ಮೂರ್ತಿ ಬಿಸಿಲುಕೋಲು

7

ಮೂರ್ತಿ ಬಿಸಿಲುಕೋಲು

Published:
Updated:
ಮೂರ್ತಿ ಬಿಸಿಲುಕೋಲು

ಎಂಬತ್ತೆಂಟನೇ ವಯಸ್ಸಿನಲ್ಲಿ ವಿ.ಕೆ.ಮೂರ್ತಿ ಮತ್ತೆ ಕ್ಯಾಮೆರಾ ಹಿಂದೆ ನಿಲ್ಲಲಿದ್ದಾರೆಂಬುದು ಸಿನಿಪ್ರೇಮಿಗಳಲ್ಲಿ ಸಂಚಲನ ಹುಟ್ಟಿಸಿರುವ ಸಂಗತಿ. ಗುರುದತ್ ತುಂಬಾ ಇಷ್ಟಪಡುತ್ತಿದ್ದ ಕನ್ನಡಿಗ ವಿ.ಕೆ.ಮೂರ್ತಿ ‘ಕಗಾರ್’ ಹಿಂದಿ ಚಿತ್ರದ ಸಿನಿಮಾಟೊಗ್ರಾಫರ್.ಹೆಸರಘಟ್ಟದ ‘ಸರ್ಕಾರಿ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್’ನಲ್ಲಿ (ಜಿಎಫ್‌ಟಿಐ) ಹಳ್ಳಿಯ ಸೆಟ್ ಒಂದು ಸಜ್ಜಾಗಿತ್ತು. ಹಿರಿಯ ನಿರ್ದೇಶಕರಾದ ಗೋವಿಂದ ನಿಹಲಾನಿ, ಎಂ.ಎಸ್.ಸತ್ಯು, ಕ್ಯಾಮೆರಾಮನ್ ಜಿ.ಎಸ್.ಭಾಸ್ಕರ್ ಎಲ್ಲರೂ ಚಿತ್ರದ ಮುಹೂರ್ತ ಸಮಾರಂಭದ ಖುಷಿಯ ಪಾಲುದಾರರಾಗಿದ್ದರು.ಕನ್ನಡ ಮೂಲದ ಹಿಂದಿ ನಿರ್ದೇಶಕ ಗುರುದತ್ ಅವರಿಗೆ ಈ ಚಿತ್ರವನ್ನು ಅರ್ಪಿಸಿ, ನಿರ್ದೇಶನ ಮಾಡಲು ಹೊರಟಿರುವವರು ನಂದಕುಮಾರ್ ನಾಯ್ಡು. ಹುಬ್ಬಳ್ಳಿ ಮೂಲದ ಇವರಿಗೆ ಸಾಕ್ಷ್ಯಚಿತ್ರಗಳನ್ನು ತೆಗೆದ ಅನುಭವವಿದೆ. ಅಪರೂಪದ ಕನಸನ್ನು ಸಾಕಾರ ಮಾಡಿಕೊಳ್ಳುವ ಉದ್ದೇಶದ ಈ ಯತ್ನಕ್ಕೆ ನಿರ್ಮಾಪಕ ಕೂಡ ಅವರೇ. ಬೆಂಗಳೂರು, ಶ್ರೀರಂಗಪಟ್ಟಣ ಹಾಗೂ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಸಲಿರುವ ನಂದಕುಮಾರ್, ಚಿತ್ರಕಥೆ ಸಿದ್ಧವಾದ ನಂತರ ದೃಶ್ಯ ಪರಿಕಲ್ಪನೆಯ ಹಂತದಲ್ಲೇ ವಿ.ಕೆ.ಮೂರ್ತಿ ಅವರೊಂದಿಗೆ ಚರ್ಚಿಸಿದ್ದಾರೆ. ‘ಕಾಗಜ್ ಕೆ ಫೂಲ್’ ಚಿತ್ರದ ಕೊನೆಯಲ್ಲಿ ಗುರುದತ್ ಖಾಲಿ ಕುರ್ಚಿಯ ಕಡೆ ತೋರಿಸುವ ದೃಶ್ಯವಿದೆ. ಅದೇ ‘ಕಗಾರ್’ನ ಮೊದಲ ದೃಶ್ಯವಾಗಲಿದೆ. ಈ ಸಲಹೆ ಕೊಟ್ಟವರು ಖುದ್ದು ಮೂರ್ತಿ.ಸಾಹಿರ್ ಲುಧಿಯಾನ್ವಿ ‘ಪ್ಯಾಸಾ’ ಚಿತ್ರಕ್ಕೆ ಬರೆದ ಹಾಡಿನ ಸಾಲಿನಿಂದ ಪ್ರೇರಣೆಗೊಂಡು ‘ಕಗಾರ್’ ಹೆಸರಿಟ್ಟಿದ್ದಾರೆ ಎಂದು ವಿ.