ಶುಕ್ರವಾರ, ಮೇ 27, 2022
30 °C

ಮೂಲವ್ಯಾಧಿ: ಜಾಗೃತಿ ಇರಲಿ

ಡಾ.ನಂದಾ ರಜನೀಶ್ Updated:

ಅಕ್ಷರ ಗಾತ್ರ : | |

ಮೂಲವ್ಯಾಧಿ ಅಥವಾ  ಪೈಲ್ಸ್ ಮನುಕುಲಕ್ಕೆ ಆದಿ ಕಾಲದಿಂದಲೂ ತೊಂದರೆ ಕೊಡುತ್ತಲೇ ಬಂದಿದೆ. ಆದರೆ ಇಂದಿನ ಆಧುನಿಕ ಯುಗದಲ್ಲಿಯೂ ಸಾಮಾನ್ಯಜನರಲ್ಲಿ ಇರುವ

ತಪ್ಪು ಕಲ್ಪನೆಗಳು ಈ ವ್ಯಾಧಿಯನ್ನು ಮತ್ತಷ್ಟು ಜಟಿಲಗೊಳಿಸಿವೆ ಎಂದು ಹೇಳಬಹುದು.ಬನ್ನಿ, ಈ ನಿಟ್ಟಿನಲ್ಲಿ ಪೈಲ್ಸ್ ಅಥವಾ ಮೂಲವ್ಯಾಧಿ ಎಂದರೇನು, ಅದರ ಕಾರಣಗಳು, ಲಕ್ಷಣಗಳೇನು, ಪರಿಹಾರ ಹಾಗೂ ಚಿಕಿತ್ಸೆಗಳೇನು ಎಂಬುದನ್ನು ತಿಳಿಯೋಣ. ಇದು ಕೇವಲ ಈ ವ್ಯಾಧಿಯ ಬಗೆಗೆ ಇರುವ ತಪ್ಪು ತಿಳಿವಳಿಕೆಗಳನ್ನು ದೂರ ಮಾಡುವುದಷ್ಟೇ ಅಲ್ಲ, ಜೊತೆಗೆ ಇದರಿಂದ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು, ಕುರುಡು ನಂಬಿಕೆಗಳ ಆಧಾರದ ಮೇಲೆ ನೋಡದೆ ಹೆಚ್ಚು ವೈಜ್ಞಾನಿಕವಾಗಿ ಬಗೆಹರಿಸುವಲ್ಲಿಯೂ ಸಹಾಯ ಮಾಡುತ್ತದೆ.ಪೈಲ್ಸ್ ಎಂದರೇನು?


ಪೈಲ್ಸ್ ಎಂದು ಕರೆಯಲಾಗುವ ಮೂಲವ್ಯಾಧಿಯು, ಗುದನಾಳದ ತುದಿಯಲ್ಲಿ ಅಥವಾ ಗುದದ ಒಳಗೆ ಬೆಳೆಯುವ ಗಡ್ಡೆ ಅಥವಾ ಊತ. 50 ವರ್ಷದ ನಂತರ, ಅದರಲ್ಲೂ ಜೀವನದ ಯಾವುದೇ ಅವಧಿಯಲ್ಲಿ ಯಾವುದೇ ರೀತಿಯ ಗುದದ್ವಾರದ ತೊಂದರೆಗೆ ಒಳಗಾದ ಶೇ 50ರಷ್ಟು ಜನರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ ಇದಾಗಿದೆ. ಪ್ರಾಥಮಿಕ ಹಂತದಲ್ಲಿ ಇದು ಹೊರಗಡೆ ಜಾರಬಹುದು. ಇದೊಂದು ಉಪದ್ರವ ಉಂಟುಮಾಡುವ, ಸಮಾಧಾನ ಇರದ, ನೋವು ತರುವ ಗಡ್ಡೆಯಾಗಿದ್ದು, ಅಪರೂಪಕ್ಕೆ ಗಂಭೀರ ಸ್ವರೂಪ ತಾಳುತ್ತದೆ.ಪೈಲ್ಸ್‌ಗೆ ಕಾರಣಗಳೇನು?

ಗುದ ಅಥವಾ ದೊಡ್ಡ ಕರುಳಿನ ಅಭಿಧಮನಿಯ (ಮಲಿನ ರಕ್ತನಾಳ) ಮೇಲೆ ಬೀಳುವ ಅತಿಯಾದ ಒತ್ತಡದಿಂದಾಗಿ ಈ ಸಮಸ್ಯೆ ತಲೆ ಎತ್ತುತ್ತದೆ ಎಂದು ಹೇಳಬಹುದು. ಹೀಗೆ ಬೀಳುವ ಒತ್ತಡವು ಅಭಿಧಮನಿಯು ಬಾತುಕೊಂಡು ಊದುವಂತೆ ಮಾಡುತ್ತದೆ. ಅಲ್ಲದೇ ತೀವ್ರವಾದ ಮಲಬದ್ಧತೆಯೂ ಪೈಲ್ಸ್‌ಗೆ ಒಂದು ಕಾರಣ. ಕರುಳಿನ ಅನಾರೋಗ್ಯಕರ ಕಾರ್ಯಚಟುವಟಿಕೆಯಿಂದಲೂ ಇದು ಉಂಟಾಗಬಹುದು.ಇತರ ಕಾರಣಗಳು: ಸ್ಥೂಲಕಾಯ ಹೊಂದಿರುವ ಜನರಲ್ಲಿ ಮೂಲವ್ಯಾಧಿ ಸಾಮಾನ್ಯವಾಗಿ ಹೆಚ್ಚು ಕಂಡುಬರುತ್ತದೆ. ಅಲ್ಲದೇ ನಿರಂತರವಾಗಿ ಕುಳಿತು ಅಥವಾ ನಿಂತು ಕೆಲಸ ಮಾಡುವವರಲ್ಲಿ, ಭಾರವಾದ ವಸ್ತುಗಳನ್ನು ಎತ್ತುವ ಕೆಲಸದಲ್ಲಿ ತೊಡಗಿರುವವರಲ್ಲಿ, ನಾರುಯುಕ್ತ ಆಹಾರ ಸೇವಿಸದೇ ಇರುವವರಲ್ಲಿ, ಕಡಿಮೆ ನೀರು ಸೇವಿಸುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಇತರ ಕೆಲವು ಸಾಮಾನ್ಯ ಕಾರಣಗಳೆಂದರೆ ದೇಹದ ಜೀವಕೋಶಗಳ ಅಶಕ್ತತೆ, ಮಾನಸಿಕ ಒತ್ತಡ, ಆತಂಕ, ವಂಶವಾಹಿ ಇತ್ಯಾದಿ.ಪೈಲ್ಸ್‌ನ ಚಿಹ್ನೆಗಳೇನು?

ಮಲ ವಿಸರ್ಜನೆ ಸಂದರ್ಭದಲ್ಲಿ ನೋವು ಕಾಣಿಸಿಕೊಳ್ಳುವುದು, ಕೆಲವು ಸಲ ರಕ್ತ ಒಸರುವುದು, ಮಲ ವಿಸರ್ಜನೆಯಾದ ನಂತರ ಉರಿ, ಅಸಮಾಧಾನ ಉಂಟಾಗುವುದು ಇದರ ಸಾಮಾನ್ಯ ಲಕ್ಷಣಗಳು. ಗುದದಲ್ಲಿ ನೋವು, ತುರಿಕೆ ಕಾಣಿಸಿಕೊಳ್ಳುವುದರಿಂದ ರೋಗಿಯು ನೆಮ್ಮದಿಯಿಂದ ಕುಳಿತುಕೊಳ್ಳಲು ಕೂಡ ಸಾಧ್ಯವಾಗುವುದಿಲ್ಲ.ಪತ್ತೆ ಹಚ್ಚುವುದು ಹೇಗೆ?

ಗುದ ದ್ವಾರದಲ್ಲಿ ರಕ್ತಸ್ರಾವ ಕಂಡುಬಂದರೆ ತಪ್ಪದೇ ವೈದ್ಯರನ್ನು ಭೇಟಿಯಾಗಬೇಕು. ಇದು ಮೂಲವ್ಯಾಧಿಯ ಮುಖ್ಯ ಕಾರಣವಾಗಿದ್ದರೂ, ಅದನ್ನು ಹೊರತುಪಡಿಸಿಯೂ ಇದು ಹೆಚ್ಚಿನ ಗಂಭೀರ ಸಮಸ್ಯೆಗೆ ಕಾರಣವಾಗಬಹುದು. ದೈಹಿಕ ಪರೀಕ್ಷೆಯಿಂದ ಈ ವ್ಯಾಧಿಯನ್ನು ಕಂಡುಹಿಡಿಯಬಹುದು. ಅವುಗಳ ಗಾತ್ರದ ಮೇಲೆ ಚಿಕಿತ್ಸೆಯನ್ನು ನೀಡಲಾಗುತ್ತದೆ. ಆದರೆ 4ನೇ ಹಂತ ತಲುಪಿದ ಮೇಲೆ ಚಿಕಿತ್ಸೆ ಕಠಿಣವಾಗುತ್ತದೆ.ಚಿಕಿತ್ಸೆ ಹೇಗೆ?

ಮೂಲವ್ಯಾಧಿಯ ಹಂತ ಯಾವುದು ಹಾಗೂ ಅದರಿಂದ ಎದುರಾಗಿರುವ ಸಮಸ್ಯೆ ಎಷ್ಟರ ಮಟ್ಟಿಗಿದೆ ಎಂಬುದರ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ. ಅನೇಕ ಪ್ರಕರಣಗಳಲ್ಲಿ, ಮುಖ್ಯವಾಗಿ ಗರ್ಭಾವಸ್ಥೆ ಹಾಗೂ ಮಗುವಿಗೆ ಜನನ ನೀಡುವ ಸಂದರ್ಭದಲ್ಲಿ ಎದುರಾಗುವ ಈ ಸಮಸ್ಯೆ, ಚಿಕಿತ್ಸೆಯಿಂದ ಪರಿಹಾರ ಕಾಣುತ್ತದೆ.ಮನೆ ಔಷಧಿ

ಅನೇಕ ಪ್ರಕರಣಗಳಲ್ಲಿ ಮೂಲವ್ಯಾಧಿಗೆ ಮನೆ ಔಷಧಿಯೂ ಪರಿಣಾಮಕಾರಿ ಪಾತ್ರ ವಹಿಸುತ್ತದೆ. ಒಂದು ದಿನದಲ್ಲಿ ಅನೇಕ ಬಾರಿ ಹಿತವಾದ ಬಿಸಿ ನೀರಿನ ಟಬ್ ಮೇಲೆ ಕುಳಿತುಕೊಳ್ಳುವುದರಿಂದ ತುರಿಕೆ ಕಡಿಮೆಯಾಗಬಹುದು. ಊಟದಲ್ಲಿ ನಾರಿನ ಅಂಶ ಹೆಚ್ಚಾಗಿ ಸೇವಿಸುವುದು ಮತ್ತು ಸಮೃದ್ಧವಾದ ನೀರಿನ ಬಳಕೆಯೂ ಕ್ರಮೇಣ ಇದರ ಲಕ್ಷಣಗಳು ಕುಗ್ಗಲು ಕಾರಣವಾಗುತ್ತದೆ.ಇಡಿಯಾದ ಧಾನ್ಯ, ಕಾಳು, ತಾಜಾ ಹಣ್ಣು (ತೊಗಟೆ ಅಥವಾ ತಿರುಳಿನ ಸಮೇತ) ತಾಜಾ ತರಕಾರಿಗಳನ್ನು ನಿರಂತರವಾಗಿ ಸೇವಿಸುವುದರಿಂದ ಮೂಲವ್ಯಾಧಿ ಸಮಸ್ಯೆ ಬೆಳೆಯದಂತೆ ತಡೆಯಬಹುದು.

