ಮೂರು ಬೇಡಿಕೆಗೆ ಸಂಸತ್ತು ಒಪ್ಪಿದರೆ ನಿರಶನ ಅಂತ್ಯ: ಪ್ರಧಾನಿಗೆ ಅಣ್ಣಾ ಪತ್ರ

7

ಮೂರು ಬೇಡಿಕೆಗೆ ಸಂಸತ್ತು ಒಪ್ಪಿದರೆ ನಿರಶನ ಅಂತ್ಯ: ಪ್ರಧಾನಿಗೆ ಅಣ್ಣಾ ಪತ್ರ

Published:
Updated:
ಮೂರು ಬೇಡಿಕೆಗೆ ಸಂಸತ್ತು ಒಪ್ಪಿದರೆ ನಿರಶನ ಅಂತ್ಯ: ಪ್ರಧಾನಿಗೆ ಅಣ್ಣಾ ಪತ್ರ

ನವದೆಹಲಿ (ಪಿಟಿಐ): ಲೋಕಪಾಲ ವಿಚಾರದಲ್ಲಿ ಉದ್ಭವಿಸಿರುವ ಕಗ್ಗಂಟನ್ನು ಬಿಡಿಸಲು ತೀವ್ರ ಯತ್ನಗಳು ನಡೆದಿರುವಂತೆಯೇ ಅಣ್ಣಾ ಹಜಾರೆ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದು ತಾವು ಮುಂದಿಟ್ಟಿರುವ ಮೂರು ಪ್ರಮುಖ ಬೇಡಿಕೆಗಳನ್ನು ಸಂಸತ್ತು ಒಪ್ಪಿದರೆ ನಿರಶನ ಕೊನೆಗೊಳಿಸುವುದಾಗಿ ತಿಳಿಸಿದ್ದಾರೆ.ಆದರೆ ಶಾಸನ ಅಂಗೀಕಾರದವರೆಗೂ ತಮ್ಮ ಹೋರಾಟ ಮುಂದುವರಿಯುವುದು ಎಂದೂ ಅವರು ಸ್ಪಷ್ಟ ಪಡಿಸಿದ್ದಾರೆ.ಪ್ರಧಾನಿಗೆ ಅಣ್ಣಾ ಹಜಾರೆ ಅವರು ಬರೆದಿರುವ ಈ ಪತ್ರವು ಅಣ್ಣಾ ತಂಡದ ಪರಿಷ್ಕೃತ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಬೇಕು ಎಂದು ಆಗ್ರಹಿಸಿದೆ. ಈ ಮಸೂದೆಯು ಎಲ್ಲ ಸರ್ಕಾರಿ ನೌಕರರನ್ನು ಲೋಕಪಾಲರ ವ್ಯಾಪ್ತಿಗೆ ತರಬೇಕು, ಪ್ರತಿಯೊಂದು ಇಲಾಖೆಯ ಪ್ರತಿ ಕೆಲಸಕ್ಕೆ ಸಮಯದ ಗಡುವು ನಿಗದಿ ಪಡಿಸಿ ಕಚೇರಿಗಳ ಮುಂದೆ ಪ್ರದರ್ಶಿಸಬೇಕು ಮತ್ತು ಎಲ್ಲಾ ರಾಜ್ಯಗಳಲ್ಲೂ ಲೋಕಾಯುಕ್ತ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂಬ ಬೇಡಿಕೆಗಳನ್ನು ಒಳಗೊಂಡಿದೆ.~ಈ ಮೂರು ಪ್ರಸ್ತಾವಗಳ ಬಗ್ಗೆ ಸರ್ವಾನುಮತ ಮೂಡಿದರೆ ನಿರಶನ ನಿಲ್ಲಿಸಬಹುದು ಎಂದು ನನ್ನ ಅಂತಃಸಾಕ್ಷಿ ಹೇಳುತ್ತಿದೆ. ಜನಲೋಕಪಾಲ ಮಸೂದೆಯಲ್ಲಿ ಇರುವ ಆಯ್ಕೆ ಪ್ರಕ್ರಿಯೆ ಮತ್ತಿತರ ವಿಚಾರಗಳು ಕೂಡಾ ಭ್ರಷ್ಟಾಚಾರ ನಿಗ್ರಹ ನಿಟ್ಟಿನಲ್ಲಿ ಪ್ರಮುಖವಾದ ವಿಚಾರಗಳೇ~ ಎಂದು ಅಣ್ಣಾ ತಮ್ಮ ಪತ್ರದಲ್ಲಿ ಹೇಳಿದ್ದಾರೆ.~ಇತರ ವಿಷಯಗಳ ಬಗೆಗೂ ಸಂಸತ್ತು ನಿರ್ಧಾರ ಕೈಗೊಳ್ಳುವವರೆಗೂ ನಾನು ರಾಮಲೀಲಾ ಮೈದಾನದಲ್ಲಿ ಬೆಂಬಲಿಗರ ಜೊತೆಗೆ ಹೋರಾಟ ಮುಂದುವರೆಸುವೆ~ ಎಂದೂ ಅವರು ತಮ್ಮ ಎರಡು ಪುಟಗಳ ಪತ್ರದಲ್ಲಿ ತಿಳಿಸಿದ್ದಾರೆ.ಬಲಿಷ್ಠ ಲೋಕಪಾಲ ಮಸೂದೆಗಾಗಿ ನಡೆಸುತ್ತಿರುವ ಚಳವಳಿಯನ್ನು ಗಮನಕ್ಕೆ ತೆಗೆದುಕೊಂಡದ್ದಕ್ಕಾಗಿ ಸಂಸತ್ತನ್ನು ಅಭಿನಂದಿಸಿದ ಹಜಾರೆ, ~ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತಿನ ಬಗ್ಗೆ ನನಗೆ ಅಪಾರ ಗೌರವ ಇದೆ~ ಎಂದು ಹೇಳಿದ್ದಾರೆ.~ನಾನು ಯಾವುದೇ ಸ್ವಾರ್ಥ ಹಿತಾಸಕ್ತಿಗಾಗಿ ನಿರಶನ ಕುಳಿತಿಲ್ಲ. ನಾನು ಅಧಿಕಾರದಲ್ಲೂ ಇಲ್ಲ. ಸಮಾಜ ಮತ್ತು ಬಡಜನರಿಗಾಗಿ ಏನಾದರೂ ಮಾಡಬೇಕೆಂದು ಬಯಸಿರುವ ಒಬ್ಬ ಅತ್ಯಂತ ಸಾಮಾನ್ಯ ಮನುಷ್ಯ ನಾನು. ಭ್ರಷ್ಟಾಚಾರದ ಕಾರಣಕ್ಕಾಗಿ ಸಾಮಾನ್ಯ ಮನುಷ್ಯರು ಹೋರಾಡುತ್ತಾ ಕುಳಿತುಕೊಳ್ಳುವುದನ್ನು ಸಹಿಸಲು ನನಗೆ ಸಾಧ್ಯವಿಲ್ಲ~ ಎಂದೂ ಅಣ್ಣಾ ಬರೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry