಿಸಲು ಸಮಯ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧರಿದ್ದಾರೆ. ರಂಗಭೂಮಿ ಎಂಬ ಪಾಠಶಾಲೆ

ಎರಡು ಧಾರಾವಾಹಿಗಳಲ್ಲಿ ನಟಿಸುತ್ತಿದ್ದರೂ ತಿಂಗಳಿಡೀ ಅದಕ್ಕೆ ಸಮಯ ಮೀಸಲಿಡಲು ಅವರು ಇಷ್ಟಪಡುವುದಿಲ್ಲ. 10–12 ದಿನಗಳಷ್ಟೇ ಚಿತ್ರೀಕರಣ. ಇನ್ನುಳಿದ ದಿನಗಳಲ್ಲಿ ನಾಟಕದ ಸಖ್ಯವೇ ಅವರಿಗೆ ಬೇಕು. ನಾಟಕದ ಹೊರತಾಗಿ ಇರಲು ಸಾಧ್ಯವೇ ಇಲ್ಲ ಎನ್ನುವಷ್ಟು ಅದು ಅವರನ್ನು ಆವರಿಸಿದೆ. ತಾನಾಗಿಯೇ ಬಂದ ಕೆಲ ಸಿನಿಮಾ ಅವಕಾಶಗಳಿಗೆ ಒಲ್ಲೆ ಎಂದದ್ದೂ ಇದೆ. ಗೌರವ ನೀಡುವ, ಶುದ್ಧ ಕೆಲಸವಿರುವ ತಂಡಗಳೊಂದಿಗೆ ಮಾತ್ರ ಸೇರಿಕೊಳ್ಳುವ ಕಠಿಣ ನಿಯಮ ಅವರದು. ನಟನೆಗೆ ಹಣ ನೀಡುತ್ತಾರೆ, ಅದನ್ನು ಮಾಡಿ ಹೋಗುತ್ತೇನೆ. ಅದರಾಚೆಗಿನ ವ್ಯವಹಾರ ನನಗೆ ಬೇಡ ಎನ್ನುತ್ತಾರೆ.‘ಅಭಿನಯ ಹೆಕ್ಕುವ, ವ್ಯಾವಹಾರಿಕ ವಿಚಾರಗಳಲ್ಲಿ ಸಿನಿಮಾ, ಕಿರುತೆರೆ ಮತ್ತು ರಂಗಭೂಮಿ ಮೂರೂ ವಿಭಿನ್ನ. ಸಿನಿಮಾ ಮತ್ತು ಕಿರುತೆರೆಯಲ್ಲಿ ಹೆಸರು ಗಳಿಸಬಹುದು. ಹಣವನ್ನೂ ಮಾಡಬಹುದು. ಆದರೆ ವೈಯಕ್ತಿಕ ತೃಪ್ತಿ ಎನ್ನುವುದು ಸಿಗುವುದು ರಂಗಭೂಮಿಯಲ್ಲಿ ಮಾತ್ರ. ಸಿನಿಮಾ, ಕಿರುತೆರೆ ಮತ್ತು ರಂಗಭೂಮಿಯ ಆಯ್ಕೆ ಎದುರಿಗಿಟ್ಟಾಗ ನನ್ನ ಆಯ್ಕೆ ರಂಗಭೂಮಿಯಾಗಿರುತ್ತದೆ’ ಎನ್ನುವ ಅವರ ಪಾಲಿಗೆ ರಂಗಭೂಮಿ ನಿರಂತರ ಕಲಿಕೆಯ ಪಾಠಶಾಲೆ.ರಂಗಭೂಮಿ ಕಲಾವಿದರು ನಟನೆಯನ್ನಷ್ಟೇ ಮಾಡುವುದಿಲ್ಲ. ಬೆಳಕಿನ ವಿನ್ಯಾಸ ತಿಳಿದಿರುತ್ತದೆ. ತಮ್ಮ ಪಾತ್ರಕ್ಕೆ ತಾವೇ ವಸ್ತ್ರ ವಿನ್ಯಾಸ ಮಾಡಿಕೊಳ್ಳುತ್ತಾರೆ. ಪರದೆ ಕಟ್ಟುತ್ತಾರೆ. ವೇದಿಕೆಯ ಕಸವನ್ನೂ ಗುಡಿಸುತ್ತಾರೆ. ವಾಸ್ತವ ಬದುಕನ್ನು ಅನಾವರಣಗೊಳಿಸುವ, ವ್ಯಕ್ತಿತ್ವ ವಿಕಸನ ಮಾಡುವ, ಆತ್ಮವಿಶ್ವಾಸವನ್ನು ಹೆಚ್ಚಿಸುವ ರಂಗಭೂಮಿಯಲ್ಲಿ ಕಲಿತವರು ಯಾವ ಮಾಧ್ಯಮದಲ್ಲಿ ಬೇಕಾದರೂ ಅಭಿನಯಿಸಬಹುದು ಎನ್ನುವುದು ಅವರ ಅನುಭವದ ಮಾತು.ಎರಡು ಮಜಲಿನ ಪಾತ್ರ

‘ಶ್ರೀನಿವಾಸ ಕಲ್ಯಾಣ’ದಲ್ಲಿ ಯಾವುದಕ್ಕೂ ಜಗ್ಗದ, ಸಿಡುಕು, ಆತುರದ ತೀರ್ಮಾನ ತೆಗೆದುಕೊಳ್ಳುವ ‘ರೌಡಿ’ ಯುವತಿಯ ಪಾತ್ರ ನಿಖಿಲಾ ಅವರದು. ತನಗಾವುದೂ ಲೆಕ್ಕವೇ ಇಲ್ಲ ಎನ್ನುವ ಬೆಂಕಿಯೊಳಗೆ ಬದುಕುವ ಹೆಣ್ಣು ಆಕೆ. ಆದರೆ ಮದುವೆಯಾದ ಬಳಿಕ ಆಕೆಯ ಬದುಕು ಬದಲಾಗುತ್ತದೆ. ಆಕೆಯಲ್ಲಿಯೂ ಎಲ್ಲರಂತೆ ಭಾವುಕ ಮನಸಿದೆ ಎಂಬುದು ಪ್ರಕಟವಾಗುತ್ತದೆ ಎಂದು ಪಾತ್ರದ ಕುರಿತು ಸಂಕ್ಷಿಪ್ತವಾಗಿ ವಿವರಿಸುತ್ತಾರೆ ಅವರು.ಶ್ರೀನಿವಾಸ್‌ ಅವರು ಪಾತ್ರವನ್ನು ರೂಪಿಸಿರುವ ಮತ್ತು ಅದನ್ನು ಚಿತ್ರಿಸಿರುವ ಬಗೆ ಅವರಿಗೆ ಮೆಚ್ಚುಗೆಯಾಗಿದೆ. ಒಳ್ಳೆಯ ತಂಡದೊಂದಿಗೆ ಒಳ್ಳೆಯ ಸಿನಿಮಾ ಮಾಡಿದ್ದೇನೆ ಎಂಬ ಖುಷಿ ಅವರಲ್ಲಿದೆ.‘ಬಬ್ಲಿ ಬಬ್ಲಿ’!

‘ಹುಡುಗಿಯರು ಹುಟ್ಟಿನಿಂದಲೇ ಬಬ್ಲಿ ಬಬ್ಲಿಯಾಗಿರುತ್ತಾರೆ. ಇನ್ನು ಪಾತ್ರಗಳಲ್ಲಿ ಬಬ್ಲಿ ಬಬ್ಲಿ ಆಗುವುದೇನು?’ ಸಂದರ್ಶನಗಳಲ್ಲಿ ಬಹುತೇಕ ನಟಿಯರು ತಮ್ಮ ಪಾತ್ರವನ್ನು ವಿವರಿಸುವಾಗ ಬಳಸುವ ‘ಬಬ್ಲಿ ಬಬ್ಲಿ’ ಪದವೇ ತಮಾಷೆಯಾಗಿದೆ ಎಂದು ಸಣ್ಣನೆ ನಗುತ್ತಾರೆ ನಿಖಿಲಾ.ಪಾತ್ರ ಬಬ್ಲಿಯಾಗಿದ್ದರೆ ಅದನ್ನು ಮಾಡುವ ಅಗತ್ಯವೇ ಇಲ್ಲ. ‘ನಾನು’ ಅಲ್ಲದೆಯೇ ಇರುವ ಪಾತ್ರದಲ್ಲಿ ಅಭಿನಯಿಸಬೇಕು. ಅದು ನಿಜವಾದ ಸವಾಲು ಎಂದು ಅವರು ಹೇಳುತ್ತಾರೆ. ಹೀಗಾಗಿ ಪಾತ್ರಗಳ ವಿಚಾರದಲ್ಲಿ ಅವರು ಬಲು ಚೂಸಿ. ಒಮ್ಮೆ ನಟಿಸಿದ ಸ್ವರೂಪದ ಪಾತ್ರದಲ್ಲಿ ಮತ್ತೆ ಕಾಣಿಸಿಕೊಳ್ಳಲು ಒಪ್ಪುವುದಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.