ಮಂಗಳವಾರ, ಜನವರಿ 28, 2020
17 °C

ಮೂಲಸೌಕರ್ಯ ವಂಚಿತ ಕಾಲೊನಿ

ಪ್ರಜಾವಾಣಿ ವಾರ್ತೆ/ಪಿ.ಕೆ. ರವಿಕುಮಾರ್‌ Updated:

ಅಕ್ಷರ ಗಾತ್ರ : | |

ಕಾರವಾರ: ಸಮರ್ಪಕವಾಗಿಲ್ಲದ ಯುಜಿಡಿ ಸೌಲಭ್ಯ, ಡಾಂಬರ್‌ ಕಾಣದ ಹಾಗೂ ಹೊಂಡ ಬಿದ್ದ ರಸ್ತೆಗಳು, ಖಾಲಿ ನಿವೇಶನದಲ್ಲಿ ಆಳೆತ್ತರಕ್ಕೆ ಬೆಳೆದ ಗಿಡಗಂಟಿಗಳು, ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿಗಳು, ಮರೀಚಿಕೆಯಾದ ಸ್ವಚ್ಛತೆ.. ಇವು ನಗರದ ಪ್ರತಿಷ್ಠಿತ ಬಡಾವಣೆಯಾದ ಕೆಎಚ್‌ಬಿ ಕಾಲೊನಿಯ ದುಃಸ್ಥಿತಿ.ನಗರದಿಂದ ಒಂದು ಕಿ.ಮೀ ದೂರವಿರುವ ಈ ಕಾಲೊನಿಯಲ್ಲಿ 800ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಆದರೆ, ಈ ಕುಟುಂಬಗಳಿಗೆ ಸರಿಯಾದ ಮೂಲಸೌಕರ್ಯ ಒದಗಿಸುವಲ್ಲಿ ಕರ್ನಾಟಕ ಗೃಹಮಂಡಳಿ ಹಾಗೂ ನಗರಸಭೆ ಹಿಂದೆ ಬಿದ್ದಿದೆ. ಆದರೆ, ಇಲ್ಲಿನ ನಿವಾಸಿಗಳು ಮಾತ್ರ ಮೂಲಸೌಕರ್ಯದಿಂದ ವಂಚಿತರಾಗಿದ್ದು, ಬಡಾವಣೆಗೆ ಯಾವಾಗ ಅಭಿವೃದ್ಧಿಯ ಕಾಯಕಲ್ಪ ಸಿಗುವುದೋ ಎಂದು ಎದುರು ನೋಡುತ್ತಿದ್ದಾರೆ.1987ರಲ್ಲಿ ಹಬ್ಬುವಾಡದಲ್ಲಿ ಕರ್ನಾಟಕ ಗೃಹಮಂಡಳಿಯು ಸುಮಾರು 74 ಎಕರೆ ಕೃಷಿ ಭೂಮಿಯನ್ನು ರೈತರ ಕಡೆಯಿಂದ ಸ್ವಾಧೀನ ಮಾಡಿಕೊಂಡು ಬಡಾವಣೆಯೊಂದನ್ನು ನಿರ್ಮಾಣ ಮಾಡಲಾಯಿತು. ಅದಕ್ಕೆ ಕೆಎಚ್‌ಬಿ ಕಾಲೊನಿ ಎಂದು ನಾಮಕರಣ ಮಾಡಿ ಸಾರ್ವಜನಿಕರಿಗೆ ನಿಗದಿತ ದರದಲ್ಲಿ ಮಾರಾಟ ಮಾಡಲಾಯಿತು. ಬಳಿಕ 2008ರಲ್ಲಿ ಗೃಹಮಂಡಳಿಯವರು ಕಾರವಾರ ನಗರಸಭೆಗೆ ₨ 90 ಲಕ್ಷ  ಕೊಟ್ಟು ಈ ಜಾಗವನ್ನು ಹಸ್ತಾಂತರಿಸಿದರು. ಆದರೆ, ಆ ಸಂದರ್ಭದಲ್ಲಿ ಗೃಹಮಂಡಳಿಯವರು ಕಾಲೊನಿಗೆ ಸಮರ್ಪಕ ಸೌಲಭ್ಯಗಳನ್ನು ಒದಗಿಸಿರಲಿಲ್ಲ. ಬಳಿಕ ನಗರಸಭೆ ಈ ಕಾಲೊನಿಯಲ್ಲಿ ಸ್ವಲ್ಪ ಸ್ವಚ್ಛತೆ, ರಸ್ತೆ, ವಿದ್ಯುತ್‌ ದೀಪ ದುರಸ್ತಿ ಮಾಡಿದ್ದು ಬಿಟ್ಟರೆ ಹೆಚ್ಚಿನ ಸೌಲಭ್ಯವನ್ನು ಒದಗಿಸಲು ಸಾಧ್ಯವಾಗಿಲ್ಲ.ಖಾಲಿ ಬಿದ್ದ ನಿವೇಶನ: ಕಾಲೊನಿಯಲ್ಲಿರುವ ಅನೇಕ ನಿವೇಶನಗಳನ್ನು ಕೆಲವರು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಾರೆ. ನಿವೇಶನ ತೆಗೆದುಕೊಂಡವರು ಆ ಜಾಗದಲ್ಲಿ ಮನೆ ಕಟ್ಟದೇ ಇರುವುದರಿಂದ ಖಾಲಿ ಬಿದ್ದಿದೆ.‘ಈ ಕಾಲೊನಿಯಲ್ಲಿ ಇಲ್ಲಿವರೆಗೆ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಇಲ್ಲಿನ ಡಾಂಬರ್‌ ಕಾಣದ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಅಲ್ಲಲ್ಲಿ ಕಸದ ತೊಟ್ಟಿಗಳನ್ನು ಇಟ್ಟಿದ್ದರೂ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿಲ್ಲ ಮಾಡುತ್ತಿಲ್ಲದ ಕಾರಣ ಕಸದ ರಾಶಿ ರಸ್ತೆ ಮೇಲೆಯೇ ಹರಡಿಕೊಂಡಿವೆ. ತೆರೆದ ಚರಂಡಿಗಳು ಹೂಳು ತುಂಬಿಕೊಂಡು ಗಬ್ಬುನಾರುತ್ತಿವೆ. ಮಳೆಗಾಲದಲ್ಲಿ ಮನೆಗಳ ಅಕ್ಕಪಕ್ಕದ ಖಾಲಿ ಜಾಗದಲ್ಲಿ ಮಂಡಿಯುದ್ದ ನೀರು ನಿಲ್ಲುತ್ತದೆ. ಇದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿರುತ್ತದೆ’ ಎನ್ನುತ್ತಾರೆ ಇಲ್ಲಿನ ನಿವಾಸಿ ಬಸವರಾಜು.ಸೌಕರ್ಯಕ್ಕಾಗಿ ಸಂಘ ರಚನೆ: ಸಾರ್ವಜನಿಕರು ಇಲ್ಲಿ ನಿವೇಶನ ಖರೀದಿ ಮಾಡಿದಾಗ ₨ 30 ಸಾವಿರವನ್ನು ಪ್ರತ್ಯೇಕ ಅಭಿವೃದ್ಧಿ ಸಲುವಾಗಿ ಸರ್ಕಾರಕ್ಕೆ ಹಣ ಕಟ್ಟಿದ್ದಾರೆ. ಆದರೆ, ಗೃಹ ಮಂಡಳಿಯು ಸಂಪೂರ್ಣ ಅಭಿವೃದ್ಧಿಯನ್ನು ಮಾಡಿಲ್ಲ. ಕಾಲೊನಿಯಲ್ಲಿ ಮೂಲಸೌಕರ್ಯ ವನ್ನು ಸರ್ಕಾರ ಕಲ್ಪಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕಾಲೊನಿಯ ಸಮಾನಮನಸ್ಕರು 2009ರಲ್ಲಿ ‘ಕರ್ನಾಟಕ ಗೃಹಮಂಡಳಿ ಹೊಸ ಬಡಾವಣೆ ಸಂಘ’ವನ್ನು ಮಾಡಿಕೊಂಡು ಸರ್ಕಾರದಿಂದ ಮೂಲಸೌಕರ್ಯ ಪಡೆಯಲು ಶ್ರಮಿಸುತ್ತಿದ್ದಾರೆ. ಬಿ.ಎನ್‌. ಬಾನಾವಳಕಿರ ಸಂಘದ ಅಧ್ಯಕ್ಷರಾಗಿದ್ದಾರೆ.‘ಕಾಲೊನಿಯ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಸಲುವಾಗಿ 6 ಕೋಟಿ ರೂಪಾಯಿಯನ್ನು ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮಂಜೂರಿ ಸಲುವಾಗಿ ವರದಿಯನ್ನು ಕಳುಹಿಸಿದೆ. ಈ ಅನುದಾನ ಶೀಘ್ರ ಬಿಡುಗಡೆಯಾಗಿ ಮೂಲಸೌಕರ್ಯ ಸಿಗುವಂತಾಗಬೇಕು’ ಎನ್ನತ್ತಾರೆ ಸಂಘದ ಗೌರವಾಧ್ಯಕ್ಷ ಎಂ.ಎಸ್‌. ಪವಾರ್‌.

ಪ್ರತಿಕ್ರಿಯಿಸಿ (+)