ಬುಧವಾರ, ಮೇ 18, 2022
28 °C

ಮೂರ್ತಿ ಭಗ್ನ: ಭಾಲ್ಕಿ ಉದ್ವಿಗ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಲ್ಕಿ: ಪಟ್ಟಣದ ಗಡಿ (ಕೋಟೆ) ಆವರಣದಲ್ಲಿರುವ ಗಣೇಶ ದೇಗುಲದಲ್ಲಿನ ಅಮೃತ ಶಿಲಾ ಮೂರ್ತಿಯನ್ನು ಸೋಮವಾರ ಕಿಡಿಗೇಡಿಗಳು ಭಗ್ನಗೊಳಿಸಿದ್ದಾರೆ. ಗಣೇಶನ ಎಡಗೈ ಮುರಿದಿದ್ದು, ಕೈಯಲ್ಲಿನ ಶಂಖ ಬಿದ್ದು ಹೋಗಿದೆ. ಮಧ್ಯಾಹ್ನ 12:30ರಿಂದ 1:30ರ ಸುಮಾರಿಗೆ ಈ ಘಟನೆ ನಡೆದಿರಬಹುದೆಂದು ಪೊಲೀಸ್ ಮೂಲಗಳು ಸಂಶಯ ವ್ಯಕ್ತಪಡಿಸಿವೆ. ಘಟನೆಯ ಸುದ್ದಿ ಹರಡುತ್ತಿದ್ದಂತೆಯೇ ನೂರಾರು ಜನರು ಮಂದಿರದ ಸುತ್ತಲೂ ಜಮಾಯಿಸಿದರು. ನಗರ ಪೊಲೀಸ್ ಠಾಣೆಯ ಸಿಪಿಐ ನೇತೃತ್ವದಲ್ಲಿ ಸಿಬ್ಬಂದಿಗಳು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಕೋಟೆಯೊಳಗಡೆ ಖಾಸಗಿ ಶಾಲೆ ಇದ್ದು, ಹೊರ ಬಾಗಿಲಿನ ಎದುರಿಗೆ ಮಸೀದಿಯೂ ಇದೆ. ವಿಷಯ ಸೂಕ್ಷ್ಮವಾಗಿದ್ದರಿಂದ ಪೊಲೀಸರು ಸಕಾಲಕ್ಕೆ ಮಧ್ಯ ಪ್ರವೇಶಿಸಿ ಜನರನ್ನು ಚದುರಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ನಿಯಂತ್ರಿಸಿದರು.ದೂರು ದಾಖಲು: ಗಡಿ ಗಣೇಶ ಮಂಡಳ ಅಧ್ಯಕ್ಷ ಸಂಗಮೇಶ ಬಳತೆ ನೇತೃತ್ವದಲ್ಲಿ ಅನೇಕ ಜನರು ಪೊಲೀಸ್ ಠಾಣೆಗೆ ತೆರಳಿ ಕೂಡಲೇ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ದೂರು ನೀಡಿದ್ದಾರೆ. ಜುಲೈ 1ರೊಳಗೆ ಅಪರಾಧಿಗಳನ್ನು ಬಂಧಿಸದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. 5 ವರ್ಷಗಳ ಹಿಂದೆ ಕೂಡ ಇದೇ ಮಂದಿರದಲ್ಲಿನ ಗಣೇಶನ ವಿಗ್ರಹವನ್ನು ಕಿಡಿಗೇಡಿಗಳು ಭಗ್ನಗೊಳಿಸಿದ್ದರು. ಆದರೆ ಯಾರೊಬ್ಬರನ್ನೂ ಬಂಧಿಸಿಲ್ಲ ಎಂಬುದನ್ನು ಮುಖಂಡರು ಹಿಂದಿನ ಘಟನೆಯನ್ನು ನೆನಪಿಸಿದರು. ವಿವಿಧ ಸಂಘಟನೆಗಳ ಮುಖಂಡರುಗಳಾದ ಸುಧಾಕರ ದೇಶಪಾಂಡೆ, ಪ್ರಕಾಶ ಮಾಶಟ್ಟೆ, ಕಪಿಲ್ ಕಲ್ಯಾಣೆ, ರಾಜು ವಿ. ವಂಕೆ, ಸತೀಶ ಲದ್ದೆ, ಧರ್ಮು ವಂಕೆ, ರೇವಣಪ್ಪ ಮಾಲಗಾರ, ದತ್ತಾತ್ರೇಯ ತೂಗಾಂವಕರ್ ಇದ್ದರು.    

ಭಾಲ್ಕಿ ಬಂದ್ ಕರೆ

ಭಾಲ್ಕಿ: ಗಡಿ ಗಣೇಶ ಮಂದಿರದ ಮೂರ್ತಿ ಭಗ್ನವಾದ ಹಿನ್ನೆಲೆಯಲ್ಲಿ ಮಂಗಳವಾರ (ಜೂನ್ 26) ಭಾಲ್ಕಿ ಬಂದ್ ನಡೆಸುವಂತೆ ವಿವಿಧ ಸಂಘಟನೆಗಳ ಮುಖಂಡರು ಕರೆ ನೀಡಿದ್ದಾರೆ. ಸೋಮವಾರ ಸಂಜೆ ಸಭೆ ನಡೆಸಿದ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ಈ ಕರೆ ನೀಡಲು ನಿರ್ಧರಿಸಿದರು. ಬಳಿಕ ಶಾಲೆಗಳ ಮುಖ್ಯಸ್ಥರಿಗೆ ಫೋನ್ ಕರೆ ಮಾಡಿ ಶಾಲಾ ವಾಹನಗಳನ್ನು ಕಳಿಸದೆ ಬಂದ್ ಮಾಡಿ ಸಹಕರಿಸುವಂತೆ ಮನವಿ ಮಾಡಿದರು. ಮಂಗಳವಾರ ಬೆಳಿಗ್ಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.