ಶನಿವಾರ, ಆಗಸ್ಟ್ 15, 2020
21 °C

ಮೂರು ವರ್ಷಗಳ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಪಶುವೈದ್ಯರ ಕೊರತೆ ನಿಭಾಯಿಸಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳುತ್ತಿದ್ದು, ಅನುದಾನದ ಕೊರತೆ ಇಲ್ಲ ಎಂದು ಪಶುಸಂಗೋಪನಾ ಸಚಿವ ರೇವುನಾಯಕ ಬೆಳಮಗಿ ತಿಳಿಸಿದ್ದಾರೆ.“ರಾಜ್ಯದಲ್ಲಿ ಮೊದಲ ಬಾರಿಗೆ ಈ ಸಲ ಪಶುವೈದ್ಯಕೀಯ ಡಿಪ್ಲೊಮಾ ಕೋರ್ಸ್ ಆರಂಭಿಸಲಾಗುತ್ತಿದೆ. ಶಿಗ್ಗಾಂವ ತಾಲ್ಲೂಕು ಬಂಕಾಪುರ ಹಾಗೂ ತಿಪಟೂರು ತಾಲ್ಲೂಕಿನ ಕೊನೇಹಳ್ಳಿಯನ್ನು ಇದಕ್ಕೆ ಆಯ್ಕೆ ಮಾಡಲಾಗಿದೆ” ಎಂದು ತಿಳಿಸಿದರು.ರಾಜ್ಯ ಸರ್ಕಾರಕ್ಕೆ ಮೂರು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ತಮ್ಮ ಇಲಾಖೆಯ ಸಾಧನೆಗಳನ್ನು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಿಸಿ, “ಈ ಮೂರೂ ವರ್ಷಗಳ ಕಾಲ ಉತ್ತಮ ಪ್ರಗತಿ ಸಾಧಿಸಲಾಗಿದೆ. ಪಶುವೈದ್ಯರ ನೇಮಕಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದ್ದು, ಖಾಲಿಯಿರುವ ಹುದ್ದೆ ಭರ್ತಿಗೆ ಕ್ರಮ ಜರುಗಿಸಲಾಗಿದೆ” ಎಂದರು.2008-09ರಲ್ಲಿ ರೂ. 293 ಕೋಟಿ ಬಿಡುಗಡೆ ಮಾಡಿದ್ದರೆ, ಆ ಪೈಕಿ ರೂ 276 ಕೋಟಿ ಖರ್ಚಾಗಿದೆ. ಅದರಂತೆ 2009-10 ಹಾಗೂ 2010-11ರಲ್ಲಿ ಬಿಡುಗಡೆಯಾದ 431 ಮತ್ತು 542 ಕೋಟಿರೂಪಾಯಿಗಳಲ್ಲಿ ಕ್ರಮವಾಗಿ 371 ಹಾಗೂ 527 ಕೋಟಿ ರೂಪಾಯಿ ಖರ್ಚಾಗಿದೆ. ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 2 ರೂಪಾಯಿ ಸಹಾಯಧನ ನೀಡಲಾಗಿದ್ದು, ಇದರಿಂದ 6.41 ಲಕ್ಷ ಕುಟುಂಬಗಳಿಗೆ ನೆರವಾಗಿದೆ ಎಂದು ಬೆಳಮಗಿ ವಿವರಿಸಿದರು.ಪಶುವೈದ್ಯಕೀಯ ಕೋರ್ಸ್ ವಿದ್ಯಾರ್ಥಿಗಳಿಗೆ ಮಹಾಗಾಂವ್ ರಸ್ತೆಯಲ್ಲಿ ಕಾಲೇಜು ನಿರ್ಮಿಸಲು 3.76 ಕೋಟಿ ರೂಪಾಯಿ ವೆಚ್ಚದ ಕಟ್ಟಡಕ್ಕೆ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಕೇಂದ್ರದ ಮಾರ್ಗಸೂಚಿ ಪ್ರಕಾರ ಈ ಕೋರ್ಸ್ ನಡೆಸಲು ಕನಿಷ್ಟ 60 ವಿದ್ಯಾರ್ಥಿಗಳು ಇರಬೇಕಾಗಿದೆ. ಆದರೆ ಹಾಸನ, ಶಿವಮೊಗ್ಗ ಸೇರಿದಂತೆ ಬೇರೆಲ್ಲೂ ನಿಗದಿತ ಸಂಖ್ಯೆಯ ವಿದ್ಯಾರ್ಥಿಗಳಿಲ್ಲ ಎಂದರು.ಪಶುವೈದ್ಯಕೀಯ: ರಾಜ್ಯದ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದ್ದು, ಖಾಲಿ ಹುದ್ದೆ ಭರ್ತಿಗೆ ಸರ್ಕಾರ ಹೆಚ್ಚಿನ ಗಮನ ಕೊಟ್ಟಿದೆ. 