ಶುಕ್ರವಾರ, ಮೇ 14, 2021
21 °C

ಮೂರು ಸಾವಿರ ಜನವಸತಿಗೆ ಒಂದೇ ಕೈಪಂಪು!

ಪ್ರಜಾವಾಣಿ ವಾರ್ತೆ/ ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

ಐನಾಪುರ ತಾಂಡಾ (ವಿಜಾಪುರ): ಇಲ್ಲಿ ಒಂದು ಕೈಪಂಪು ಇದೆ. ಕೊಡ ನೀರು ಪಡೆಯಲು ಒಂದು ಗಂಟೆ ಪಂಪ್ ಮಾಡಬೇಕು. ದಿನಕ್ಕೆ ಎರಡು ಟ್ಯಾಂಕರ್ ನೀರು ಪೂರೈಸುತ್ತಿದ್ದರೂ ಅದು ರಾವಣನ ಹೊಟ್ಟಿಗೆ ಅರೆಕಾಸಿನ ಮಜ್ಜಿಗೆ ಹಾಕಿದಂತಾಗುತ್ತಿದೆ.  ನೀರಿಗಾಗಿ ನಿತ್ಯವೂ ಗುದ್ದಾಟ; ಪರದಾಟ ತಪ್ಪುತ್ತಿಲ್ಲ. ಕುಡಿಯುವ ನೀರಿಗಾಗಿ ತೋಟಗಳಿಗೆ ಅಲೆಯುವುದೂ ನಿಂತಿಲ್ಲ.ಐನಾಪುರ ತಾಂಡಾ ಇದು ವಿಜಾಪುರ ನಗರದಿಂದ ಐದು ಕಿ.ಮೀ. ಅಂತರದಲ್ಲಿರುವ ದೊಡ್ಡ ಜನವಸತಿ. ಅಂದಾಜು ಮೂರು ಸಾವಿರ ಜನ ವಾಸವಾಗಿದ್ದಾರೆ. ಇದು ಐನಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟಿದೆ.ತಾಂಡಾದಲ್ಲಿ ಎರಡು ಕೈಪಂಪುಗಳಿದ್ದು, ಒಂದು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಮೂರು ಕಿರು ನೀರು ಪೂರೈಕೆ ಯೋಜನೆಗಳಿದ್ದು,  ಅವುಗಳಲ್ಲಿ ಒಂದು ಮಾತ್ರ ಸುಸ್ಥಿತಿಯಲ್ಲಿದೆ. ಆದರೆ, ಅಗತ್ಯಕ್ಕೆ ತಕ್ಕಷ್ಟು ಅಂತರ್ಜಲ ಇಲ್ಲ.ಹೀಗಾಗಿ ಈ ಯೋಜನೆಯಿಂದ ಎರಡು ದಿನಕ್ಕೊಮ್ಮೆ 2-3 ಗಂಟೆಗಳಷ್ಟು ಮಾತ್ರ ನೀರು ಬರುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.ಕಳೆದ ವರ್ಷ ರೂ.26 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿತ್ತು. ಒಂದು ಕೊಳವೆ ಬಾವಿ ಕೊರೆದು ಪೈಪ್‌ಲೈನ್ ಸಹ ಅಳವಡಿಸಿದ್ದಾರೆ. ಟ್ಯಾಂಕ್ ನಿರ್ಮಿಸಲು ಗುಂಡಿ ಅಗೆದಿದ್ದು, ವರ್ಷ ಕಳೆದರೂ ಟ್ಯಾಂಕ್ ನಿರ್ಮಾಣ ಕಾಮಗಾರಿ ಆರಂಭಗೊಂಡಿಲ್ಲ. ಅಲ್ಲಿಂದ ತಾಂಡಾದಲ್ಲಿರುವ ಸೇದುವ ಬಾವಿಗಾದರೂ ನೀರು ಪೂರೈಸಿದರೆ ನಾವು ಆ ಬಾವಿಯಿಂದ ನೀರು ಪಡೆಯಲು ಅನುವಾಗುತ್ತಿತ್ತು ಎನ್ನುತ್ತಾರೆ ಗ್ರಾಮದ ಮುಖಂಡರು.`ಕಿರು ನೀರು ಪೂರೈಕೆಯ ಎರಡು ಯೋಜನೆಗಳ ಕೊಳವೆ ಬಾವಿಯನ್ನು ತೊಳೆದು ಪುನರುಜ್ಜೀವನಗೊಳಿಸುತ್ತೇವೆ ಎಂದು ಇಲಾಖೆಯವರು ಪೈಪ್‌ಗಳನ್ನು ಹೊರತೆಗೆದಿದ್ದಾರೆ. ಆದರೆ, 15 ದಿನ ಕಳೆದರೂ ರಿಪೇರಿ ಮಾತ್ರ ಮಾಡುತ್ತಿಲ್ಲ. ಕೇಳಿದರೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡುತ್ತಿಲ್ಲ~ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯೆ ಜಯಶ್ರೀ ಜಾಧವ, ಮುಖಂಡ ಚಂದು ಜಾಧವ ಇತರರು.`ನಮ್ಮ ತಾಂಡಾದ ನೀರಿನ ಬವಣೆ ತಪ್ಪಿಸಿ ಎಂದು ಸಾಕಷ್ಟು ಬಾರಿ ಮನವಿ ಮಾಡಿದ ನಂತರ ನಿತ್ಯ ಎರಡು ಟ್ಯಾಂಕರ್ ನೀರು ಪೂರೈಸುತ್ತಿದ್ದಾರೆ. ಆ ನೀರೂ ಸಹ ಕುಡಿಯಲು ಯೋಗ್ಯವಾಗಿಲ್ಲ. ಟ್ಯಾಂಕರ್ ಬರುತ್ತಿದ್ದಂತೆ ಪೈಪೋಟಿ-ಜಗಳ ಶುರುವಾಗುತ್ತವೆ. ಸಿಕ್ಕಷ್ಟು ನೀರು ತುಂಬಿಟ್ಟು ಕೊಳ್ಳುತ್ತೇವೆ. ಕುಡಿಯುವ ನೀರನ್ನು ದೂರದಿಂದ ಹೊತ್ತು ತರುತ್ತಿದ್ದೇವೆ. ಏನು ಮಾಡುವುದು. ಇದೆಲ್ಲ ನಮ್ಮ ಕರ್ಮ~ ಎಂದು ಹೆಸರು ಹೇಳಲೊಲ್ಲದ ವಿದ್ಯಾರ್ಥಿನಿ ಯೊಬ್ಬಳು ತನ್ನನ್ನೇ ತಾನು ಶಪಿಸಿಕೊಂಡಳು!`ದಿನಕ್ಕೆ ಕನಿಷ್ಠ 6 ಟ್ಯಾಂಕರ್ ನೀರು ಪೂರೈಸಬೇಕು. ಕೇವಲ 100 ಮೀಟರ್ ಹೊಸ ಪೈಪ್‌ಲೈನ್ ಅಳವಡಿಸಿದರೆ ವಿಜಾಪುರ ನಗರಕ್ಕೆ ಪೂರೈಕೆಯಾಗುವ ನೀರನ್ನು ನಮ್ಮ ತಾಂಡಾಕ್ಕೂ ಪೂರೈಸಬಹುದಾಗಿದೆ. ಪ್ರತಿ ವರ್ಷದ ಬೇಸಿಗೆಯಲ್ಲಿ ಎದುರಾಗುವ ನೀರಿನ ಸಮಸ್ಯೆ ತಪ್ಪಿಸಲು ನಮ್ಮ ತಾಂಡಾಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಗೊಳಿಸಬೇಕು~ ಎನ್ನುತ್ತಾರೆ ತಾಂಡಾದ ನಾಯಕ ತಾರಾಸಿಂಗ್ ಲಾಲಸಿಂಗ್ ನಾಯಕ, ಕಾರಬಾರಿ ಧನಸಿಂಗ್ ಸೀತಾರಾಮ ರಾಠೋಡ, ಗಂಗೂಬಾಯಿ, ಮಮತಾಜ್ ಮತ್ತಿತರರು.`ಐನಾಪುರ ತಾಂಡಾದಲ್ಲಿ  ನೀರಿನ ಸಮಸ್ಯೆ ಇರುವುದು ನಿಜ. ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದು, ಪಂಪ್‌ಸೆಟ್‌ಗಳ ರಿಪೇರಿಯನ್ನು ತುರ್ತಾಗಿ ಮಾಡಿಸುತ್ತಿದ್ದೇವೆ~ ಎಂಬುದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಕೆ. ಚಲವಾದಿ ಅವರ ವಿವರಣೆ.ಮಾಹಿತಿಗೆ ಸಂಪರ್ಕಿಸಿ

ವಿಜಾಪುರ ಜಿಲ್ಲೆಯಲ್ಲಿ ಈಗ ಭೀಕರ ಬರ. ಜೀವಜಲ ಬತ್ತಿ ಬರಿದಾಗುತ್ತಿದೆ. ಜನತೆ ಎದುರಿಸುತ್ತಿರುವ ಸಮಸ್ಯೆಯ ಮೇಲೆ `ಪ್ರಜಾವಾಣಿ~ಯ ಕ್ಷಕಿರಣ `ಬರದ ನಾಡಿನ ಬವಣೆ~ ಅಂಕಣ. ನಿಮ್ಮೂರಿನ ಸಮಸ್ಯೆ ಪರಿಹಾರಕ್ಕೆ ಈ ಅಂಕಣ ಸೂಕ್ತ ವೇದಿಕೆ.ನಮ್ಮ ವಿಳಾಸ: ಜಿಲ್ಲಾ ವರದಿಗಾರರು, ಪ್ರಜಾವಾಣಿ, ಸಾಂಗ್ಲಿಕರ ಕಾಂಪ್ಲೆಕ್ಸ್, ಸಕಾಫ್ ರೋಜಾ, ಕೇಂದ್ರ ಬಸ್ ನಿಲ್ದಾಣದ ಹತ್ತಿರ. ವಿಜಾಪುರ. ದೂರವಾಣಿ ಸಂಖ್ಯೆ: 08352-221515,

ಮೊಬೈಲ್: 9448470153

(ಗಣೇಶ ಚಂದನಶಿವ). 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.