ಮೂಲಸೌಕರ್ಯ ಕಲ್ಪಿಸಲು ಆದ್ಯತೆ

7
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ತಿಪ್ಪೇಸ್ವಾಮಿ ಅಧಿಕಾರ ಸ್ವೀಕಾರ

ಮೂಲಸೌಕರ್ಯ ಕಲ್ಪಿಸಲು ಆದ್ಯತೆ

Published:
Updated:

ಚಿತ್ರದುರ್ಗ: ನಗರದಲ್ಲಿನ ಐತಿಹಾಸಿಕ ಕೋಟೆ ವೀಕ್ಷಿಸಲು ಆಗಮಿಸುವ ಸಾವಿರಾರು ಪ್ರವಾಸಿಗರಿಗೆ ಶೌಚಾಲಯ, ಸ್ನಾನಗೃಹ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ ಭರವಸೆ ನೀಡಿದರು.ಸೋಮವಾರ ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರು ಮಾತನಾಡಿದರು.ಕೋಟೆ ವೀಕ್ಷಿಸಲು ಪ್ರತಿದಿನ ಆಗಮಿಸುವ ಸಾವಿರಾರು ಪ್ರವಾಸಿಗರಿಗೆ ಶೌಚಾಲಯದ ವ್ಯವಸ್ಥೆ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪುರಾತತ್ವ ಇಲಾಖೆ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿದ್ದರೂ ಸಮರ್ಪಕವಾದ ಸೌಲಭ್ಯಗಳನ್ನು ಪ್ರವಾಸಿಗರಿಗೆ ಕಲ್ಪಿಸಿಲ್ಲ. ಆದ್ದರಿಂದ ಪ್ರಾಧಿಕಾರದ ವತಿಯಿಂದ ಸೌಲಭ್ಯಗಳನ್ನು ಕಲ್ಪಿಸಲು ಯೋಜನೆ ರೂಪಿಸಲಾಗುವುದು. ಈ ಯೋಜನೆ ಬಗ್ಗೆ ತಾವು ಹಿಂದಿನ ಸಭೆಯಲ್ಲಿ ಅಧಿಕಾರಿಗಳ ಗಮನ ಸೆಳೆದಿದ್ದೆ. ತಕ್ಷಣ ಆಯುಕ್ತರು ಹಾಗೂ ಸಿಬ್ಬಂದಿ ಸಹ ಕಾರ್ಯ ಪ್ರವೃತ್ತರಾಗಿ ಸಮೀಕ್ಷೆ ಕೈಗೊಂಡಿದ್ದರು ಎಂದು ವಿವರಿಸಿದರು.ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಕುಂದು ತರದಂತೆ ಕೆಲಸ ಮಾಡುತ್ತೇನೆ. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.ಹಿಂದುಳಿದ ವರ್ಗದವನಾದ ತಮ್ಮನ್ನು ಗುರುತಿಸಿದ ಬಿಜೆಪಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಿದೆ. ಎಲ್ಲ ವರ್ಗದ ಜನರಿಗೂ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಬಿಜೆಪಿ ನನಗೆ ಈ ಸ್ಥಾನ ನೀಡಿದೆ. ಯಾವುದೇ ಯೋಜನೆ, ಕೆಲಸ ಮಾಡುವಲ್ಲಿ ನಿಕಟಪೂರ್ವ ಅಧ್ಯಕ್ಷ ಎಂ.ಪಿ. ಗುರುರಾಜ್ ಅವರ ಸಲಹೆ ಪಡೆದು ಸಮರ್ಪಕವಾಗಿ ಮತ್ತು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದರು.ನಿಕಟಪೂರ್ವ ಅಧ್ಯಕ್ಷ ಎಂ.ಪಿ. ಗುರುರಾಜ್ ಮಾತನಾಡಿ, ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ 17.7 ಎಕರೆ ಜಮೀನಿಗೆ ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ. ಈ ಜಮೀನಿನಲ್ಲಿ ಸುಮಾರು 250ರಿಂದ 275 ನಿವೇಶನಗಳನ್ನು ಅಭಿವೃದ್ಧಿಪಡಿಸಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಮೊದಲ ಹಂತದಲ್ಲಿ 12 ಉದ್ಯಾನಗಳ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ. 2ನೇ ಹಂತದಲ್ಲಿ 10 ಉದ್ಯಾನ ಹಾಗೂ ಎರಡು ಆಟದ ಮೈದಾನಗಳನ್ನು ಅಭಿವೃದ್ಧಿ ಮಾಡಲು ಕ್ರಮಕೈಗೊಳ್ಳಲಾಗಿದೆ. ಒಟ್ಟು 72 ಹಾಗೂ ಹಳೆಯ 12 ಪಾರ್ಕ್‌ಗಳ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದ್ದು, ಅದರಲ್ಲಿ ಶೇ.50 ರಷ್ಟು ಕೆಲಸ ಮುಗಿದಿದೆ. ನಗರದ ವಿವಿಧ ಉದ್ಯಾನಗಳಲ್ಲಿ 9 ಹಾಪ್‌ಕಾಮ್ಸ ಮಳಿಗೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಶುದ್ಧ ನೀರು ಪೂರೈಕೆ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಘಟಕದಲ್ಲಿ ಕೇವಲ ರೂ. 2ಕ್ಕೆ 20 ಲೀಟರ್ ಶುದ್ಧ ನೀರು ವಿತರಿಸಲಾಗುವುದು. ಜತೆಗೆ ನಗರದ ಸುತ್ತ ಸುಮಾರು ರೂ.75 ಕೋಟಿ ವೆಚ್ಚದಲ್ಲಿ 15 ಕಿ.ಮೀ. ಉದ್ದದ `ರಿಂಗ್ ರೋಡ್' ನಿರ್ಮಿಸುವ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ಯಾದವ್ ಮಾತನಾಡಿ, ಪಕ್ಷದ ಮೂರು ಹಿರಿಯ ಕಾರ್ಯಕರ್ತರಿಗೆ ಸೂಕ್ತ ಸ್ಥಾನ ಮಾನ ನೀಡುವ ಉದ್ದೇಶ ಹೊಂದಲಾಗಿತ್ತು. ಆದರೆ ಸಮಯದ ಅಭಾವದ ಕಾರಣ ಇಬ್ಬರಿಗೆ ಮಾತ್ರ ನೀಡಲಾಗಿದೆ. ಉಳಿದ ಒಬ್ಬರಿಗೆ ಅವಕಾಶವಾಗದಿರುವುದು ಬೇಸರ ತಂದಿದೆ. ಮುಂದಿನ ದಿನಗಳಲ್ಲಿ ಈ ಕೊರತೆ ನೀಗಿಸಲಾಗುವುದು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲೇ ಅತಿಹೆಚ್ಚು ನಾಮನಿರ್ದೇಶನಗಳನ್ನು ಜಿಲ್ಲೆಗೆ ನೀಡಿದೆ. ಸಾಕಷ್ಟು ಅನುದಾನ ನೀಡಿದ್ದು ಉತ್ತಮ ಕೆಲಸಗಳಾಗಿವೆ ಎಂದರು.ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಕೆ. ಶಿವಣ್ಣಾಚಾರ್, ಗೌರಣ್ಣ, ಮಂಜುಳಮ್ಮ, ವಕೀಲ ರಾಮಚಂದ್ರಪ್ಪ, ಆಯುಕ್ತ ಶಕೀಲ್ ಅಹಮದ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry