ಬುಧವಾರ, ಮೇ 12, 2021
24 °C

ಮೂಲಸೌಕರ್ಯಗಳಿಗೆ ಸಂಕಷ್ಟ

ಶಿವರಂಜನ್ ಸತ್ಯಂಪೇಟೆ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ತಾಲ್ಲೂಕಿನ ನಾಗೂರ ಪುನರ್ವಸತಿ ಕೇಂದ್ರ ನಿರ್ಮಾಣವಾಗಿ ಐದಾರು ವರ್ಷ ಕಳೆದಿದ್ದರೂ ಸರ್ಕಾರದ ಅಸಡ್ಡೆತನದಿಂದಾಗಿ ಅದಿನ್ನೂ ಮೂಲಸೌಕರ್ಯಗಳಿಂದ ವಂಚಿತವಾಗಿದೆ.ಬೆಣ್ಣೆತೊರಾ ಯೋಜನೆ ಅಡಿಯಲ್ಲಿ ಮುಳುಗಡೆಯಾದ ನಾಗೂರ ಪುನರ್ವಸತಿ ಕೇಂದ್ರವನ್ನು ಸರ್ಕಾರವೇ ನಿರ್ಮಿಸಿದ್ದರೂ ಅಲ್ಲಿ ಕುಡಿಯುವ ನೀರು, ರಸ್ತೆ, ಸಾರಿಗೆ, ಬೀದಿದೀಪ, ಶಿಕ್ಷಣಕ್ಕೆ ಯಾವುದೇ ರೀತಿಯ ವ್ಯವಸ್ಥೆ ಕಲ್ಪಿಸಿಲ್ಲವಾದ್ದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.ಹಿನ್ನೆಲೆ: ವರುಣನ ಆರ್ಭಟದಿಂದಾಗಿ ಮುಳುಗಡೆಯಾದ ಗ್ರಾಮದ ನಿವಾಸಿಗಳ ಅನುಕೂಲಕ್ಕಾಗಿ 2005ರಲ್ಲಿ ಸರ್ಕಾರ ಎಲ್ಲ ಜನರಿಗೆ ನಿವೇಶನ ನೀಡಿ ಮನೆ ನಿರ್ಮಿಸಿಕೊಳ್ಳಲು ಎರಡೂವರೆ ಲಕ್ಷ ರೂಪಾಯಿ ಕೂಡ ನೀಡಿತು. ಅದರಲ್ಲಿ ಮನೆ ಕಳೆದುಕೊಂಡ 250 ಕುಟುಂಬಗಳು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡರು. ಅಲ್ಲಿ ಕೆಲವರು ತಮಗೆ ನೀಡಿದ ನಿವೇಶನದಲ್ಲಿ ಮನೆ ಕಟ್ಟಿಕೊಂಡು, ಇನ್ನೂ ಹಲವರು ಟಿನ್‌ಶೆಡ್‌ನಲ್ಲೇ ವಾಸಿಸುತ್ತಿದ್ದಾರೆ.ಸೌಕರ್ಯಗಳಿಗೆ ಬರ: ಹಳೆಯ ನಾಗೂರ ಗ್ರಾಮದಿಂದ ಸುಮಾರು 1 ಕಿ.ಮೀ. ದೂರದಲ್ಲಿ ನಿರ್ಮಾಣವಾಗಿರುವ ಈ ಪುನರ್ವಸತಿ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟಿದೆ. ಐದಾರು ವರ್ಷದ ಹಿಂದೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ನಿರ್ಮಿಸಲಾದ ಟ್ಯಾಂಕರ್‌ನಲ್ಲಿ ಇವತ್ತಿಗೂ ಒಂದುಹನಿ ನೀರು ಹರಿದಿಲ್ಲ.ನಾಲ್ಕು ಬೋರ್‌ವೆಲ್‌ಗಳಲ್ಲಿ ಸದಾ ಒಂದೆರಡು ಬೋರ್‌ವೆಲ್‌ಗಳು ಕೆಟ್ಟಿರುತ್ತವೆ. ಬೇಸಿಗೆ ವೇಳೆಯಲ್ಲಿ ಬೋರ್‌ವೆಲ್ ಬತ್ತಿ ಹೋಗುವುದರಿಂದ ಕುಡಿಯುವ ನೀರಿನ ತಾಪತ್ರಯ ತುಂಬಾ ಇದೆ ಎಂದು ಜಗದೇವಪ್ಪ ತಮ್ಮಾಣಿ  ದೂರುತ್ತಾರೆ.ನಾಗೂರ ತಾಂಡಾಕ್ಕೆಂದು ಮಂಜೂರಾದ 8 ಕೋಣೆಗಳನ್ನು ಹೊಂದಿದ ಹಿರಿಯ ಪ್ರಾಥಮಿಕ ಶಾಲೆಯೇನೋ ಇದೆ. ಆದರೆ ಅಲ್ಲಿ ಶಿಕ್ಷಕರ ಕೊರತೆ ಇದೆ. 70 ವಿದ್ಯಾರ್ಥಿಗಳಿಗೆ ಕೇವಲ 3 ಜನ ಶಿಕ್ಷಕರಿದ್ದಾರೆ. ಅಲ್ಲಿನ ಮಕ್ಕಳಿಗೆ ಬಿಸಿಯೂಟದ ಭಾಗ್ಯವಿಲ್ಲ. ಕುಡಿಯುವ ನೀರಿಲ್ಲ. ಶೌಚಾಲಯದ ವ್ಯವಸ್ಥೆ ಇಲ್ಲ. ಪುನರ್ವಸತಿ ಕೇಂದ್ರದ ಮುಖ್ಯ ರಸ್ತೆಗಳಲ್ಲಿ ವಿದ್ಯುತ್‌ಕಂಬಗಳನ್ನು ಹಾಕಲಾಗಿದೆ. ಆದರೆ ಕಂಬಗಳಿಗೆ ಲೈಟಿಲ್ಲ!