ಭಾನುವಾರ, ಏಪ್ರಿಲ್ 11, 2021
25 °C

ಮೂಲಸೌಲಭ್ಯ ಕೊರತೆಯೇ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭದ್ರಾವತಿ: ‘ಶೌಚಾಲಯವಿದ್ದರೂ ಬಾಗಿಲು ಮುಚ್ಚಿದೆ, ನದಿ ತಟದಲ್ಲಿದ್ದರೂ ಕುಡಿಯಲು ನೀರು ಮಾತ್ರ ಇಲ್ಲ, ಮುಖ್ಯ ರಸ್ತೆ ಹೊರತುಪಡಿಸಿ ಉಳಿದೆಲ್ಲಾ ರಸ್ತೆಗಳು ಅಯೋಮಯ...’ ಹೀಗೆ ಹತ್ತು ಹಲವು ಸೌಲಭ್ಯಗಳ ಕೊರತೆಯನ್ನು ಎಪಿಎಂಸಿ ಎದುರಿಸುತ್ತಿದೆ.ಹಲವು ದಶಕಗಳ ಇತಿಹಾಸ ಕಂಡಿರುವ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸುಮಾರು ಐದಾರು ಎಕರೆ ವಿಸ್ತಾರ ಪ್ರದೇಶದಲ್ಲಿ ತನ್ನ ಗೋದಾಮು, ಕಚೇರಿ ಹಾಗೂ ಇನ್ನಿತರ ಕೇಂದ್ರವನ್ನು ಹೊಂದಿದೆ.ಆದರೆ, ಇಲ್ಲಿಗೆ ಬರುವ ರೈತ, ಕೃಷಿ ಕೂಲಿಕಾರರ ಮೂಲ ಸೌಕರ್ಯವನ್ನು ಪೂರೈಸುವ ನಿಟ್ಟಿನಲ್ಲಿ ಸರಿಯಾದ ಕ್ರಮವನ್ನು ತೆಗೆದುಕೊಂಡಿಲ್ಲ ಎಂಬ ಬೇಸರಿಕೆ ಮಾತುಗಳು ಕೃಷಿಕರ ಬಾಯಲ್ಲಿ ಕೇಳಿಬರುತ್ತಿದೆ.ಶೌಚದ ವ್ಯವಸ್ಥೆ ಇದ್ದರೂ ಅದಕ್ಕೆ ಬೀಗ ಹಾಕಲಾಗಿದೆ, ಮುಖ್ಯದ್ವಾರದ ರಸ್ತೆಗಳು ಅದ್ದೂರಿತನ ಉಳಿಸಿಕೊಂಡಿವೆ. ಉಳಿದ ರಸ್ತೆಗಳು ಮಾತ್ರ ತೆಪೆ ಹಾಕಿ ಮುಗಿಸಿರುವ ನೆಪ ಮಾತ್ರದ ಕೆಲಸವನ್ನು ತೋರಿಸುತ್ತದೆ. ನದಿಯಿದ್ದರೂ ಕುಡಿಯುವ ನೀರಿನ ಸಮಸ್ಯೆ ಮಾತ್ರ ತಪ್ಪಿಲ್ಲ ಹೀಗೆ ಹತ್ತು ಹಲವು ಸಮಸ್ಯೆಗಳ ಸರಮಾಲೆ ಸದ್ಯಕ್ಕೆ ಸುದ್ದಿಯಲ್ಲಿದೆ.ಅಡಿಕೆ ಖರೀದಿ ಕೇಂದ್ರಗಳಾದ ಮ್ಯಾಮ್ಕೋಸ್, ರ್ಯಾಮ್ಕೋಸ್ ಸ್ವಂತ ಕಟ್ಟಡದ ಮೂಲಕ ಇಲ್ಲಿ ವಹಿವಾಟು ನಡೆಸಿವೆ. ಇದರ ಮುಖ್ಯ ಖರೀದಿದಾರ ಕ್ಯಾಂಪ್ಕೋ ಸಹ ಸ್ವಂತ ಕಟ್ಟಡ ಕಟ್ಟಲು ಮುಂದಾಗಿದೆ.ಇಲ್ಲಿನ ಗೋದಾಮಿನಲ್ಲಿ ನಡೆಯುತ್ತಿದ್ದ ಬೆಲ್ಲ ಮಾರಾಟ ಇತ್ತೀಚಿನ ದಿನದಲ್ಲಿ ಸ್ಥಗಿತವಾಗಿದೆ. ಅನೇಕ ವ್ಯಾಪಾರಿಗಳು ಸೂಕ್ತ ರಸೀದಿ ನೀಡದೆ ಬಿಳಿ ಚೀಟಿಯಲ್ಲಿ ವ್ಯವಹಾರ ನಡೆಸಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿವೆ.

ಇಲ್ಲಿ ಮತ್ತಷ್ಟು ವ್ಯಾಪಾರ, ವಹಿವಾಟು ಸಾಗಲು ಸಾಕಷ್ಟು ಅವಕಾಶವಿದೆ. ಅದನ್ನು ಮಾಡುವ ನಿಟ್ಟಿನಲ್ಲಿ ಆವಶ್ಯಕವಿರುವ ಗೋದಾಮುಗಳ ಕೊರತೆ ಇದೆ.ಇದರೊಂದಿಗೆ ಹಾಲಿ ಇರುವ ಗೋದಾಮುಗಳು ಭತ್ತ ಶೇಖರಣೆಗೆ ಸೂಕ್ತವಾಗಿದೆ. ಇದಕ್ಕೆ ಹೊರತಾಗಿ ಬೇರೆ ಧಾನ್ಯ ಸಂಗ್ರಹಣೆಗೆ ಸೂಕ್ತವಾಗಿಲ್ಲ ಎಂಬ ಮಾತುಗಳು ಟ್ರೇಡರ್ಸ್‌ ಮಾಲೀಕರಿಂದ ಕೇಳಿ ಬರುತ್ತಿದೆ.ಇದಲ್ಲದೆ ಅಲ್ಲಿನ ಹಮಾಲಿಗಳ ಸಮಸ್ಯೆಯನ್ನು ಪರಿಹರಿಸುವಲ್ಲಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಕಡೆಗಣಿಸಿದ್ದಾರೆ. ಈ ಕುರಿತು ನೂತನ ಆಡಳಿತ ಮಂಡಳಿ ಒಂದಿಷ್ಟು ಗಮನ ನೀಡಬೇಕು ಎಂಬುದು ಆ ಜನರ ಬೇಡಿಕೆಯಾಗಿದೆ.ಹಲವು ಸಮಸ್ಯೆಗಳ ಸುತ್ತ ಸುದ್ದಿಯಲ್ಲಿರುವ ಇಲ್ಲಿನ ಎಪಿಎಂಸಿ ನಿರ್ದೇಶಕ ಮಂಡಳಿ ಚುನಾವಣೆ ಏ. 25ರ ಸೋಮವಾರ ನಡೆಯಲಿದೆ. 14ಸ್ಥಾನಗಳಲ್ಲಿ ಎರಡು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 12ಸ್ಥಾನಗಳಿಗೆ 36ಮಂದಿ ಕಣದಲ್ಲಿದ್ದಾರೆ.ಈ ಚುನಾವಣೆಯಲ್ಲಿ ಹಳೆಯ ಹುಲಿಗಳ ಜತೆ ಹೊಸಬರು ಕಣಕ್ಕೆ ಧುಮುಕಿ ತಮ್ಮ ಅದೃಷ್ಟವನ್ನು ಪಣಕ್ಕಿಟ್ಟಿದ್ದಾರೆ. ಯಾರೇ ಗೆದ್ದರೂ ರೈತ, ಕೃಷಿ ಕಾರ್ಮಿಕರ ಮೂಲ ಸೌಕರ್ಯ ಪೂರೈಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂಬುದು ಮತದಾರರ ಆಶಯ. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.