ಮೂರು ಸ್ವರ್ಣಪದಕ ಪಡೆದ ಗ್ರಾಮೀಣ ಪ್ರತಿಭೆ

7

ಮೂರು ಸ್ವರ್ಣಪದಕ ಪಡೆದ ಗ್ರಾಮೀಣ ಪ್ರತಿಭೆ

Published:
Updated:

ನ್ಯಾಮತಿ: ಪ್ರತಿಭೆ ಎಂಬುದು ಯಾರೊಬ್ಬರ ಸ್ವತ್ತಲ್ಲ, ಸಾಧಕನ ಸ್ವತ್ತು ಎಂಬ ನಾಣ್ನುಡಿಯಂತೆ ಸಾಧನೆ ಮಾಡಬೇಕೆಂಬ ಛಲ, ಗುರುಗಳ ಪ್ರೋತ್ಸಾಹದಿಂದ ಗ್ರಾಮೀಣ ಯುವಕನೊಬ್ಬ ವಿಶ್ವವಿದ್ಯಾನಿಲಯದ ಮೂರು ಸ್ವರ್ಣ ಪದಕ ಪಡೆಯುವ ಮೂಲಕ ಗ್ರಾಮೀಣ ಪ್ರತಿಭೆ ಎನಿಸಿದ್ದಾನೆ.ನ್ಯಾಮತಿಯ ಸಿಂಪಿ ಜನಾಂಗದ ಎಸ್. ಮಂಜುನಾಥ ಕುವೆಂಪು ವಿವಿ ಸಮಾಜಶಾಸ್ತ್ರ ಎಂ.ಎ. ಪದವಿಯಲ್ಲಿ ಮೂರು ಸ್ವರ್ಣ ಪದಕಗಳನ್ನು ಬುಧವಾರ ನಡೆದ 22ನೇ ಘಟಿಕೋತ್ಸವ ಸಮಾರಂಭದಲ್ಲಿ ಪಡೆಯುವ ಮೂಲಕ ಗ್ರಾಮಕ್ಕೆ ಹೆಮ್ಮೆಯ ಪುತ್ರನಾಗಿದ್ದಾನೆ.ಗ್ರಾಮದ ಟೈಲರಿಂಗ್ ವೃತ್ತಿಯ ಸುಬ್ಬರಾವ್-ಕುಸುಮಾ ದಂಪತಿಯ ಏಕೈಕ ಪುತ್ರ ಮಂಜುನಾಥ, ವಾಸಕ್ಕೆ ಸ್ವಂತ ಮನೆ ಇಲ್ಲ, ಕಡು ಬಡತನ, ಬಟ್ಟೆ ಹೊಲಿದು ಜೀವನ ನಡೆಸಬೇಕಾದ ಪರಿಸ್ಥಿತಿ.ಇಂತಹ ವಾತಾವರಣದಲ್ಲಿ ನ್ಯಾಮತಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಉತ್ತಮ ಅಂಕಗಳಿಸಿ ಉತ್ತೀರ್ಣನಾದ ನಂತರ ಕಾಲೇಜಿನ ಗುರುಗಳ ಸೂಚನೆಯಂತೆ ಎಂಎ ವಿದ್ಯಾರ್ಥಿಯಾಗಿ, ಬಿಸಿಎಂ ವಸತಿನಿಲಯದ ವಿದ್ಯಾರ್ಥಿಯಾಗಿದ್ದು ಕೊಂಡು, ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದ ಫಲವಾಗಿ ಸಮಾಜಶಾಸ್ತ್ರ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿ ರ‌್ಯಾಂಕ್ ಪಡೆದದ್ದಕ್ಕೆ ಒಂದು ಪದಕ, ವಿಭಾಗದ ಉತ್ತಮ ಸಾಧನೆಗೆ ಒಂದು ಪದಕ ಹಾಗೂ ಕರ್ನಾಟಕ ಸೋಶಿಯಾಲಜಿ ಅಸೋಸಿಯೇಷನ್ ವಿಭಾಗದಿಂದ ಒಂದು ಪದಕ ಹೀಗೆ ಮೂರು ಸ್ವರ್ಣಪದಕಗಳು ಲಭ್ಯವಾಗಿವೆ.ಅಜ್ಜಂಪುರ ಗ್ರಾಮ ಕುರಿತು ಸಂಶೋಧನೆ ಮತ್ತು ವಿಶ್ವಕರ್ಮ ಸಮುದಾಯ ಕುರಿತ ಒಂದು ಸಮಾಜಶಾಸ್ತ್ರೀಯ ಅಧ್ಯಯನ ಮಾಡಿರುವುದಾಗಿ ಮಂಜುನಾಥ್  `ಪ್ರಜಾವಾಣಿ~ಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.ನಿಮ್ಮ ಸಾಧನೆಗೆ ಏನು ಸ್ಫೂರ್ತಿ ಎಂಬ ಪ್ರಶ್ನೆಗೆ, ಮನೆಯಲ್ಲಿನ ಬಡತನ, ಪದವಿ ತರಗತಿಯಲ್ಲಿ ತಪ್ಪಿದ ರ‌್ಯಾಂಕ್ ಮತ್ತು ನ್ಯಾಮತಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್.ಬಿ. ಸಿದ್ದಪ್ಪ, ಡಾ.ಕೆ.ಆರ್. ಭೋಗೇಶ್ವರಪ್ಪ, ಡಾ.ಟಿ. ಮಂಜುಳಾ, ಉಪನ್ಯಾಸಕಿ ಬಿ.ಟಿ. ನಾಗರತ್ನಾ ಮತ್ತು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಸಿ. ಚಂದ್ರಶೇಖರ, ಡಾ.ಗುರುಲಿಂಗಯ್ಯ, ಡಾ.ಅಂಜನಪ್ಪ, ಡಾ.ಇ. ಚಂದ್ರಶೇಖರ್ ಹಾಗೂ ಸ್ನೇಹಿತರ ಸಹಕಾರವೇ ಸ್ಫೂರ್ತಿ ಎಂದು ಸ್ಮರಿಸಿದರು.ಪ್ರಸ್ತುತ ಶಿವಮೊಗ್ಗದಲ್ಲಿ ಬಿ.ಇಡಿ ಅಭ್ಯಾಸ ಮಾಡುತ್ತಿದ್ದು, ಉಪನ್ಯಾಸಕನಾಗುವ ಇಚ್ಛೆ ವ್ಯಕ್ತಪಡಿಸಿರುವ ಮಂಜುನಾಥ್ ಅವರ ಮೊಬೈಲ್ ಸಂಖ್ಯೆ 81978 31588.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry