ಗುರುವಾರ , ನವೆಂಬರ್ 21, 2019
27 °C
103 ಅಭ್ಯರ್ಥಿಗಳ 184 ಉಮೇದುವಾರಿಕೆ ಅಂಗೀಕಾರ

ಮೂರು ನಾಮಪತ್ರ ತಿರಸ್ಕೃತ

Published:
Updated:

ಶಿವಮೊಗ್ಗ: ಜಿಲ್ಲೆಯ 7 ವಿಧಾನಸಭಾ ಚುನಾವಣಾ ಕ್ಷೇತ್ರಗಳಲ್ಲಿ 103 ಅಭ್ಯರ್ಥಿಗಳು ಸಲ್ಲಿಸಿದ 184 ನಾಮಪತ್ರಗಳು ಅಂಗೀಕಾರಗೊಂಡಿದ್ದು, ಗುರುವಾರ ಪರಿಶೀಲನೆ ವೇಳೆ ಮೂರು ನಾಮಪತ್ರಗಳು ತಿರಸ್ಕೃತಗೊಂಡಿವೆ.ಭದ್ರಾವತಿಯಲ್ಲಿ ಶಾಸಕ ಬಿ.ಕೆ. ಸಂಗಮೇಶ್ ಕಾಂಗ್ರೆಸ್‌ನಿಂದ ಸಲ್ಲಿಸಿದ್ದ 2 ನಾಮಪತ್ರಗಳು ಪಕ್ಷದ `ಬಿ' ಫಾರಂ  ಸಲ್ಲಿಸದ ಹಿನ್ನೆಲೆಯಲ್ಲಿ ತಿರಸ್ಕೃತಗೊಂಡಿದ್ದು, ಸ್ವತಂತ್ರವಾಗಿ ಸಲ್ಲಿಸಿದ್ದ 1 ನಾಮಪತ್ರ ಅಂಗೀಕಾರಗೊಂಡಿದೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಸಹ ಎನ್‌ಪಿಪಿ (ನ್ಯಾಷನಲ್ ಪಬ್ಲಿಕ್ ಪಾರ್ಟಿ) ಅಭ್ಯರ್ಥಿ ಪಾರ್ವತಿಬಾಯಿ ಸಲ್ಲಿಸಿದ್ದ ಉಮೇದುವಾರಿಕೆಗೆ ಒಬ್ಬರೇ ಸೂಚಕರ ಸಹಿ ಮಾಡಿರುವುದರಿಂದ ತಿರಸ್ಕೃತಗೊಂಡಿದೆ.ಶಿವಮೊಗ್ಗ ನಗರ ಕ್ಷೇತ್ರದಲ್ಲಿ 19 ಅಭ್ಯರ್ಥಿಗಳು ಸಲ್ಲಿಸಿರುವ 32 ಉಮೇದುವಾರಿಕೆಗಳು, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ 14 ಅಭ್ಯರ್ಥಿಗಳ 18 ನಾಮಪತ್ರಗಳು ಸ್ವೀಕೃತಗೊಂಡಿವೆ.ಭದ್ರಾವತಿ ಕ್ಷೇತ್ರದಲ್ಲಿ ನಾಮಪತ್ರ ಪರಿಶೀಲನೆ ವೇಳೆ 2 ನಾಮಪತ್ರಗಳು ತಿರಸ್ಕೃತವಾಗಿದ್ದು, 22 ಅಭ್ಯರ್ಥಿಗಳ 30 ನಾಮಪತ್ರಗಳು ಅಂಗೀಕರಿಸಲ್ಪಟ್ಟಿವೆ. ಹಾಗೆಯೇ, ಶಿಕಾರಿಪುರದಲ್ಲಿ ಎಲ್ಲಾ 14 ಅಭ್ಯರ್ಥಿಗಳು ಸಲ್ಲಿಸಿದ್ದ 24 ನಾಮಪತ್ರಗಳೂ ಅಂಗೀಕಾರಗೊಂಡಿವೆ.ಇನ್ನು ಸಾಗರ ವಿಧಾನಸಭಾ ಕ್ಷೇತ್ರದ 11 ಅಭ್ಯರ್ಥಿಗಳು ಸಲ್ಲಿಸಿದ್ದ 16 ನಾಮಪತ್ರಗಳು ಮತ್ತು ತೀರ್ಥಹಳ್ಳಿ ಕ್ಷೇತ್ರದಲ್ಲಿ ಸ್ಪರ್ಧಿಸಲು 11 ಅಭ್ಯರ್ಥಿಗಳು ಸಲ್ಲಿಸಿದ್ದ 25 ಉಮೇದುವಾರಿಕೆಗಳು ಹಾಗೂ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ 12 ಅಭ್ಯರ್ಥಿಗಳ 39 ನಾಮಪತ್ರಗಳು ಸ್ವೀಕೃತಗೊಂಡಿವೆ.  ಸದ್ಯ 103 ಅಭ್ಯರ್ಥಿಗಳು ಕಣದಲ್ಲಿದ್ದು, ಇವರಲ್ಲಿ 49 ಸ್ವತಂತ್ರ ಅಭ್ಯರ್ಥಿಗಳಿದ್ದಾರೆ. ಏ. 20ರ ಮಧ್ಯಾಹ್ನ 3ರವರೆಗೆ ನಾಮಪತ್ರ ಹಿಂಪಡೆಯಲು ಕಾಲಾವಕಾಶವಿದ್ದು, ಅಂದು ಸ್ಪರ್ಧಾ ಕಣದಲ್ಲಿ ಅಂತಿಮವಾಗಿ ಉಳಿಯುವ ಅಭ್ಯರ್ಥಿಗಳ ಚಿತ್ರಣ ದೊರೆಯಲಿದೆ.

ಎಲ್ಲಾ ನಾಮಪತ್ರ ಪುರಸ್ಕೃತ

ಸಾಗರ: ಇಲ್ಲಿನ ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು 11 ನಾಮಪತ್ರಗಳು ಸಲ್ಲಿಕೆಯಾಗಿದ್ದು ಗುರುವಾರ ಅದರ ಪರಿಶೀಲನೆ ನಡೆದಿದ್ದು, ಎಲ್ಲಾ ನಾಮಪತ್ರಗಳು ಪುರಸ್ಕೃತಗೊಂಡಿವೆ. ಆದರೆ, ಇಂಡಿಯನ್ ಡೆಮೊಕ್ರಟಿಕ್ ಪಕ್ಷದ ಅಭ್ಯರ್ಥಿ ಎಂದು ನಾಮಪತ್ರ ಸಲ್ಲಿಸಿದ್ದ ಎನ್. ಮೇಘರಾಜ್ ಅವರು ಆ ಪಕ್ಷದ `ಎ' ಅಥವಾ `ಬಿ' ಫಾರಂ ಸಲ್ಲಿಸದ ಕಾರಣ ಅವರನ್ನು ಪಕ್ಷೇತರ ಅಭ್ಯರ್ಥಿ ಎಂದು ಪರಿಗಣಿಸಲಾಗಿದೆ.ವೀಕ್ಷಕರ ನೇಮಕ: ಇಲ್ಲಿನ ವಿಧಾನಸಭಾ ಕ್ಷೇತ್ರಕ್ಕೆ ವೀಕ್ಷಕರಾಗಿ ಸುಬ್ಬರಾವ್ ಬಲರಾಮ್ ಪಾಟೀಲ್ ಅವರನ್ನು ಚುನಾವಣಾ ಆಯೋಗ ನೇಮಕ ಮಾಡಿದೆ. ಅವರು ಶಿವಮೊಗ್ಗ ರಸ್ತೆಯ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದಾರೆ. ದೂರುಗಳನ್ನು ಸಲ್ಲಿಸಲು ಸಾರ್ವಜನಿಕರು ಅವರನ್ನು ಪ್ರತಿದಿನ ಸಂಜೆ 5ರಿಂದ 7ರ ನಡುವೆ ಭೇಟಿಯಾಗಬಹುದು. ಅವರ ಮೊಬೈಲ್: 94489 05482.ಶಿಕಾರಿಪುರ ವರದಿ

ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಲ್ಲಿಕೆಯಾದ 14 ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರಗೊಂಡಿದೆ ಎಂದು ಚುನಾವಣಾಧಿಕಾರಿ ಗೋಪಾಲ್ ಹೇಳಿದರು.ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ನಾಮಪತ್ರ ಪರಿಶೀಲನಾ ಸಭೆ ನಂತರ ಮಾಹಿತಿ ನೀಡಿದರು. ವೀಕ್ಷಕ ಡಾ.ಸಂತೋಷ್ ಬಾಬು, ಚುನಾವಣಾಧಿಕಾರಿ ಸಂಪರ್ಕಾಧಿಕಾರಿ ಅಶೋಕ್ ಮೊರಬ, ತಹಶೀಲ್ದಾರ್ ಪ್ರಕಾಶ್ ಗಣಚಾರಿ, ಉಪ ತಹಶೀಲ್ದಾರ್ ಎನ್.ಜೆ. ನಾಗರಾಜ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ನಾಮಪತ್ರಗಳು ಸ್ವೀಕೃತ

ಭದ್ರಾವತಿ: ಕ್ಷೇತ್ರದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಎಲ್ಲಾ 22 ಮಂದಿಯ ನಾಮಪತ್ರಗಳು ಅಂಗೀಕಾರವಾಗಿದೆ.

ಗುರುವಾರ ನಡೆದ ನಾಮಪತ್ರ ಪರಿಶೀಲನೆ ಕಾರ್ಯ ನಂತರ ಎಲ್ಲ ನಾಮಪತ್ರಗಳು ಸ್ವೀಕೃತವಾಗಿವೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)