ಪುನರ್ವಸತಿ ಕೇಂದ್ರ 2: ನಾಗೂರ ಗ್ರಾಮ ಪ್ರವೇಶಿಸುವ ಮೊದಲೇ ಕಂಡು ಬರುವ ತಾತ್ಕಾಲಿಕ ಪುನರ್ವಸತಿ ಕೇಂದ್ರ 2 (ಟಿನ್‌ಶೆಡ್) ರಲ್ಲಿ ವಾಸಿಸುವ ನಿವಾಸಿಗಳ ಕಥೆ ಇದಕ್ಕಿಂತ ಭೀಕರವಾಗಿದೆ.ಮುಸ್ಲಿಂ, ಈಡಿಗ, ಲಿಂಗಾಯತ, ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡದ ಜನರಿರುವ 100 ಕುಟುಂಬಗಳ ಸುಮಾರು 700 ಜನ ಇಲ್ಲಿ ವಾಸಿಸುತ್ತಿದ್ದಾರೆ. ವಿದ್ಯುತ್, ಕುಡಿಯುವ ನೀರು ಹಾಗೂ ಇನ್ನಿತರ ಮೂಲಸೌಕರ್ಯ ಇಲ್ಲದ್ದರಿಂದ ಜನ ತೀವ್ರ ತೊಂದರೆ ಅನುಭವಿಸುವಂತಾಗಿದೆ.ಟಿನ್‌ಶೆಡ್ ಇಲ್ಲದವರು ಚಪ್ಪರ ಹಾಕಿ ಕುರಿ,ಕೋಳಿ, ದನ-ಕರುಗಳೊಂದಿಗೆ ಒಂದೇ ಸೂರಿನಲ್ಲಿ ವಾಸ ಮಾಡುತ್ತಿದ್ದಾರೆ. ಒಂದೇ ಕೇಬಲ್ ವೈರ್‌ನಿಂದ ಇಡೀ ನೂರು ಕುಟುಂಬಗಳು ವಿದ್ಯುತ್ ಸೌಕರ್ಯ ಪಡೆದುಕೊಂಡಿರುವುದರಿಂದ ಚಿಮಣಿಗಿಂತ ಕಡಿಮೆ ಬೆಳಕಿನಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ.“ಮೂರು ಬೋರ್‌ವೆಲ್ ಇದ್ರೂ ಯಾವೂ ಕೆಲಸಕ್ಕ ಬರಂಗಿಲ್ರೀ. ಬ್ಯಾಸ್ಗಿ ಕಾಲ್ದಾಗ ಪತ್ರಾದಾಗ ಅನ್ನ ಕುದ್ದಂಗ ಐತಿ ನಮ್ ಜೀವನ. ಗಾಳಿ ಬೀಸುವಾಗ ಪತ್ರಾ ದಡಲ್, ದಡಲ್ ಅಂತಿದ್ರ ನಮ್ಮ ಜೀವಾ ಕೈಯಾಗಿಡಕೊಂಡೇ ಬದಕ್ತೀವ್ರಿ. ಈವರೆಗೆ ಗೌರ‌್ಮೆಂಟ್ ಕಣ್ಣೆತ್ತಿಯೂ ನೋಡಿಲ್ಲ” ಎಂದು ಅಲ್ಲಿನ ನಿವಾಸಿ ಉಮಾದೇವಿ ಅಡವಿಕರ ಗೋಳಿಡುತ್ತಾಳೆ.ಸಮಸ್ಯೆ ಪರಿಹಾರಕ್ಕಾಗಿ ಪಂಚಾಯಿತಿಯವರನ್ನು ಮತ್ತು ನೀರಾವರಿ ಇಲಾಖೆಯವರನ್ನು ಕೇಳಿದರೆ `ನಮ್ಮ ವ್ಯಾಪ್ತಿಗೆ ಬರುವುದಿಲ್ಲ~ ಎಂದು ಅಲ್ಲಿಂದ ದಾಟಿ ಹಾಕುತ್ತಿದ್ದಾರೆ. ಈ ಕುರಿತಾಗಿ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಲಾಗಿದೆ. ಆದರೆ ಸೌಲಭ್ಯ ಕಲ್ಪಿಸಲು ಯಾರೂ ಮುಂದಾಗುತ್ತಿಲ್ಲ ಎಂಬುದು ನಾಗೂರ ಪುನರ್ವಸತಿ ಕೇಂದ್ರದ ನಿರಾಶ್ರಿತ ಹೋರಾಟ ಸಮಿತಿ ಪದಾಧಿಕಾರಿಗಳ ಅಳಲು.

 

ಮೂಲಸೌಲಭ್ಯಕ್ಕೆ ಒತ್ತಾಯಿಸಿ ಸಂಬಂಧಿಸಿದ ಅಧಿಕಾರಿಗಳ ಬಳಿಗೆ ಅಂಡಲೆಯುತ್ತಿದ್ದರೂ ಈವರೆಗೆ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸಿಲ್ಲದಿರುವುದು ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿ ಎಂದು ಹೇಳಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.