482 ಪಶುವೈದ್ಯರ ಹುದ್ದೆಗೆ 211 ಮಂದಿ ಆಯ್ಕೆಯಾಗಿದ್ದು, 26 ವೈದ್ಯರು ಮಾತ್ರ ಹಾಜರಾಗಿದ್ದಾರೆ.ಪಶುವೈದ್ಯಕೀಯ ಕೋರ್ಸ್ ಮುಗಿಸಿದವರು ಬೇರೆ ಹುದ್ದೆಗಳನ್ನು ಅರಸಿ ಹೋಗುವುದರಿಂದ ಖಾಲಿ ಹುದ್ದೆಗಳು ಸಂಪೂರ್ಣ ಭರ್ತಿಯಾಗುತ್ತಿಲ್ಲ ಎಂದು ಸಚಿವರು ವಿವರಿಸಿದರು. ಮೂರು ವರ್ಷಗಳ ಪಶುವೈದ್ಯಕೀಯ ಡಿಪ್ಲೊಮಾ ಅಭ್ಯಾಸ ಮಾಡುವವರಿಗೆ 1,000 ರೂಪಾಯಿ ಶಿಷ್ಯವೇತನ ಕೊಡಲಾಗುತ್ತಿದ್ದು, ಕೋರ್ಸ್ ಮುಗಿದ ಬಳಿಕ ಹೆಚ್ಚಿನ ಉದ್ಯೋಗಾವಕಾಶ ಸಿಗಲಿದೆ ಎಂದೂ ಹೇಳಿದರು.ಬೆಂಗಳೂರು, ಹಾಸನ, ಶಿವಮೊಗ್ಗ ಹಾಗೂ ಬೀದರ ಕಾಲೇಜುಗಳಿಂದ ಈವರೆಗೆ 821 ವೈದ್ಯರು ಹೊರಬಂದಿದ್ದಾರೆ. ವೈದ್ಯರ ಸಂಖ್ಯೆ ಹೆಚ್ಚಿಸಲು ಈ ಸಲ ಅಥಣಿ ಹಾಗೂ ಗದಗನಲ್ಲಿ ಹೊಸ ಕಾಲೇಜು ಆರಂಭಿಸಲು ಸರ್ಕಾರ ಅಂಗೀಕಾರ ನೀಡಿದೆ ಎಂಬ ಮಾಹಿತಿಯನ್ನು ನೀಡಿದರು.ಧನ್ವಂತರಿ: `ಆರೋಗ್ಯ ಕವಚ~ದ ಮಾದರಿಯಲ್ಲೇ ಜಾನುವಾರುಗಳ ತುರ್ತುಚಿಕಿತ್ಸೆಗೆ `ಧನ್ವಂತರಿ~ ಯೋಜನೆಯನ್ನು ಬೆಳಗಾವಿ, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ

ಜಾರಿಗೊಳಿಸಲಾಗುತ್ತಿದೆ.ಇದನ್ನು ಗುಲ್ಬರ್ಗ ಜಿಲ್ಲೆಯಲ್ಲೂ ಆರಂಭಿಸುವಂತೆ ಮನವಿ ಮಾಡಲಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಪ್ಪಿಗೆ ಸೂಚಿಸಿದ್ದಾರೆ. ತಾಲ್ಲೂಕಿಗೆ ಒಂದರಂತೆ ಒಟ್ಟು 174 ವಾಹನಗಳನ್ನು ಇದಕ್ಕೆ ಮೀಸಲಿಡಲಾಗುವುದು. ಪ್ರತಿ ವಾಹನದಲ್ಲೂ ಪಶುವೈದ್ಯ ಹಾಗೂ ಔಷಧಿ ಇರಲಿದ್ದು, ಇದಕ್ಕಾಗಿಯೇ ಪ್ರತ್ಯೇಕ ದೂರವಾಣಿ ಸಂಖ್ಯೆಯನ್ನು ಒದಗಿಸಲಾಗುವುದು ಎಂದು ಸಚಿವ ಬೆಳಮಗಿ ವಿವರಿಸಿದರು.ಸೌಲಭ್ಯ: `ನಬಾರ್ಡ್~ ಯೋಜನೆಯಡಿ ಈವರೆಗೆ 583 ಪಶು ಆಸ್ಪತ್ರೆ ನಿರ್ಮಿಸಲಾಗಿದೆ. `ಬಲವರ್ಧನ~ ಯೋಜನೆಯಡಿ 62 ಕಟ್ಟಡ ಕಟ್ಟಲಾಗಿದೆ. ಸದ್ಯ ಪ್ರತಿ ಆಸ್ಪತ್ರೆ ಕಟ್ಟಡಕ್ಕೂ 10ರಿಂದ 18 ಲಕ್ಷ ರೂಪಾಯಿ ವೆಚ್ಚ ಮಾಡಲು ಸರ್ಕಾರ ತೀರ್ಮಾನಿಸಿದೆ.ಆಸ್ಪತ್ರೆಗೆ ಬೇಕಾಗುವ ಔಷಧಿಗಳನ್ನು ಖರೀದಿಸಲು ಟೆಂಡರ್ ಕರೆಯಲಾಗುತ್ತಿದೆ. ಟೆಂಡರ್ ಹಾಕುವವರು ಪೂರೈಸುವ ಔಷಧಿಗಳನ್ನು ಪ್ರಯೋಗಾಲಯಕ್ಕೆ ಕಳಿಸಿ, ಅದು ಗುಣಮಟ್ಟದಿಂದ ಕೂಡಿದ್ದರೆ ಮಾತ್ರ ಟೆಂಡರ್ ಸ್ವೀಕೃತವಾಗುವ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದೆ ಎಂದು ಸಚಿವರು ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.