ಕೆ.ಮೂರ್ತಿ ಮಾತು ಪ್ರಾರಂಭಿಸಿದರು.ಐದು ವರ್ಷದಿಂದ ಬಹುತೇಕ ನಿವೃತ್ತ ಜೀವನ ನಡೆಸುತ್ತಿರುವ ಅವರಿಗೆ ಮತ್ತೆ ಕ್ಯಾಮೆರಾಗೆ ಕಣ್ಣು ಕೊಡುವ ಸಂದರ್ಭ ಒದಗಿರುವುದು ಒಂದು ವಿಧದಲ್ಲಿ ಪುಳಕ; ಅದೂ ತಾವು ಕಲಿತ ಜಿಎಫ್‌ಟಿಐನಲ್ಲಿ! 1946ರಲ್ಲಿ ಬಾಂಬೆ ಕಡೆಗೆ ಪಯಣಿಸಿದ್ದ ಮೈಸೂರಿನ ಮೂರ್ತಿಯವರಿಗೆ ಗುರುದತ್ ಆಪ್ತರಾದ ಸಂಗತಿ ಈಗ ಹಳೆಯದು. ‘ಪ್ಯಾಸಾ’ ಚಿತ್ರಕ್ಕೆ ಬಿಸಿಲುಕೋಲು ಸೃಷ್ಟಿಸಿದ್ದ ವಿ.ಕೆ.ಮೂರ್ತಿ ಈ ಚಿತ್ರಕ್ಕೂ ಅದೇ ಕೈಚಳಕ ತೋರುತ್ತಾರೆಂಬುದು ವಿಶೇಷ.ಚಿತ್ರಕಥೆ ಬರೆಯುವುದರಲ್ಲಿ ಪಳಗಿರುವ ವೇದ್ ರಾಹಿ ‘ಕಗಾರ್’ಗೆ ಕಥೆಯನ್ನಷ್ಟೇ ಅಲ್ಲದೆ ಸಂಭಾಷಣೆಯನ್ನೂ ಒದಗಿಸಿದ್ದಾರೆ. ವ್ಯಾಪಕವಾಗಿ ನಡೆಯುತ್ತಿರುವ ಹಿಂಸಾಚಾರಕ್ಕೆ ಯಾರು ಹೊಣೆ; ದೇವರೋ, ನಾಯಕರೋ, ಅಂತರಾತ್ಮವೋ ಎಂಬ ಪ್ರಶ್ನೆಯನ್ನಿಟ್ಟುಕೊಂಡು ‘ಕಗಾರ್’ ಸಿದ್ಧಗೊಂಡಿದೆ. ನಕ್ಸಲ್ ಸಮಸ್ಯೆಯನ್ನು ಕೇಂದ್ರವಾಗಿಸಿಕೊಂಡ ಚಿತ್ರವಿದು ಎಂದೂ ವೇದ್ ರಾಹಿ ಹೇಳಿದರು.ಜಿಎಫ್‌ಟಿಐ ತಂತ್ರಜ್ಞರನ್ನೇ ದುಡಿಸಿಕೊಳ್ಳಲಿರುವ ‘ಕಗಾರ್’ನಲ್ಲಿ ಪಾಟೀಲ ಪುಟ್ಟಪ್ಪನವರೂ ಅಭಿನಯಿಸಲಿದ್ದಾರೆ. ಸುಮನ್ ನಗರ್‌ಕರ್ ಕೂಡ ಮುಖ್ಯ ಪಾತ್ರಧಾರಿ. ಮಾಧವ್ ಅಜಗಾಂವಕರ್ ಸಂಗೀತ ಸಂಯೋಜನೆ ಮಾಡಲಿರುವ ಚಿತ್ರದ ಗೀತೆಗಳಿಗೆ ವಿನೂ ಮಹೇಂದ್ರ ಸಾಹಿತ್ಯ ಒದಗಿಸಿದ್ದಾರೆ.ಗುರುದತ್ ಅವರಿಗೆ ಚಿತ್ರವನ್ನು ಅರ್ಪಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದ ಸತ್ಯು ಹಾಗೂ ಗೋವಿಂದ್ ನಿಹಲಾನಿ ಹೊಸ ಯತ್ನವನ್ನು ಶ್ಲಾಘಿಸಿದರು. ಸಮಾರಂಭದ ಕೇಂದ್ರಬಿಂದುವಾಗಿದ್ದ ವಿ.ಕೆ.ಮೂರ್ತಿ ಹಾಗೂ ನೆರೆದಿದ್ದ ದಿಗ್ಗಜರ ಸಣ್ಣ ಕದಲಿಕೆಗಳೂ ಫಳಫಳಿಸುತ್ತಿದ್ದ ಛಾಯಾಗ್ರಾಹಕರ ಕ್ಯಾಮೆರಾಗಳಲ್ಲಿ ದಾಖಲಾದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry