ಭಾನುವಾರ, ಏಪ್ರಿಲ್ 18, 2021
31 °C

ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ಗುರಿ ಸಾಧನೆ ಅಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): `ಮಂದಗತಿಯ ಆರ್ಥಿಕ ಪ್ರಗತಿಯಿಂದ 12ನೇ ಪಂಚವಾರ್ಷಿಕ ಯೋಜನೆ (2012-17) ಅವಧಿಯಲ್ಲಿ ಮೂಲಸೌಕರ್ಯ ವಲಯಕ್ಕೆ ನಿಗದಿಪಡಿಸಿರುವ ಒಂದು ಲಕ್ಷ ಕೋಟಿ ಡಾಲರ್ ಹೂಡಿಕೆ ಗುರಿ ತಲುಪುವುದು ಅಸಾಧ್ಯ~  ಎಂದು ಕೇಂದ್ರ ಯೋಜನಾ ಆಯೋಗ ಸ್ಪಷ್ಟವಾಗಿ ಹೇಳಿದೆ.

`ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇ 9ರ ಪ್ರಮಾಣಕ್ಕೆ ಏರಿದರೆ ಮೂಲಸೌಕರ್ಯ ವಲಯಕ್ಕೆ ಒಂದು ಲಕ್ಷ ಕೋಟಿ ಡಾಲರ್ ಹೂಡಿಕೆ ಅಂದಾಜಿಸಲಾಗಿತ್ತು. ಆದರೆ, ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಶೇ 9ರಷ್ಟು ಗುರಿ ತಲುಪುವುದು ಕಷ್ಟ. ಸಹಜವಾಗಿಯೇ ಮೂಲಸೌಕರ್ಯ ಹೂಡಿಕೆಯೂ ತಗ್ಗಲಿದೆ~ ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್  ಅಹ್ಲುವಾಲಿಯಾ ಸೋಮವಾರ ಇಲ್ಲಿ ಸುದ್ದಿಗಾರರಿಗೆ ಹೇಳಿದ್ದಾರೆ.

`ಆರ್ಥಿಕ ವೃದ್ಧಿ ದರ ಕುಸಿದಾಗ ಸಹಜವಾಗಿಯೇ ಮೂಲಸೌಕರ್ಯ ವಲಯದ ಹೂಡಿಕೆಯೂ ತಗ್ಗುತ್ತದೆ. ಅಷ್ಟಕ್ಕೂ ಒಂದು ಲಕ್ಷ ಕೋಟಿ ಡಾಲರ್ ಎನ್ನುವುದು ಪರಮ ಪವಿತ್ರ ಸಂಖ್ಯೆಯೇನೂ ಅಲ್ಲ. ಈ ಗುರಿ ಸಾಧಿಸಲೇಬೇಕು ಎಂದು ಕಲ್ಲಿನ ಮೇಲೆ ಕೆತ್ತಿಟ್ಟಿಲ್ಲ~ ಎಂದು ಅವರು ವರದಿಗಾರರ ಪ್ರಶ್ನೆಗೆ ತುಸು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಈ ಗುರಿ ನಿಗದಿಪಡಿಸಿದ್ದು ಎರಡು ವರ್ಷಗಳ ಹಿಂದೆ. ಆಗ ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ್ಙ44ರಷ್ಟಿತ್ತು. ಈಗ ್ಙ55ಕ್ಕೆ ಏರಿದೆ. ಜತೆಗೆ, ಸದ್ಯದ ಜಾಗತಿಕ ಆರ್ಥಿಕ ಪರಿಸ್ಥಿತಿಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಿದೆ~ ಎಂದು ಹೇಳಿದ್ದಾರೆ.

ಒಂದು ಲಕ್ಷ ಕೋಟಿ ಡಾಲರ್ ಮೂಲಸೌಕರ್ಯ ಹೂಡಿಕೆಯಲ್ಲಿ ಅರ್ಧದಷ್ಟು ಮೊತ್ತವನ್ನು ಆಯೋಗ `ಕಾಮಗಾರಿ~ ಯೋಜನೆಗಳಿಗೆ ಮೀಸಲಿರಿಸಿದೆ. ರಾಷ್ಟ್ರೀಯ ಅಭಿವೃದ್ಧಿ ಮಂಡಳಿ (ಎನ್‌ಡಿಸಿ) ಕಳೆದ ವರ್ಷವೇ ಇದಕ್ಕೆ ಅನುಮೋದನೆ ನೀಡಿದೆ ಎಂದು ಸ್ಪಷ್ಟಪಡಿಸಿದರು.

`ಭಾರತ-ಚೀನಾ ವ್ಯಾಪಾರ ವೃದ್ಧಿಗೆ ಕ್ರಮ~

ನವದೆಹಲಿ(ಪಿಟಿಐ): ಉಭಯ ದೇಶಗಳ ನಡುವಿನ ವ್ಯಾಪಾರ ಕೊರತೆ ತಗ್ಗಿಸಲು ಮತ್ತು ದ್ವಿಪಕ್ಷೀಯ ವಹಿವಾಟು ಉತ್ತೇಜಿಸಲು ಇನ್ನಷ್ಟು ಮಾರುಕಟ್ಟೆ ಅವಕಾಶ ನೀಡುವಂತೆ ಚೀನಾವನ್ನು ಭಾರತ ಕೋರಿದೆ.

`ದೇಶದ ಸರಕು ಮತ್ತು ಸೇವೆಗಳಿಗೆ ವಿಶೇಷವಾಗಿ ತಯಾರಿಕಾ ಉತ್ಪನ್ನಗಳಿಗೆ ಚೀನಾದಲ್ಲಿ ವಿಪುಲ ಮಾರುಕಟ್ಟೆ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಚೀನಾ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ~ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಆನಂದ ಶರ್ಮಾ ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಭಾರತ-ಚೀನಾ ನಡುವಿನ ದ್ವಿಪಕ್ಷೀಯ ವ್ಯಾಪಾರ ವಹಿವಾಟು 2011ರಲ್ಲಿ 7550 ಕೋಟಿ ಡಾಲರ್ ತಲುಪಿದೆ. ಇದರಲ್ಲಿ ಭಾರತದಿಂದ ಚೀನಾಕ್ಕೆ 1790 ಕೋಟಿ ಡಾಲರ್ ಮೌಲ್ಯದ ಸರಕು ರಫ್ತಾಗಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.