ಭಾನುವಾರ, ಜನವರಿ 26, 2020
23 °C

ಮೂಲಸೌಕರ್ಯ ವಂಚಿತ ಪೋತಲಕಟ್ಟೆ

ಪ್ರಜಾವಾಣಿ ವಾರ್ತೆ /ಎಚ್‌.ಎಸ್‌. ಶ್ರೀಹರಪ್ರಸಾದ್‌. Updated:

ಅಕ್ಷರ ಗಾತ್ರ : | |

ಮೂಲಸೌಕರ್ಯ ವಂಚಿತ ಪೋತಲಕಟ್ಟೆ

ಮರಿಯಮ್ಮನಹಳ್ಳಿ: ಹೊಸಪೇಟೆ ತಾಲ್ಲೂಕಿನ ಪಟ್ಟಣ ಹೋಬಳಿ ವ್ಯಾಪ್ತಿಯ ಕೊನೆಯ ಗ್ರಾಮ ಎಂಬ ಹಣೆಪಟ್ಟಿ ಹೊಂದಿದ ಕುಗ್ರಾಮ ಪೋತಲಕಟ್ಟೆ ಸೌಕರ್ಯದಿಂದ ವಂಚಿತವಾಗಿದ್ದು, ಮೂಲ ಸಮಸ್ಯೆಗಳಿಗೆ ಕೊನೆಯಿಲ್ಲದಂತಾಗಿದೆ.ತಾಲ್ಲೂಕು ಕೇಂದ್ರದಿಂದ 32 ಕಿ.ಮೀ., ಪಟ್ಟಣದಿಂದ 16ಕಿ.ಮೀ ದೂರದಲ್ಲಿನ ಪೋತಲಕಟ್ಟೆ ಗ್ರಾಮ ಸಮಸ್ಯೆಗಳಿಂದ ಬಳಲುತ್ತಿದೆ. ಗ್ರಾಮದಿಂದ ಹೆಜ್ಜೆ ಹೊರ ಇಟ್ಟರೆ ಅತ್ತ ಸಂಡೂರು, ಇತ್ತ ಕೂಡ್ಲಿಗಿ ತಾಲ್ಲೂಕು ಆರಂಭವಾಗುತ್ತದೆ. ತಾಲ್ಲೂಕಿನ ಕೊನೆಯ ಗ್ರಾಮವಾದ್ದರಿಂದ ಅಧಿಕಾರಿಗಳು ಯಾರು ಸುಳಿಯದೆ ನಿರ್ಲಕ್ಷ್ಯಕ್ಕೀಡಾಗಿದ್ದು, ಸೌಲಭ್ಯಗಳಿಂದ ದೂರಾಗಿ ಹಿಂದುಳಿಯಲು ಕಾರಣ ಎನ್ನುವದು ಗ್ರಾಮಸ್ಥರ ದೂರು.ಮುಖ್ಯವಾಗಿ ಕುಡಿಯುವ ನೀರು ಪ್ಲೋರೈಡ್‌ಯುಕ್ತ­ವಾಗಿದ್ದು, ಬಹುತೇಕರು ಕೀಲು ನೋವಿನಿಂದ ಬಳಲುತ್ತಿದ್ದಾರೆ. ವಯೋವೃದ್ಧರಿಂದ ಹಿಡಿದು ಯುವಕರ ಸಹ ಕೀಲುನೋವಿನ ಬಾಧೆ ಅನುಭವಿಸುತ್ತಿದ್ದಾರೆ. ಮಕ್ಕಳ ಮೇಲು ಪರಿಣಾಮ ಬೀರಿದ್ದು, ಮಕ್ಕಳ ಹಲ್ಲುಗಳು ಹಳದಿಗಟ್ಟಿವೆ. ಇನ್ನು ಸಮಸ್ಯೆಗಳ ಹೊದಿಕೆಯನ್ನೇ ಹೊತ್ತಿರುವ ಗ್ರಾಮ 1500ಜನಸಂಖ್ಯೆ ಹಾಗೂ 400ಮನೆಗಳನ್ನು ಹೊಂದಿದೆ. ಚಿಲಕನಹಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಟ್ಟಿದ್ದು, ನಾಲ್ಕು ಸದಸ್ಯರನ್ನು ಹೊಂದಿದೆ. ಹಿಂದುಳಿದ ಕೃಷಿಕೂಲಿ ಕಾರ್ಮಿಕರೇ ವಾಸಮಾಡುವ ಈ ಗ್ರಾಮದಲ್ಲಿ ಇರುವದಕ್ಕಿಂತ ಇಲ್ಲಗಳ ಆಗರವೇ ಹೆಚ್ಚಾಗಿದೆ.ವಿಶೇಷವೆಂದರೆ ಇಲ್ಲಿ ಜನಸಂಖ್ಯೆಗಿಂತ ಜಾನುವಾರುಗಳ ಸಂಖ್ಯೆಯೇ ಅಧಿಕವಾಗಿದೆ. ಹಾಲುಮತಸ್ಥರೇ ಹೆಚ್ಚಾಗಿರುವ ಗ್ರಾಮದಲ್ಲಿ ಸುಮಾರು 1000 ದನಗಳು ಹಾಗೂ ಎಮ್ಮೆಗಳು, 2000 ಕುರಿಗಳು ಹಾಗೂ 1000 ಮೇಕೆಗಳಿವೆ. ಮತ್ತೊಂದು ವಿಶೇಷವೆಂದರೆ ಹಿಂದೆ  ಶಾಸಕರಾಗಿದ್ದ ಅನಿಲ್‌ಲಾಡ್‌ ಅವರ ಅವಧಿಯಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರು ಇದೇ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದರಿಂದ ಹೆಸರು ಮಾಡಿತ್ತು. ಅಲ್ಲದೆ  ಸಿದ್ದರಾಮಯ್ಯ ಅವರು ಸಹ ಆವಾಗ ಭೇಟಿ ನೀಡಿದ್ದರು.ಆಗ 1 ಕೋಟಿ ವೆಚ್ಚದಲ್ಲಿ ಪೋತಲಕಟ್ಟೆ ಹಾಗೂ ತಿಮ್ಮಲಾಪುರ ಗ್ರಾಮಗಳನ್ನು ಜಂಟಿಯಾಗಿ ಸುವರ್ಣ ಗ್ರಾಮಕ್ಕೆ ಆಯ್ಕೆಮಾಡಲಾಗಿತ್ತು. ಜಾನುವಾರುಗಳ ಸಂಖ್ಯೆ ಹೆಚ್ಚಿರುವದರಿಂದ ಗ್ರಾಮಸ್ಥರ ಮನವಿಗೆ  ಪಶು ಆಸ್ಪತ್ರೆಯನ್ನು ಮಂಜೂರು ಮಾಡಲಾಗಿತ್ತು.ಕಾರಣಾಂತರದಿಂದ ಅದು ಡಣಾಯಕನಕೆರೆ ಗ್ರಾಮಕ್ಕೆ ಹೋಯಿತೆಂದು ದೂರುತ್ತಾರೆ. ಇನ್ನು ಈ ಯೋಜನೆಯಲ್ಲಿ ಸಮುದಾಯಭವನ, ಮೂರು ಸಿ.ಸಿ ರಸ್ತೆ ಬಿಟ್ಟರೆ ಅಭಿವೃದ್ಧಿ ಕಾಣದಂತಾಗಿದೆ. ರಸ್ತೆಯ ಮೇಲೆ ಚರಂಡಿಯ ನೀರು ಹರಿಯುತ್ತಿದ್ದು, ಎಲ್ಲೆಂದರಲ್ಲಿ ಚರಂಡಿಗಳು ನಿರ್ಮಾಣವಾಗಿ ದುರ್ನಾತ ಬೀರುತ್ತಿದ್ದು, ಸೊಳ್ಳೆಗಳ ಕಾಟದಿಂದ ತತ್ತರಿಸುವಂತಾಗಿದೆ. ಗ್ರಾಮದಲ್ಲಿ ಡೆಂಗೆ, ಟೈಫಾಯಿಡ್‌, ಮಲೇರಿಯಾ ಜ್ವರದ ಭೀತಿಯುಂಟಾಗಿದೆ. ಹಲವು ಜನರು ಜ್ವರದಿಂದ ಬಳಲುತ್ತಿದ್ದು, ಪಟ್ಟಣ ಸೇರಿದಂತೆ  ಹೊಸಪೇಟೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಯಾರು ಈ ಕಡೆ ಮುಖ ಮಾಡಿಲ್ಲ, ಸ್ವಚ್ಛತೆಗೆ ಮುಂದಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.ಇನ್ನು 8ನೇ ತರಗತಿವರೆಗೆ ಇರುವ ಶಾಲೆಯಲ್ಲಿ ಸುಮಾರು 300ಮಕ್ಕಳು ವ್ಯಾಸಾಂಗ ಮಾಡುತ್ತಿದ್ದು, ಪ್ರೌಢಶಾಲೆಗೆ 7 ಕಿ.ಮೀ ದೂರದ ತೆಲಗುಬಾಳು ಶಾಲೆಗೆ ತೆರಳಬೇಕಾಗಿದೆ. ಪ್ರೌಢಶಾಲೆ ಮಂಜೂರಾತಿಗೆ ಸ್ಥಳದ ಕೊರತೆಯುಂಟಾಗಿದ್ದರಿಂದ ನಾಲ್ಕು ವರ್ಷಗಳ ಕೆಳಗೆ ₨ 1.50ಲಕ್ಷ  ವೆಚ್ಚದಲ್ಲಿ ಭೂಮಿಯನ್ನು ಖರೀದಿಸಿದ್ದರು ಇನ್ನು ಮಂಜೂರಾಗಿಲ್ಲ ಎಂದು ಗ್ರಾಮದ ಜಂಬಣ್ಣ ದೂರುತ್ತಾರೆ.’ನೋಡಿ ತಾಲ್ಲೂಕಿನ ಕೊನೆಯ ಗ್ರಾಮವಾದ್ದರಿಂದ ಪಂಚಾಯ್ತಿಯೊರಿಗೆ ಹಾಗೂ ಅಧಿಕಾರಿಗಳಿಗೆ ನಿರ್ಲಕ್ಷ್ಯ. ಅಲ್ದ ಇತ್ತ ಯಾರು ಬರೊಲ್ಲ ನಮ್‌ಸಮಸ್ಯೆ ಕೇಳಂಗಿಲ್ಲ. ರಸ್ತೆ ಇಲ್ಲ, ಚರಂಡಿಗಳಿಲ್ಲ, ಅಲ್ದ ಕುಡಿಯಾಕ ಶುದ್ಧ ನೀರಿಲ್ಲ. ಅದು ಪ್ಲೊರೈಡ್ನೀರು. ಇನ್ನು ಆ ಕಡೆ ಗೆದ್ದು ಹೋದ ಶಾಸಕರು ಇನ್ನು ಈಕಡೆ ಮುಖ ಮಾಡಿಲ್ಲ ನಮ್‌ ಸಮಸ್ಯೆ ಕೇಳಿಲ್ಲ ಎಂದು ದೂರುತ್ತಾರೆ ಗ್ರಾಮಸ್ಥರು.

 

ಪ್ರತಿಕ್ರಿಯಿಸಿ (+)