ಮಂಗಳವಾರ, ಮಾರ್ಚ್ 2, 2021
31 °C
ಕಾಂಗ್ರೆಸ್‌– ಜೆಡಿಎಸ್‌ ನಡುವೆ ನೇರ ಹಣಾಹಣಿ

ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆ

ಕೋಲಾರ: ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ತಾಲ್ಲೂಕಿನಾದ್ಯಂತ ಮಾಗಿ ಚಳಿಯ ನಡುವೆಯೂ ಚುನಾವಣಾ ಕಾವು ಏರ ತೊಡಗಿದೆ. ಪ್ರಮುಖ ಮೂರು ರಾಜಕೀಯ ಪಕ್ಷಗಳಿಗೂ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.ಮೂರೂ ಪಕ್ಷಗಳು ಚುನಾವಣಾ ದಿನಾಂಕ ಘೋಷಣೆಯಾಗುವುದಕ್ಕೂ ಮುನ್ನವೇ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಭೆಯ ಮೇಲೆ ಸಭೆ ನಡೆಸಿವೆ. ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಅಭ್ಯರ್ಥಿ ಆಯ್ಕೆ ಮುಖಂಡರಿಗೆ ಕಗ್ಗಂಟಾಗಿದೆ.ಶತಾಯಗತಾಯ ಟಿಕೆಟ್‌ ಪಡೆಯಲೇಬೇಕೆಂಬ ಹಟಕ್ಕೆ ಬಿದ್ದಿರುವ ಆಕಾಂಕ್ಷಿಗಳು ಬೆಂಬಲಿಗರ ಮೂಲಕ ಹಿರಿಯ ಮುಖಂಡರ ಮೇಲೆ ಒತ್ತಡ ಹೇರಿಸುತ್ತಿದ್ದಾರೆ. ಟಿಕೆಟ್‌ ಹಂಚಿಕೆಯಿಂದ ತಲೆದೋರಬಹುದಾದ ಭಿನ್ನಮತವು ಮುಖಂಡರ ನಿದ್ದೆಗೆಡಿಸಿದೆ. ಹೀಗಾಗಿ ಮುಖಂಡರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.ಶಾಸಕರಿಗೆ ಸವಾಲು: ಕಳೆದ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿದಿದ್ದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್‌ ಬಣಕ್ಕೆ ಈ ಬಾರಿ ಅಧಿಕಾರ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ರಾಜಕೀಯವಾಗಿ ಸಾಕಷ್ಟು ಬದಲಾವಣೆಗಳಾಗಿದ್ದು, ಶಾಸಕರಿಗೆ ವೈಯಕ್ತಿಕವಾಗಿ ಈ ಚುನಾವಣೆ ಅಸ್ತಿತ್ವದ ಪ್ರಶ್ನೆಯಾಗಿದೆ.ಅವರ ಕಟ್ಟಾ ಎದುರಾಳಿ ಜೆಡಿಎಸ್‌ನ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಚುನಾವಣೆಯನ್ನು ಸವಾಲಾಗಿ ಪರಿಗಣಿಸಿದ್ದಾರೆ. ಕಾಂಗ್ರೆಸ್‌ ಜತೆ ವರ್ತೂರು ಪ್ರಕಾಶ್‌ ಕೈಜೋಡಿಸಿದ್ದು, ಪ್ರಸಕ್ತ ಚುನಾವಣೆಯಲ್ಲೂ ಮೈತ್ರಿ ಮುಂದುವರಿಯಲಿದೆ. ಉಭಯ ಬಣಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಪರಸ್ಪರ ಹೊಂದಾಣಿಕೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.ನಿರಾಶೆಯ ಕಾರ್ಮೋಡ: ಇತ್ತೀಚೆಗೆ ನಡೆದ ವಿಧಾನ ಪರಿಷತ್‌ ಚುನಾವಣೆಯ ಫಲಿತಾಂಶದಿಂದ ಭ್ರಮನಿರಸನಗೊಂಡಿರುವ ಸಂಸದ ಕೆ.ಎಚ್.