ಬುಧವಾರ, ಏಪ್ರಿಲ್ 21, 2021
24 °C

ಮೂಲಸೌಕರ್ಯ ಒದಗಿಸಲು ಸಮಾಲೋಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ನಗರದ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ರಸ್ತೆ, ಚರಂಡಿ, ವಿದ್ಯುತ್ ದೀಪ ಮೊದಲಾದ ಮೂಲಸೌಕರ್ಯ ಒದಗಿಸುವ ಸಂಬಂಧ ಮಲೆನಾಡು ಸಣ್ಣ ಕೈಗಾರಿಕಾ ಸಂಘದ ಪದಾಧಿಕಾರಿಗಳು ಗುರುವಾರ ನಗರಸಭೆ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಬೇಂಗ್ರೆ ಅವರೊಂದಿಗೆ ಸಮಾಲೋಚನೆ ನಡೆಸಿದರು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಶಿವಾನಂದ್, ಕೈಗಾರಿಕಾ ವಸಾಹತು ಪ್ರದೇಶದಲ್ಲಿ ನೂರಕ್ಕೂ ಹೆಚ್ಚು ಮಳಿಗೆಗಳು ಇವೆ. ಇಲ್ಲಿ ಗ್ಯಾರೇಜ್, ವಾಹನಗಳ ಬಿಡಿ ಭಾಗಗಳ ಮಾರಾಟ, ಮರಗೆಲಸ, ಹೋಟೆಲ್ ಇನ್ನಿತರ ಉದ್ಯಮ ನಡೆಯುತ್ತಿದೆ. ಆದರೆ, ಮೂಲಸೌಕರ್ಯಗಳ ಕೊರತೆಯಿಂದ ಉದ್ದಿಮೆದಾರರು ಹಾಗೂ ಕಾರ್ಮಿಕರು ಕೆಲಸ ಮಾಡಲಾಗದ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಿದರು.

ವಸಾಹತು ಪ್ರದೇಶದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಎಲ್ಲೆಂದರಲ್ಲಿ ನೀರು ನಿಲ್ಲುತ್ತಿದೆ. ಹೀಗೆ ನೀರು ನಿಲ್ಲುವ ಕಾರಣ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ಎಂದರು.

ಕೈಗಾರಿಕಾ ವಸಾಹತು ಇರುವ ಪ್ರದೇಶದಲ್ಲೇ ಶುಂಠಿ ಸಂಸ್ಕರಣ ಘಟಕ ಹಾಗೂ ಹಾಲಿನ ಡೇರಿ ಇರುವುದರಿಂದ ಅಲ್ಲಿಂದ ಬಿಡುವ ತ್ಯಾಜ್ಯ ಪರಿಸರವನ್ನು ಮಲೀನಗೊಳಿಸಿದೆ. ಈ ಬಗ್ಗೆ ನಗರಸಭೆ ಪರಿಸರ ಎಂಜಿನಿಯರ್ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದರು.

ನಗರಸಭೆಗೆ ವಸಾಹತು ಪ್ರದೇಶದಲ್ಲಿರುವ ಮಳಿಗೆದಾರರು ಕಾಲಕಾಲಕ್ಕೆ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಹೀಗಾಗಿ, ಕೆಲಸ ಮಾಡುವ ಉತ್ತಮ ವಾತಾವರಣವನ್ನು ನಗರಸಭೆ ಅಲ್ಲಿ ನಿರ್ಮಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.

ಮಲೆನಾಡು ಸಣ್ಣ ಕೈಗಾರಿಕಾ ಸಂಘದ ಪ್ರತಿನಿಧಿಗಳಿಂದ ಅಹವಾಲು ಕೇಳಿದ ನಗರಸಭೆ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಬೇಂಗ್ರೆ ಶೀಘ್ರವಾಗಿ ಕೈಗಾರಿಕಾ ವಸಾಹತು ಪ್ರದೇಶಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ  ನಡೆಸಿ ಅಗತ್ಯ ಇರುವ ಮೂಲಸೌಕರ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.

ಮಲೆನಾಡು ಸಣ್ಣ ಕೈಗಾರಿಕಾ ಸಂಘದ ಕಾರ್ಯದರ್ಶಿ ಸುಧೀರ್, ಸಹ ಕಾರ್ಯದರ್ಶಿ ಕಾರ್ಣಿಕ್‌ರಾವ್,  ದಿನಕರ್, ನಾಗರಾಜ, ತಿಮ್ಮಪ್ಪ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.