ಮೂಲಸೌಕರ್ಯ: ಆಮೆ ನಡಿಗೆ

7

ಮೂಲಸೌಕರ್ಯ: ಆಮೆ ನಡಿಗೆ

Published:
Updated:

ನವದೆಹಲಿ (ಪಿಟಿಐ): ಮೂಲಸೌಕರ್ಯ ವೃದ್ಧಿಗೆ ಸಂಬಂಧಿಸಿದಂತೆ ದೇಶದಲ್ಲಿ ನಡೆಯುತ್ತಿರುವ ಶೇ 52ರಷ್ಟು ಕಾಮಗಾರಿಗಳು ನಿಗದಿತ ಸಮಯಕ್ಕಿಂತ ವಿಳಂಬವಾಗಿ ನಡೆಯುತ್ತಿವೆ ಎಂದು ಬಜೆಟ್ ಪೂರ್ವ ಆರ್ಥಿಕ ಸಮೀಕ್ಷಾ ವರದಿ ತಿಳಿಸಿದೆ.ಅಕ್ಟೋಬರ್ 2010ರ ವರೆಗಿನ ಅಂಕಿ ಅಂಶದ ಪ್ರಕಾರ ದೇಶದಲ್ಲಿ ನಡೆಯುತ್ತಿರುವ 559 ಮೂಲಸೌಕರ್ಯ ವೃದ್ಧಿ  ಯೋಜನೆಗಳಲ್ಲಿ ಕೇವಲ 14 ಮಾತ್ರ ನಿಗದಿತ ಸಮಯಕ್ಕಿಂತ ಮುಂಚೆ  ನಡೆದಿವೆ. 117 ಯೋಜನೆಗಳು ನಿಗದಿತ ಸಮಯದಲ್ಲಿ ಹಾಗೂ 223 ಕಾಮಗಾರಿಗಳು ವಿಳಂಬವಾಗಿ ನಡೆಯುತ್ತಿವೆ ಎಂದು ಕಾರ್ಯಕ್ರಮ ಜಾರಿ ಇಲಾಖೆಯ (ಡಿಪಿಐ) ಅಂಕಿಅಂಶವನ್ನು ಉಲ್ಲೇಖಿಸಿ  ಆರ್ಥಿಕ ಸಮೀಕ್ಷೆ ಹೇಳಿದೆ. 150 ಕೋಟಿಗಿಂತಲೂ ಹೆಚ್ಚಿನ ಹೂಡಿಕೆಯ ಯೋಜನೆಗಳ ಮೇಲೆ ‘ಡಿಪಿಐ’ ನಿಗಾ ಇರಿಸುತ್ತಿದ್ದು, ಕಾಮಗಾರಿ ಪ್ರಗತಿಯ ಕುರಿತು ಪರಿಶೀಲನೆ ನಡೆಸುತ್ತದೆ. ಈ ಅವಧಿಯಲ್ಲಿ ಜಾರಿಗೊಳಿಸಲಾದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ನಿರ್ಮಾಣ ಯೋಜನೆಗಳಲ್ಲಿ 51 ಯೋಜನೆಗಳು 36 ತಿಂಗಳೂ ವಿಳಂಬವಾಗಿವೆ. 20 ವಿದ್ಯುತ್ ಯೋಜನೆಗಳು 18 ತಿಂಗಳು ಹಾಗೂ ತೈಲಕ್ಕೆ ಸಂಬಂಧಿಸಿದ 16 ಯೋಜನೆಗಳು 16 ತಿಂಗಳು ತಡವಾಗಿವೆ ಎಂದು ‘ಡಿಪಿಐ’ ಹೇಳಿದೆ.ಬಂಡವಾಳ ಹೂಡಿಕೆ ಸಾಮರ್ಥ್ಯ ಹೆಚ್ಚಿದ್ದರೂ, ನಿಗದಿತ ಸಮಯದೊಳಗೆ ಹಣಕಾಸಿನ ನೆರವು ಪಾವತಿಸದ ಕಾರಣ ಹಲವು ಕಾಮಗಾರಿಗಳು ವಿಳಂಬವಾಗಿದೆ. ಕೆಲವು ಯೋಜನೆಗಳು ನೆನೆಗುದಿಗೆ ಬಿದ್ದಿದ್ದು, ನೆರವಿಗಾಗಿ ಕಾಯುತ್ತಿವೆ. ಇವು ಮುಂದೆ ಕೈಗೆತ್ತಿಕೊಳ್ಳಲಿರುವ ಯೋಜನೆಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದ್ದು, ಕಳಪೆ ಕಾಮಗಾರಿ, ಭೂಸ್ವಾಧೀನ ಪ್ರಕ್ರಿಯೆಗೆ ತಡೆ, ಪ್ರಾಥಮಿಕ ಯೋಜನೆ ಅನುಷ್ಠಾನದಲ್ಲಿ ವಿಳಂಬ, ಗುತ್ತಿಗೆ ಪಡೆದ ಕಂಪೆನಿಗಳ ಅಸರ್ಮಪಕ ನಿರ್ವಹಣೆ, ಸರ್ಕಾರಿ-ಖಾಸಗಿ ಸಹಭಾಗಿತ್ವದ ವಿಫಲತೆ, ಉಪ ಗುತ್ತಿಗೆ ಸಮಸ್ಯೆ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಿವೆ. ಮೂಲಸೌಕರ್ಯ ಯೋಜನೆಗಳು ನಿಗದಿತ ಸಮಯದೊಳಗೆ ಪೂರ್ಣಗೊಳ್ಳಬೇಕಿದ್ದರೆ, ಈಗಿರುವ ಭೂಸ್ವಾಧೀನ ಪ್ರಕ್ರಿಯೆ ಇನ್ನಷ್ಟು ಸರಳವಾಗಬೇಕು ಎಂದು ಸಮೀಕ್ಷೆ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry