ಬುಧವಾರ, ಏಪ್ರಿಲ್ 14, 2021
23 °C

ಮೂಲಸೌಕರ್ಯ-ಮಾಹಿತಿ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) 1995ರ ನಂತರದಲ್ಲಿ ಅಭಿವೃದ್ಧಿಪಡಿಸಿರುವ ಬಡಾವಣೆಗಳ ವಿವರ ಹಾಗೂ ಅವುಗಳಿಗೆ ನೀಡಿರುವ ಮೂಲ ಸೌಕರ್ಯಗಳ ಬಗ್ಗೆ ಲಿಖಿತ ಮಾಹಿತಿ ನೀಡುವಂತೆ ಬಿಡಿಎಗೆ ಹೈಕೋರ್ಟ್ ಸೋಮವಾರ ನಿರ್ದೇಶಿಸಿದೆ.ಬಡಾವಣೆ ನಿರ್ಮಾಣಕ್ಕೆಂದು ಸ್ವಾಧೀನಪಡಿಸಿಕೊಂಡ ಜಮೀನುಗಳ ಪೈಕಿ ಪ್ರಾಥಮಿಕ ಅಧಿಸೂಚನೆ ಮತ್ತು ಅಂತಿಮ ಅಧಿಸೂಚನೆಗಳನ್ನು ಹೊರಡಿಸಿದ ನಂತರ ಕೈಬಿಟ್ಟಿರುವ ಜಮೀನಿನ ಮಾಹಿತಿ ನೀಡುವಂತೆಯೂ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಆದೇಶಿಸಿದ್ದಾರೆ.ಈ ಮಾಹಿತಿಯನ್ನು ಇದೇ 13ರ ಒಳಗೆ ಪ್ರಮಾಣ ಪತ್ರದ ಮೂಲಕ ನೀಡುವಂತೆ ಅವರು ಬಿಡಿಎ ಪರ ವಕೀಲರಿಗೆ ತಿಳಿಸಿದ್ದಾರೆ.ಕೆಂಗೇರಿ ಹಾಗೂ ಯಶವಂತಪುರ ಹೋಬಳಿಯ ವಿವಿಧ ಗ್ರಾಮಗಳಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳಲಾದ ಜಮೀನಿನ ಪೈಕಿ ಸ್ವಾಧೀನ ಪ್ರಕ್ರಿಯೆಯಿಂದ ಕೆಲವು ಜಮೀನುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಭೂಮಾಲೀಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ. ವಿಚಾರಣೆಯನ್ನು ಮುಂದೂಡಲಾಗಿದೆ.ಸಂಭಾವನೆ ಹೆಚ್ಚಳ: ಕೋರ್ಟ್‌ಗೆ ಮಾಹಿತಿ


ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರಿಗೆ ತೀರಾ ಕಡಿಮೆ ಸಂಭಾವನೆ ನೀಡಿ ಹೈಕೋರ್ಟ್‌ನ ಅಸಮಾಧಾನಕ್ಕೆ ಗುರಿಯಾಗಿದ್ದ ಸರ್ಕಾರ, ಕೊನೆಗೂ ಸಂಭಾವನೆಯನ್ನು 22 ಪಟ್ಟು ಹೆಚ್ಚಿಸಿ ಆದೇಶಿಸಿದೆ.

ಹಾಲಿ ತಿಂಗಳಿಗೆ ನೀಡುತ್ತಿರುವ 3,500 ರೂಪಾಯಿಗಳನ್ನು 75 ಸಾವಿರ ರೂಪಾಯಿಗಳಿಗೆ ಏರಿಸಿದ್ದು, ಈ ಬಗ್ಗೆ ಸರ್ಕಾರದ ಪರ ವಕೀಲರು ಹೈಕೋರ್ಟ್‌ಗೆ ಸೋಮವಾರ ತಿಳಿಸಿದರು.ಮಕ್ಕಳ ಹಕ್ಕುಗಳ ಕಾಯ್ದೆ-2005ರ 36ನೇ ಕಲಮಿಗೆ ತಿದ್ದುಪಡಿ ಮಾಡಲಾಗಿದ್ದು, ಸಂಭಾವನೆ ಮೊತ್ತವನ್ನು ಹೆಚ್ಚು ಮಾಡಲಾಗಿದೆ ಎಂದು ಸರ್ಕಾರದ ಪರ ವಕೀಲ ರವೀಂದ್ರ ಕೊಲ್ಲೆ ಪ್ರಮಾಣ ಪತ್ರದ ಮೂಲಕ ತಿಳಿಸಿದ್ದಾರೆ.`ಬಾಲಕಾರ್ಮಿಕರ ವಿರುದ್ಧದ ಆಂದೋಲನ~ ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಈ ಪ್ರಮಾಣ ಪತ್ರ ಸಲ್ಲಿಸಲಾಗಿದೆ. ಅಧ್ಯಕ್ಷರಿಗೆ ಕಡಿಮೆ ಸಂಭಾವನೆ ಹಾಗೂ ಆಯೋಗಕ್ಕೆ ಸೌಲಭ್ಯಗಳ ಕೊರತೆ ಇರುವ ಬಗ್ಗೆ ಅರ್ಜಿಯಲ್ಲಿ ದೂರಲಾಗಿದೆ.ಇದರ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸುತ್ತಿದೆ.ಎಚ್1ಎನ್1: ಪಿಐಎಲ್ ವಜಾ

ರಾಜ್ಯದಲ್ಲಿ ಎಚ್1ಎನ್1 ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಈಚಿನ ವರ್ಷಗಳಲ್ಲಿ ಹೆಚ್ಚಾಗಿದ್ದು, ಇದನ್ನು ತಡೆಗಟ್ಟಲು ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿ ಹೈಕೋರ್ಟ್‌ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ವಜಾ ಮಾಡಿದೆ.ವೆಂಕಟಸುಬ್ಬಯ್ಯ ಎನ್ನುವವರು ಈ ಅರ್ಜಿ ಸಲ್ಲಿಸಿದ್ದರು. ಮೃತಪಟ್ಟವರಿಗೆ ಸರ್ಕಾರ ಪರಿಹಾರ ನೀಡಬೇಕು ಎನ್ನುವುದು ಅವರ ಮನವಿಯಾಗಿತ್ತು. ಅದರೆ ಅರ್ಜಿದಾರರ ಮನವಿಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳು ಇಲ್ಲದ ಕಾರಣ, ಅರ್ಜಿಯನ್ನು ಪೀಠ ವಜಾ ಮಾಡಿತು.ಪ್ಲಾಸ್ಟಿಕ್ ಶೇಖರಣೆ: ಮಾನ್ಯವಾಗದ ವಾದ

ನಗರದ ಜನರು ಬಳಕೆ ಮಾಡುತ್ತಿರುವ ಪ್ಲಾಸ್ಟಿಕ್ ಚೀಲಗಳನ್ನು ಪ್ರತ್ಯೇಕವಾಗಿ ಶೇಖರಣೆ ಮಾಡಲು ಬಿಬಿಎಂಪಿಗೆ ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಜಾ ಮಾಡಿದೆ.ದಿನನಿತ್ಯ ತ್ಯಾಜ್ಯಗಳನ್ನು ಶೇಖರಣೆ ಮಾಡುವಂತೆ ವಾರದಲ್ಲಿ ಒಂದು ದಿನ ಪ್ಲಾಸ್ಟಿಕ್ ಶೇಖರಣೆ ಮಾಡಲು ಆದೇಶಿಸಬೇಕು ಎನ್ನುವುದು ಎನ್.ಪರಮೇಶ್ವರ ಎನ್ನುವವರ ಮನವಿಯಾಗಿತ್ತು.ಅವರ ಈ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ತಿರಸ್ಕರಿಸಿದೆ. `ಇಡೀ ಜಗತ್ತು ಪ್ಲಾಸ್ಟಿಕ್ ವಿರೋಧಿಯಾಗಿದೆ. ನಿಮ್ಮ ಮನವಿ ಅದಕ್ಕೆ ಉತ್ತೇಜನ ನೀಡುವಂತೆ ಕಾಣುತ್ತಿದೆ. ಇಂತಹ ಮನವಿಗಳನ್ನು ಪಿಐಎಲ್‌ನಲ್ಲಿ ಕೇಳುವುದು ಸರಿಯಲ್ಲ~ ಎಂದು ನ್ಯಾಯಮೂರ್ತಿ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.