ಮೂಲಸೌಲಭ್ಯಕ್ಕಾಗಿ ಆಗ್ರಹಿಸಿ ಪುರಸಭೆಗೆ ಮುತ್ತಿಗೆ

7

ಮೂಲಸೌಲಭ್ಯಕ್ಕಾಗಿ ಆಗ್ರಹಿಸಿ ಪುರಸಭೆಗೆ ಮುತ್ತಿಗೆ

Published:
Updated:

ಸಿಂದಗಿ: ರಸ್ತೆ, ಚರಂಡಿ, ವಿದ್ಯುತ್ ಪೂರೈಕೆ ಹಾಗೂ ಆಟದ ಮೈದಾನ ದಂಥ ಮೂಲ ಸೌಲಭ್ಯ ದೊರಕಿಸಿ ಕೊಡಬೇಕು ಎಂದು ಆಗ್ರಹಿಸಿ ಪಟ್ಟಣದ 17ನೇ ವಾರ್ಡಿನ (ಕೋರ್ಟ್ ಹಿಂದುಗಡೆ) ನಿವಾಸಿಗಳು ಮುಸ್ಲಿಂ ಮುತ್ತಹೀದಾ ಕೌನ್ಸಿಲ್ ಸಂಘಟನೆ ನೇತೃತ್ವದಲ್ಲಿ ಸೋಮವಾರ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ವಾರ್ಡಿನಿಂದ ಹಲಿಗೆ ಬಾರಿಸುತ್ತ ಮೆರವಣಿಗೆ ಮೂಲಕ ಪುರಸಭೆ ಕಾರ್ಯಾಲಯಕ್ಕೆ ಬಂದ ಪ್ರತಿಭಟನಾಕಾರರು ಕಾರ್ಯಾಲಯದ ಮುಖ್ಯ ದ್ವಾರ ಬಂದ್ ಮಾಡಿ ಕೆಲ ಕಾಲ ಧರಣಿ ನಡೆಸಿದರು. ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಬೇಡಿಕೆಗಳ ಘೋಷಣೆ ಕೂಗಿದರು.ಸಂಘಟನೆ ಅಧ್ಯಕ್ಷ ಅಬ್ದುಲ್ ರಜಾಕ ನಾಟೀಕಾರ, ಎಂ.ಡಿ.ಮೋಕಾಶಿ, ಮೈಬೂಬ ಆಳಂದ, ಹಮೀದ ಅವಟಿ ಅವರು ಮಾತನಾಡಿ, 17ನೇ ವಾರ್ಡಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದರಿಂದ ಜನ ಸಂಚಾರಕ್ಕೆ ತೀವ್ರ ತೊಂದರೆ ಯಾಗಿದೆ. ಅಲ್ಲದೇ ಚರಂಡಿ ಅವ್ಯವಸ್ಥೆ ತುಂಬಾ ಇದೆ. ವಿದ್ಯುತ್ ಕಂಬಗಳನ್ನು ನಿಲ್ಲಿಸಿಲ್ಲ.ಇದೇ ವಾರ್ಡಿನ ಅಥಣಿ ಲೇಔಟ್‌ನಲ್ಲಿ ನಿರ್ಮಾಣಗೊಳ್ಳಬೇಕಿದ್ದ ಆಟದ ಮೈದಾನವಿನ್ನೂ ಪೂರ್ಣ ಗೊಂಡಿಲ್ಲ. ಹೀಗೆ ಇಲ್ಲಗಳ ಆಗರವಾಗಿರುವ ಈ ವಾರ್ಡಿನಲ್ಲಿ ಶೀಘ್ರದಲ್ಲಿಯೇ ಮೂಲ ಸೌಲಭ್ಯಗಳ ಕಾಮಗಾರಿ ಶುರು ಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಶಫೀಕ್ ಅಸ್ಕಿ, ರಜಾಕ್ ಇಂಗಳಗಿ, ಸದ್ದಾಮ ಹುಂಡೇಕಾರ, ಶಮೀರ ಶೇಖ, ಖಾಜಾ ಸಾಬ್ ಯರಗಲ್, ನೀಲಪ್ಪ ಮಣೂರ ಪ್ರತಿಭಟನೆ ನೇತೃತ್ವ ವಹಿಸಿದ್ದರು.ನಂತರ ಸ್ಥಳಕ್ಕೆ ಧಾವಿಸಿದ ಪುರಸಭೆ ಮುಖ್ಯಾಧಿಕಾರಿ ಎನ್.ಆರ್.ಮಠ 17ನೇ ವಾರ್ಡಿನ ಅಗತ್ಯ ಕಾಮಗಾರಿ ಗಳನ್ನು ಇಂದೇ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದಾಕ್ಷಣ ಪ್ರತಿಭಟನಕಾರರು ಧರಣಿ ಸತ್ಯಾಗ್ರಹ ಸ್ಥಗಿತಗೊಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry