ಸೋಮವಾರ, ನವೆಂಬರ್ 18, 2019
20 °C

ಮೂರು ಬಾರಿ ನಾಮಪತ್ರ!

Published:
Updated:

ಸಿಂದಗಿ: ನಾಮಪತ್ರ ಸಲ್ಲಿಸುವ ಕೊನೆಯ ದಿನದ ಮುನ್ನಾ ದಿನ ಮಂಗಳವಾರ ನಾಲ್ಕು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣಪ್ಪ ಸುಣಗಾರ ಸಾವಿರಾರು ಬೆಂಬಲಿಗ ರೊಂದಿಗೆ ಮೆರವಣಿಗೆ ನಡೆಸಿದರು. ಕಾಂಗ್ರೆಸ್ ಪ್ರಚಾರ ಕಾರ್ಯಾಲಯ ದಿಂದ ಹೊರಟ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದಿತು.ಮೆರವಣಿಗೆಯಲ್ಲಿ ಬಹು ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು. ಅದರಲ್ಲಿ ಹಲವು ಮಹಿಳೆಯರು “ನಮ್ಗ ರೊಕ್ಕಾ ಕೊಟ್ಟು ಕರಿಸಿಲ್ಲರ‌್ರಿ, ನಮ್ಮ ವಾರ್ಡಿನ ಪುರಸಭೆ ಸದಸ್ಯ ಗೊಲ್ಲಾಳನ ಮುಖಾ ನೋಡಿ ಬಂದೀವಿ, ನಾಳೆಯಿಂದ ಹಳ್ಯಾಗ ಚುನಾವಣಾ ಪ್ರಚಾರಕ್ಕ ಕರಕೊಂಡು ಹೋಗುವಾಗ ನಿಮ್ಮ ದಗದದ(ಕೂಲಿ ಕೆಲಸ) ಪಗಾರ ಕೊಡ್ತೀವಿ ಅಂತಾ ಹೇಳ್ಯಾರ‌್ರಿ. ಇವತ್ತೇನು ರೊಕ್ಕಾ ಕೇಳಂಗಿಲ್ಲರ‌್ರೀ' ಎಂದು ಅವರು `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.ಅಲ್ಲದೇ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರೂ ಅವರಲ್ಲಿ ಸಿಂದಗಿ ಮತಕ್ಷೇತ್ರದ ಮತದಾರ ರಲ್ಲದವರು ಅಂದ್ರೆ ದೇವರಹಿಪ್ಪರಗಿ ಮತಕ್ಷೇತ್ರದ ಕಲಕೇರಿ ಭಾಗದವರಿದ್ದಾರೆ ಎಂದು ಕಾಂಗ್ರೆಸ್ ಧುರೀಣರೊಬ್ಬರು ಒಪ್ಪಿಕೊಂಡರು.ಮೆರವಣಿಗೆಯನ್ನು ಗಮನಿಸಿದರೆ ಚುನಾವಣಾ ನೀತಿ ಸಂಹಿತೆ ನಿಯಮ ಗಳನ್ನು ಗಾಳಿಗೆ ತೂರಿದಂತೆ ಕಂಡು ಬಂದಿತು. ಸಿಕ್ಕಾಪಟ್ಟೆ ಕಾಂಗ್ರೆಸ್ ಪಕ್ಷದ ಧ್ವಜಗಳು, ಕಾಂಗ್ರೆಸ್ ಟೋಪಿಗಳು, ಕಾಂಗ್ರೆಸ್ ಛತ್ರಿಗಳು ಕಾರ್ಯಕರ್ತರ ಕೈಯಲ್ಲಿ ತಲೆಯ ಮೇಲಿದ್ದವು.ಸುಣಗಾರ ಇಂದು ಮೂರನೇ ನಾಮಪತ್ರ ಸಲ್ಲಿಸಿದರು. ಬುಧವಾರವೂ ನಾಲ್ಕನೇ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ಹೀಗೆ ನಾಲ್ಕು ಸಲ ನಾಮಪತ್ರ ಸಲ್ಲಿಸುವಂತೆ ಯಾವುದೋ ಸ್ವಾಮೀಜಿ ತಿಳಿಸಿದ್ದಾರೆ ಎಂದು ಸುಣಗಾರರ ಆಪ್ತರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)