ಮುನಿಯಪ್ಪ ಜಾಣ ಹೆಜ್ಜೆ ಇಡುತ್ತಿದ್ದಾರೆ. ವಿಧಾನ ಪರಿಷತ್‌ ಚುನಾವಣೆ ಸೋಲಿನಿಂದ ಕೈ ಪಾಳಯದಲ್ಲಿ ನಿರಾಶೆಯ ಕಾರ್ಮೋಡ ಕವಿದಿದೆ. ಹಿರಿಯ ಮುಖಂಡರ ನಡುವಿನ ಶೀತಲ ಸಮರದಿಂದ ಕಾರ್ಯಕರ್ತರು ಹುಮ್ಮಸ್ಸು ಕಳೆದುಕೊಂಡಿದ್ದಾರೆ. ಸವಾಲುಗಳ ನಡುವೆಯೂ ಕಾಂಗ್ರೆಸ್‌ ಮುಖಂಡರು ಜೆಡಿಎಸ್‌ಗೆ ತಿರುಗೇಟು ನೀಡಲು ವರ್ತೂರು ಬಣದ ಜತೆ ಸೇರಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ.ಗೆಲುವಿನ ಓಟ: ವಿಧಾನ ಪರಿಷತ್‌ ಚುನಾವಣಾ ಫಲಿತಾಂಶದಿಂದ ಜೆಡಿಎಸ್‌ ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಯಾಗಿದೆ. ಇತರೆ ಪಕ್ಷಗಳಿಗೆ ಹೋಲಿಸಿದರೆ ಜೆಡಿಎಸ್‌ನಲ್ಲಿ ಮೇಲ್ನೋಟಕ್ಕೆ ಭಿನ್ನಮತವಿಲ್ಲ. ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ಹಿರಿಯ ಮುಖಂಡರು ಗೆಲುವಿನ ಓಟ ಮುಂದುವರಿಸುವ ಇರಾದೆಯಲ್ಲಿದ್ದಾರೆ. ಗ್ರಾಮೀಣ ಭಾಗದಲ್ಲಿ ಕೆ.ಎಚ್‌.ಮುನಿಯಪ್ಪ ವಿರೋಧಿಗಳ ಸಂಖ್ಯೆ ಹೆಚ್ಚಿದ್ದು, ಅವರು ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ.ಹೊಸ ಕ್ಷೇತ್ರಗಳು: ಕಳೆದ ಬಾರಿಯ ಚುನಾವಣೆಯಲ್ಲಿ ವರ್ತೂರು ಬಣ 13, ಕಾಂಗ್ರೆಸ್‌ 2, ಜೆಡಿಎಸ್‌ 7 ಮತ್ತು ಬಿಜೆಪಿ 1 ಸ್ಥಾನದಲ್ಲಿ ಜಯ ಸಾಧಿಸಿತ್ತು. ತಾ.ಪಂ ವ್ಯಾಪ್ತಿಗೆ ಈ ಬಾರಿ ಕೊಂಡರಾಜನಹಳ್ಳಿ ಮತ್ತು ಛತ್ರಕೋಡಹಳ್ಳಿ ಕ್ಷೇತ್ರ ಹೊಸದಾಗಿ ಸೇರ್ಪಡೆಯಾಗಿವೆ. ಇದರೊಂದಿಗೆ ತಾ.ಪಂ ಸದಸ್ಯರ ಸಂಖ್ಯೆ 25ಕ್ಕೆ ಏರಿಕೆಯಾಗಿದ್ದು, 13ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸುವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.ತಾಲ್ಲೂಕಿನ ಏಳು ಜಿ.ಪಂ ಕ್ಷೇತ್ರಗಳ ಪೈಕಿ ಪ್ರಸ್ತುತ ಐದರಲ್ಲಿ ಜೆಡಿಎಸ್‌ ಸದಸ್ಯರು, ಎರಡರಲ್ಲಿ ವರ್ತೂರು ಪ್ರಕಾಶ್‌ ಮತ್ತು ಕಾಂಗ್ರೆಸ್‌ ಬಣದ ಸದಸ್ಯರು ಇದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಗೆ ಭದ್ರ ನೆಲೆಯಿಲ್ಲ. ಹೀಗಾಗಿ ಕಮಲ ಪಾಳಯದಲ್ಲಿ ಮಂಕು ಕವಿದಿದೆ. ವರ್ತೂರು ಪ್ರಕಾಶ್‌ ಬೆಂಬಲಿತ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ನೇರ ಹಣಾಹಣಿ ಇದೆ.ಕ್ಷೇತ್ರದಲ್ಲಿ 1,88,264 ಮತದಾರರಿದ್ದಾರೆ. ಈ ಪೈಕಿ 94,665 ಪುರುಷ ಮತದಾರರು ಹಾಗೂ 93,593 ಮಹಿಳಾ ಮತದಾರರು ಸೇರಿದ್ದಾರೆ. ಹಲವು ಕ್ಷೇತ್ರಗಳ ಮೀಸಲಾತಿ ಬದಲಾಗಿದ್ದು, ಇದರಿಂದ ಟಿಕೆಟ್‌ ಆಕಾಂಕ್ಷಿಗಳು ಕ್ಷೇತ್ರದ ಆಯ್ಕೆ ವಿಷಯದಲ್ಲಿ ಗೊಂದಲಕ್ಕೀಡಾಗಿದ್ದಾರೆ.ಹಿಂದಿನ ಚುನಾವಣೆಯಲ್ಲಿ ಜಯ ಗಳಿಸಿದ್ದವರು ಈ ಬಾರಿ ಮೀಸಲಾತಿ ಕಾರಣಕ್ಕೆ ಕ್ಷೇತ್ರ ಬದಲಿಸುವ ನಿರ್ಧಾರ ಮಾಡಿದ್ದಾರೆ. ಆದರೆ, ಹೊಸ ಕ್ಷೇತ್ರದಲ್ಲಿ ಗೆಲುವು ಕೈ ಹಿಡಿಯಲಿದೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.