ಮೂರು ಹೊಸ ರೈಲು ಮಾರ್ಗ; ಕೈಗೂಡದ ಸಮೀಕ್ಷೆ ಭರವಸೆ

7

ಮೂರು ಹೊಸ ರೈಲು ಮಾರ್ಗ; ಕೈಗೂಡದ ಸಮೀಕ್ಷೆ ಭರವಸೆ

Published:
Updated:

ಮಂಗಳೂರು: ಕಳೆದ ಸಾಲಿನ ರೈಲ್ವೆ ಬಜೆಟ್‌ನಲ್ಲಿ ರಾಜ್ಯದ ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಮೂರು ಹೊಸ ರೈಲು ಮಾರ್ಗಗಳನ್ನು ನಿರ್ಮಿಸುವ ಸಾಧ್ಯತೆ ಕುರಿತು ಸಮೀಕ್ಷೆ ನಡೆಸುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಆದರೆ ಈ ಪೈಕಿ ಯಾವುದೇ ಮಾರ್ಗದ ಸಮೀಕ್ಷೆಯಲ್ಲೂ ಪ್ರಗತಿ ಕಾಣದಿರುವುದು ಸ್ಥಳೀಯರಲ್ಲಿ ನಿರಾಸೆ ಮೂಡಿಸಿದೆ.2010ರ ಫೆಬ್ರುವರಿಯಲ್ಲಿ ಮಂಡನೆಯಾದ 2010-11ರ ರೈಲ್ವೆ ಬಜೆಟ್‌ನಲ್ಲಿ ಮಂಗಳೂರು-ಕುಶಾಲನಗರ-ಮೈಸೂರು ಮಾರ್ಗ, ಬೈಂದೂರು -ಕೊಲ್ಲೂರು-ಮೂಡುಬಿದಿರೆ-ಧರ್ಮಸ್ಥಳ-ನೆಟ್ಟಣ ಮಾರ್ಗ ಹಾಗೂ ಪಡುಬಿದ್ರಿ-ಧರ್ಮಸ್ಥಳ ಹೊಸ ರೈಲು ಮಾರ್ಗಕ್ಕೆ ಸಮೀಕ್ಷೆ ನಡೆಸುವ ಪ್ರಸ್ತಾಪವಿತ್ತು. ಈ ಪ್ರಸ್ತಾಪಗಳಿಂದಾಗಿ ಮುಂದಿನ ವರ್ಷದಿಂದಲಾದರೂ ಕರಾವಳಿ ಪ್ರದೇಶದಲ್ಲಿ ರೈಲ್ವೆ ಸೌಕರ್ಯ ಅಭಿವೃದ್ಧಿಯಾಗುವ ಬಗ್ಗೆ ಸ್ಥಳೀಯರಲ್ಲಿ ಹೊಸ ಆಶಾಕಿರಣ ಮೂಡಿತ್ತು.‘ಯಾವುದೇ ಹೊಸ ರೈಲು ಮಾರ್ಗ ಆರಂಭಿಸುವ ಮುನ್ನ ಪ್ರಾಥಮಿಕ ತಾಂತ್ರಿಕ ಸಂಚಾರ ಸಮೀಕ್ಷೆ ನಡೆಸಲಾಗುತ್ತದೆ. ಆ ಬಳಿಕ ಆರ್ಥಿಕವಾಗಿ ಹೊಸ ಮಾರ್ಗ ಎಷ್ಟು ಲಾಭದಾಯಕ ಎಂಬ ಬಗ್ಗೆ ಸಮೀಕ್ಷೆ ನಡೆಯುತ್ತದೆ. ಖರ್ಚಿನ ಶೇ 14ರಷ್ಟು ಆದಾಯ ಹುಟ್ಟುವಂತಿದ್ದರೆ ಮಾತ್ರ ಹೊಸ ಮಾರ್ಗಕ್ಕೆ ಅನುಮೋದನೆ ನೀಡಲಾಗುತ್ತದೆ. ಆದರೆ, ಕಳೆದ ಬಾರಿಯ ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ಕರಾವಳಿ ಹಾಗೂ ಮಲೆನಾಡು ಪ್ರದೇಶದ ಈ ಮೂರು ಹೊಸ ರೈಲು ಮಾರ್ಗಗಳ ಸಮೀಕ್ಷೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ’ ಎಂದು ಪುತ್ತೂರು ಬಳಕೆದಾರರ ಹಿತರಕ್ಷಣಾ ವೇದಿಕೆ ಸಂಚಾಲಕ ದಿನೇಶ್ ಭಟ್ ‘ಪ್ರಜಾವಾಣಿ’ಗೆ ತಿಳಿಸಿದರು.‘ಬೈಂದೂರು-ಧರ್ಮಸ್ಥಳ-ನೆಟ್ಟಣ ರೈಲು ಮಾರ್ಗ ನಿರ್ಮಾಣವಾದರೆ, ಕರಾವಳಿಯಲ್ಲಿ ರೈಲ್ವೆ ಜಾಲ ಇನ್ನಷ್ಟು ಅಭಿವೃದ್ಧಿಯಾಗುತ್ತದೆ. ಅಲ್ಲದೇ ಕೊಲ್ಲೂರು, ಕಾರ್ಕಳ, ಮೂಡುಬಿದಿರೆ, ವೇಣೂರು ಮೊದಲಾದ ಪ್ರಸಿದ್ಧ ಯಾತ್ರಾಸ್ಥಳಗಳಿಗೂ ರೈಲ್ವೆ ಸಂಪರ್ಕ ಕಲ್ಪಿಸಲು ಅವಕಾಶವಾಗುತ್ತದೆ. ಇದು ಈ ಪ್ರದೇಶದ ಹೆದ್ದಾರಿಗಳ ಮೇಲಿನ ಸಂಚಾರ ಒತ್ತಡ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಲಿದೆ’ ಎಂದರು.‘ಮೈಸೂರು-ಕುಶಾಲನಗರ-ಮಂಗಳೂರು ಹೊಸ ಮಾರ್ಗದ ಸಮೀಕ್ಷೆ ಕಾರ್ಯ ಆರಂಭವಾಗಿದೆ. ಈ ಬಗ್ಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ’ ಎನ್ನುತ್ತವೆ ನೈರುತ್ಯ ರೈಲ್ವೆ ಮೂಲಗಳು. ಆದರೆ, ‘ಈ ಸಮೀಕ್ಷೆಯೂ ನಡೆದಿಲ್ಲ’ ಎಂಬುದು ಸಾರ್ವಜನಿಕರ ಆರೋಪ.‘ಸುಳ್ಯದಿಂದ ಕುಶಾಲನಗರದವರೆಗೆ 76 ಕಿ.ಮೀ. ರೈಲು ಮಾರ್ಗ ನಿರ್ಮಿಸಿದರೆ ಮೈಸೂರು- ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕ ಮತ್ತಷ್ಟು ಸುಗಮವಾಗಲಿದೆ. ಸುಬ್ರಹ್ಮಣ್ಯ, ಧರ್ಮಸ್ಥಳದಂತಹ ತೀರ್ಥಕ್ಷೇತ್ರಕ್ಕೆ ಆಗಮಿಸುವ ಯಾತ್ರಿಕರಿಗೂ ಈ ಮಾರ್ಗ ಅನುಕೂಲಕರ ಎನ್ನುತ್ತಾರೆ ಡ.ಬ್ರಹ್ಮಾನಂದ ಸ್ಮಾರಕ ಅರ್ಥಶಾಸ್ತ್ರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ.ಪ್ರಭಾಕರ ಶಿಶಿಲ.‘ಸತತ ಹೋರಾಟದ ಬಳಿಕ, 2010-11ನೇ ಸಾಲಿನ ರೈಲ್ವೆ ಬಜೆಟ್‌ನಲ್ಲಿ ಈ ಹೊಸ ಮಾರ್ಗಕ್ಕೆ ಸಮೀಕ್ಷೆ ನಡೆಸುವ ಪ್ರಸ್ತಾಪಗೊಂಡಿದ್ದು ಸಂತಸ ತಂದಿತ್ತು. ಆದರೆ, ಬಜೆಟ್ ಘೋಷಣೆ ಬಿಟ್ಟರೆ ಈ ನಿಟ್ಟಿನಲ್ಲಿ ಯಾವುದೇ ಮಹತ್ತರ ಪ್ರಗತಿ ಆದಂತೆ ತೋರುತ್ತಿಲ್ಲ’ ಎಂದು ಅವರು ಅಸಮಾಧಾನ ಹೊರಹಾಕಿದರು. ‘ಕಾಣಿಯೂರು-ಕಾಂಞಂಗಾಡ್ ಮಾರ್ಗಕ್ಕೂ ಸಮೀಕ್ಷೆಗೆ 3 ವರ್ಷ ಹಿಂದೆಯೇ ಬಜೆಟ್ ಅನುಮೋದನೆ ದೊರಕಿತ್ತು. ಈ ಸಮೀಕ್ಷೆಯೂ ಆಮೆಗತಿಯಲ್ಲಿ ಸಾಗುತ್ತಿದೆ’ ಎಂದು ಅವರು ಆರೋಪಿದರು.ಘಟ್ಟದಲ್ಲಿ ಮೂರೇ ಮಾರ್ಗ:

‘ಪಶ್ಚಿಮ ಕರಾವಳಿಯನ್ನು ಘಟ್ಟದ ಮೇಲಿನ ಪ್ರದೇಶಗಳಿಗೆ ಸಂಪರ್ಕಿಸಲು ಮೂರು ರೈಲ್ವೆ ಮಾರ್ಗಗಳು ಮಾತ್ರ ಇವೆ. ಶ್ವರ್ಣೂರ್-ಪಾಲ್ಘಾಟ್ ಮಾರ್ಗ, ಮಂಗಳೂರು-ಹಾಸನವನ್ನು ಸಂಪಕಿಸುವ ಶಿರಾಡಿ ಘಾಟಿ ಮಾರ್ಗ ಹಾಗೂ ಲೋಂಡಾ ಘಾಟಿಯ ಮಾರ್ಗ. ಹೊನ್ನಾವರ-ತಾಳಗುಪ್ಪ ನಡುವೆ, ಹಾಗೂ ಅಂಕೋಲ-ಹುಬ್ಬಳ್ಳಿ ನಡುವೆ, ತಲಚೇರಿ-ಮೈಸೂರು ನಡುವೆ ರೈಲು ಮಾರ್ಗ ಆದರೆ ಪಶ್ಚಿಮ ಕರಾವಳಿಯ ರೈಲು ಸಂಪರ್ಕ ಜಾಲ ಮತ್ತಷ್ಟು ಅಭಿವೃದ್ಧಿ ಆಗುತ್ತದೆ ಎನ್ನುತ್ತಾರೆ ದಿನೇಶ್ ಭಟ್.‘30 ವರ್ಷದ ಬೇಡಿಕೆಯಾದ ಮೈಸೂರು-ತಲಚೇರಿ ಮಾರ್ಗ ನಿರ್ಮಾಣವಾದರೆ ಬೆಂಗಳೂರು-ಕಣ್ಣೂರು ನಡುವಿನ ದೂರ 200 ಕಿ.ಮೀ.ನಷ್ಟು ಕಡಿಮೆಯಾಗುತ್ತದೆ. ಈ ಮಾರ್ಗವಾದರೆ ಬೆಂಗಳೂರಿನ ಪ್ರಯಾಣಿಕರು ಮಂಗಳೂರಿನ ಮೂಲಕ ಕೇರಳಕ್ಕೆ ಹೋಗುವುದನ್ನು ಇಷ್ಟಪಡುವುದಿಲ್ಲ. ಇದರಿಂದ ಕರಾವಳಿ ಜನತೆಗೆ ಪರೋಕ್ಷವಾಗಿ ಪ್ರಯೋಜನವಾಗುತ್ತದೆ’ ಎಂದರು.‘ಹುಬ್ಬಳ್ಳಿ-ಅಂಕೋಲ ಮಾರ್ಗಕ್ಕೆ ಅನುಮೋದನೆ ದೊರೆತು 10 ವರ್ಷ ಮೇಲಾಗಿದೆ ಅರ್ಧದವರೆಗೆ ಕಾಮಗಾರಿಯೂ ನಡೆದಿದೆ. ‘ಈ ಮಾರ್ಗ ಪೂರ್ಣಗೊಳ್ಳಬೇಕಾದರೆ, ಪಶ್ಚಿಮ ಘಟ್ಟದ 3 ಲಕ್ಷ ಮರ ಕಳೆದುಕೊಳ್ಳಬೇಕಾದ ಭೀತಿ ಇರುವುದರಿಂದ ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ. ತಾಳಗುಪ್ಪ-ಹೊನ್ನಾವರ ಮಾರ್ಗ ನಿರ್ಮಿಸುವುದಕ್ಕೂ ಅರಣ್ಯ ಇಲಾಖೆ ಅನುಮತಿ ಅಡ್ಡಗಾಲಾಗಿದೆ’ ಎನ್ನುತ್ತವೆ ರೈಲ್ವೆ ಇಲಾಖೆಯ ಮೂಲಗಳು.‘ಸುರಂಗ ಮಾರ್ಗ ನಿರ್ಮಿಸುವ ಮೂಲಕ ಮರಗಳನ್ನು ಕಡಿಯಬೇಕಾದ ಪ್ರಮೇಯವನ್ನು ಆದಷ್ಟು ಕಡಿಮೆ ಮಾಡುತ್ತೇವೆ. ಒಂದು ಮರ ಕಡಿದರೆ ಅದರ 10 ಪಟ್ಟು ಹೆಚ್ಚು ಸಸಿ ಬೆಳೆಸುತ್ತೇವೆ ಎಂದು ಅರಣ್ಯ ಇಲಾಖೆಗೆ ಭರವಸೆ ನೀಡಲಾಗಿದೆ’ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry