ಗುರುವಾರ , ಮೇ 13, 2021
16 °C

ಮೂರು ವರ್ಷದಲ್ಲಿ ಸೂರ್ಯನಗರ 4ನೇ ಹಂತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ವತಿಯಿಂದ ಆನೇಕಲ್ ತಾಲ್ಲೂಕಿನಲ್ಲಿ ಸೂರ್ಯನಗರ 4ನೇ ಹಂತದ ಬೃಹತ್ ಬಡಾವಣೆ ನಿರ್ಮಿಸಲು ತೀರ್ಮಾನಿಸಿದ್ದು, 50 ಸಾವಿರ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ವಸತಿ ಸಚಿವ ಅಂಬರೀಷ್ ಗುರುವಾರ ಇಲ್ಲಿ ಪ್ರಕಟಿಸಿದರು.ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಕೆಎಚ್‌ಬಿ ಆಡಳಿತ ಮಂಡಳಿಯ ಸಭೆಯಲ್ಲಿ ಭಾಗವಹಿಸಿದ ಅವರು ನಂತರ ಸುದ್ದಿಗಾರರ ಜತೆ ಮಾತನಾಡಿದರು.

ಬೆಂಗಳೂರು ಆಸುಪಾಸಿನಲ್ಲಿ ಇದು ಅತಿ ದೊಡ್ಡ ಬಡಾವಣೆ ಆಗಲಿದ್ದು, ಸುಮಾರು 2,400 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು. ಮೂರು- ನಾಲ್ಕು ದಿನಗಳಲ್ಲಿ ಭೂಸ್ವಾಧೀನಕ್ಕೆ ಪ್ರಾಥಮಿಕ ಹಂತದ ಅಧಿಸೂಚನೆ ಹೊರಡಿಸಲಾಗುವುದು ಎಂದರು.10 ಸಾವಿರ ನಿವೇಶನಗಳಲ್ಲಿ 17 ಸಾವಿರ ನಿವೇಶನಗಳನ್ನು ಬಡವರಿಗೆ ಹಂಚಿಕೆ ಮಾಡಲಾಗುವುದು. ಉಳಿದವುಗಳಲ್ಲಿ ನಿವೇಶನದ ಜತೆಗೆ ಫ್ಲ್ಯಾಟ್‌ಗಳ ನಿರ್ಮಾಣ ಕೂಡ ಇರುತ್ತದೆ. ಒಟ್ಟಾರೆ ಬಡಾವಣೆ ನಿರ್ಮಾಣಕ್ಕೆ ಸುಮಾರು ಐದು ಸಾವಿರ ಕೋಟಿ ರೂಪಾಯಿ ಬೇಕಾಗುತ್ತದೆ. ಜಮೀನು ಕಳೆದುಕೊಳ್ಳುವ ರೈತರಿಗೆ, ಅಭಿವೃದ್ಧಿಪಡಿಸಿದ ಶೇ 40ರಷ್ಟು ಜಾಗ ನೀಡುವ ಯೋಜನೆ ಜತೆಗೆ ಪರಸ್ಪರ ಮಾತುಕತೆ ಮೂಲಕ ದರ ನಿಗದಿಗೆ ಅವಕಾಶ ಕಲ್ಪಿಸಲಾಗಿದೆ. ಇದೊಂದು ರೈತಸ್ನೇಹಿ ಭೂಸ್ವಾಧೀನ ಎಂದು ಅಂಬರೀಷ್ ಬಣ್ಣಿಸಿದರು.`ರೈತರ ಸಮಸ್ಯೆ ನನಗೂ ಚೆನ್ನಾಗಿ ಗೊತ್ತಿದೆ. ಹೀಗಾಗಿ ಅವರಿಗೆ ಉತ್ತಮ ಬೆಲೆ ಕೊಟ್ಟೇ ಜಮೀನು ಸ್ವಾಧೀನಕ್ಕೆ ಪಡೆಯುವುದು. ನಗದು ರೂಪದ ಪರಿಹಾರ ಪಡೆಯಬಹುದು ಅಥವಾ ಶೇ 40ರಷ್ಟು ಅಭಿವೃದ್ಧಿಪಡಿಸಿದ ಜಾಗ ಪಡೆಯಬಹುದು. ಯಾವುದು ಬೇಕು ಎಂಬುದನ್ನು ರೈತರೇ ತೀರ್ಮಾನ ಮಾಡಲಿ. ಇದರ ಜತೆಗೆ ಪ್ರತಿ ಎಕರೆಗೆ 30್ಡ40 ಅಡಿ ವಿಸ್ತೀರ್ಣದ ಒಂದು ನಿವೇಶವನ್ನು ಉಚಿತವಾಗಿ ನೀಡುವ ಪದ್ಧತಿಯೂ ಇದೆ' ಎಂದರು.ಆನೇಕಲ್ ತಾಲ್ಲೂಕಿನ ಬೊಮ್ಮಂಡಹಳ್ಳಿ, ಇಂಡ್ಲವಾಡಿ, ಬಗ್ಗಲದೊಡ್ಡಿ, ಕಾಡುಜಕ್ಕನಹಳ್ಳಿ ಹಾಗೂ ಕೋನಸಂದ್ರ ವ್ಯಾಪ್ತಿಯಲ್ಲಿ ಈ ಬಡಾವಣೆ ತಲೆ ಎತ್ತಲಿದೆ. ಮೂರು ವರ್ಷಗಳಲ್ಲಿ ಬಡಾವಣೆ ನಿರ್ಮಾಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.ಸೂರ್ಯನಗರದಲ್ಲಿ ಇದುವರೆಗೂ ಅಭಿವೃದ್ಧಿಪಡಿಸಿರುವ ಮೂರು ಹಂತದ ಬಡಾವಣೆಗಳಿಗೆ ಒಟ್ಟು 2 ಸಾವಿರ ಎಕರೆ ಸ್ವಾಧೀನಪಡಿಸಿಕೊಂಡು, 20 ಸಾವಿರ ನಿವೇಶನ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ 2 ಸಾವಿರ ಮನೆಗಳು ಸೇರಿವೆ ಎಂದರು.ಜಮೀನಿನ ದರ ಹೆಚ್ಚಾದ ಕಾರಣ ನಿವೇಶನ ದರ ಕೂಡ ಸಹಜವಾಗಿ ಜಾಸ್ತಿಯಾಗಲಿದೆ. ಅಂದಾಜಿನ ಪ್ರಕಾರ ಚದರಡಿಗೆ 850ರಿಂದ 900 ರೂಪಾಯಿ ಬೀಳುವ ಸಾಧ್ಯತೆ ಇದೆ ಎಂದರು.ಶಿಂಷಾದಿಂದ ನೀರು: ಆನೇಕಲ್ ಪಟ್ಟಣ ಹಾಗೂ ಸೂರ್ಯನಗರದ ಎಲ್ಲ ಹಂತಗಳ ಬಡಾವಣೆಗಳಿಗೂ ಶಿಂಷಾ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶ ಇದೆ. ಇದಕ್ಕೆ ಸುಮಾರು 450 ಕೋಟಿ ರೂಪಾಯಿಗಳ ಯೋಜನೆ ಸಿದ್ಧವಾಗಿದೆ ಎಂದೂ ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.