ನಿರಂತರ ವ್ಯಾಯಾಮದಿಂದಲೂ ಮಲ ವಿಸರ್ಜನೆ ಕ್ರಿಯೆ ಸುಗಮಗೊಳ್ಳುವ ಸಾಧ್ಯತೆ ಇದೆ. ಆದರೆ ಈ ಸಮಸ್ಯೆ ಗಂಭೀರ ಸ್ವರೂಪ ತಾಳಿದ ನಂತರ ಚಿಕಿತ್ಸೆಯನ್ನು ಪಡೆಯಲೇಬೇಕು. ಅಂತಹ ಚಿಕಿತ್ಸೆಗಳೆಂದರೆ-* ಶಸ್ತ್ರಚಿಕಿತ್ಸೆಯಲ್ಲದ ಪ್ರಕ್ರಿಯೆ

* ಘನೀಕರಣ ಚಿಕಿತ್ಸೆ

* ಪೈಲ್ಸ್ ಗಡ್ಡೆಗೆ ದ್ರಾವಣವನ್ನು ಚುಚ್ಚುವುದು

* ಚಿಕ್ಕದಾದ ರಬ್ಬರ್‌ಬಾಂಡ್‌ಗಳನ್ನು ಪೈಲ್ಸ್ ಗಡ್ಡೆಗೆ ಬಿಗಿಯುವ ಮೂಲಕ ಅದಕ್ಕೆ ರಕ್ತ ಪೂರೈಕೆ ಆಗದಂತೆ ಮಾಡುವುದು

* ಐಆರ್‌ಸಿ (Infra Red Coagulation)

ಲಭ್ಯವಿರುವ ಶಸ್ತ್ರಚಿಕಿತ್ಸೆ

ಹಂತ 1 ಹಾಗೂ 2 ಅಥವಾ 3 ಮತ್ತು 4ನೇ ಹಂತದ ಚಿಹ್ನೆಗಳನ್ನು ಹೊಂದಿರುವ ಪೈಲ್ಸ್‌ಗಳಿಗೆ ಶಸ್ತ್ರಚಿಕಿತ್ಸೆ ಒಂದೇ ಪರಿಹಾರ. ಈ ಶಸ್ತ್ರಚಿಕಿತ್ಸೆಯಲ್ಲಿಯೂ ಎರಡು ರೀತಿಯ ಆಯ್ಕೆಗಳಿವೆ- ಅವುಗಳೆಂದರೆ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆ ಹಾಗೂ ಕನಿಷ್ಟತಮ ಆಕ್ರಮಣಶೀಲ ಶಸ್ತ್ರಚಿಕಿತ್ಸೆ (MIS)ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆ

ಈ ಪ್ರಕ್ರಿಯೆಯಲ್ಲಿ ಪೈಲ್ಸ್ ಗಡ್ಡೆಗಳನ್ನು ಕತ್ತರಿಸಲಾಗುತ್ತದೆ. ಇದರಿಂದ ಉಂಟಾಗುವ ಗಾಯವನ್ನು ಎರಡು ಅಥವಾ ಮೂರು ವಾರಗಳ ಕಾಲ ಎಚ್ಚರಿಕೆಯಿಂದ ವಾಸಿ ಮಾಡಿಕೊಳ್ಳಬೇಕು. ಗುಣವಾಗುವವರೆಗೆ ರೋಗಿಯು ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ.ಕನಿಷ್ಟತಮ ಆಕ್ರಮಣಶೀಲ ಶಸ್ತ್ರಚಿಕಿತ್ಸೆ (MIS)

ಲ್ಯಾಪ್ರೋಸ್ಕೋಪಿಕ್/ ಕೀಹೋಲ್ ಶಸ್ತ್ರಚಿಕಿತ್ಸೆ ಎಂದು ಸಹ ಕರೆಯಲಾಗುವ ಈ ಶಸ್ತ್ರಚಿಕಿತ್ಸೆಯು ಆಧುನಿಕ ತಂತ್ರಜ್ಞಾನವಾಗಿದ್ದು, ಈ ಪದ್ಧತಿಯಲ್ಲಿ ಶಸ್ತ್ರಚಿಕಿತ್ಸೆಯನ್ನು ಸಣ್ಣ ಇಂಜೆಕ್ಷನ್‌ನಿಂದ ನಿರ್ವಹಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಹೆಚ್ಚು ನೋವು ಉಂಟಾಗುವುದಿಲ್ಲ. ತೆರೆದ ಗಾಯಗಳೂ ಆಗುವುದಿಲ್ಲ. ಅಲ್ಲದೇ ಗುಣವಾಗಲು ಕಾಲಾವಕಾಶವೂ ಕಡಿಮೆ. ಡೇಕೇರ್ ಚಿಕಿತ್ಸಾ ಕೇಂದ್ರಗಳಲ್ಲಿಯೂ ಇದನ್ನು ನಿರ್ವಹಿಸಬಹುದು.ಮುನ್ನೆಚ್ಚರಿಕೆಗಳೇನು?

ಮುನ್ನೆಚ್ಚರಿಕೆಯು ಚಿಕಿತ್ಸೆಗಿಂತಲೂ ಒಳ್ಳೆಯ ಮಾರ್ಗ ಎಂದು ಹೇಳಲಾಗುತ್ತದೆ. ಆದ್ದರಿಂದ ಸೂಕ್ತವಾದ ಮುನ್ನೆಚ್ಚರಿಕೆ ಕೈಗೊಂಡಲ್ಲಿ ಹಾಗೂ ಈ ಕೆಳಗೆ ನೀಡಲಾಗಿರುವ ಮಾರ್ಗಗಳನ್ನು ಅನುಸರಿಸುವ ಮೂಲಕ ಪೈಲ್ಸ್ ಆಕ್ರಮಣವನ್ನು ಪ್ರಾಥಮಿಕ ಹಂತದಲ್ಲಿಯೇ ತಡೆಯಬಹುದು ಹಾಗೂ ಈ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬಹುದು.* ಹೆಚ್ಚು ಹೆಚ್ಚು ತಾಜಾ ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸಿ

* ಸಾಧ್ಯವಾದಷ್ಟು ಹೆಚ್ಚು ಹೆಚ್ಚು ನೀರು ಸೇವಿಸಿ

* ಮಲಬದ್ಧತೆಯನ್ನು ತಪ್ಪಿಸಿ

* ಮಲ ವಿಸರ್ಜನೆ ಮಾಡುವಾಗ ಒತ್ತಡ ಹೇರಬೇಡಿ

* ಮಲಬದ್ಧತೆ ಸಮಸ್ಯೆ ಇದ್ದಲ್ಲಿ ಮೊದಲು ಅದಕ್ಕೆ ಚಿಕಿತ್ಸೆ ಪಡೆಯಿರಿ

* ಮಲ ಮೆದುಗೊಳಿಸುವ ಚಿಕಿತ್ಸೆ ಪಡೆಯಿರಿಪೈಲ್ಸ್ ಅಥವಾ ಮೂಲವ್ಯಾಧಿ ಎಂದರೆ ಬೆಚ್ಚಿ ಬೀಳುವ ಅಗತ್ಯವೇನೂ ಇಲ್ಲ. ಆರೋಗ್ಯಪೂರ್ಣ ಆಹಾರ ಸೇವಿಸುವ, ಸರಿಯಾದ ವ್ಯಾಯಾಮ ಮಾಡುವ ಹಾಗೂ ಆರೋಗ್ಯಕರ ಜೀವನ ಶೈಲಿಯಿಂದ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಅದೂ ಅಲ್ಲದೆ, ಗಂಭೀರ ಹಂತದ ಸ್ವರೂಪ ತಲುಪಿದ ಮೇಲೆಯೂ ಎಂಐಎಸ್‌ನಂತಹ ಸುಧಾರಿತ ಚಿಕಿತ್ಸೆ ಲಭ್ಯವಿರುವುದರಿಂದ ಈ ಸಮಸ್ಯೆಯಿಂದ ಸುಲಭವಾಗಿ ಗುಣ ಹೊಂದಬಹುದು.

(ಲೇಖಕರು ನೋವಾ ಮೆಡಿಕಲ್ ಸೆಂಟರ್‌ನ ಉಪಾಧ್ಯಕ್ಷರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.