ಮೂಲಸೌಲಭ್ಯ ವಂಚಿತ ಮರಬನಹಳ್ಳಿ

7

ಮೂಲಸೌಲಭ್ಯ ವಂಚಿತ ಮರಬನಹಳ್ಳಿ

Published:
Updated:

ಕೂಡ್ಲಿಗಿ: ಜಿಲ್ಲೆಯಲ್ಲಿಯೇ ಅತಿದೊಡ್ದ ತಾಲ್ಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೂಡ್ಲಿಗಿಯ ಗಡಿಪ್ರದೇಶದ ಗ್ರಾಮಗಳ ಬವಣೆಗೆ ಪರಿಹಾರ ಸಿಗದೆ ಶೋಚನೀಯ ಸ್ಥಿತಿಯಲ್ಲಿವೆ. ಈ ಪೈಕಿ ಮರಬನಹಳ್ಳಿ ಗ್ರಾಮವು ಕನಿಷ್ಠ ಮೂಲ ಸೌಲಭ್ಯಗಳ ಕೊರತೆಯಿಂದ ನರಳುತ್ತಿದೆ.ಮರಬನಹಳ್ಳಿಯಲ್ಲಿ 2 ಕೈಪಂಪುಗಳಿವೆ. ಅವು ಕೆಟ್ಟು ಹಲವು ವರ್ಷಗಳಾಗಿವೆ. ಇದುವರೆಗೂ ದುರಸ್ತಿಯಾಗಿಲ್ಲ. ಗ್ರಾಮದಲ್ಲಿ ವಿದ್ಯುತ್ ಸೌಕರ್ಯವಿದ್ದಾಗ ಮಾತ್ರ ನೀರು ದೊರೆಯುತ್ತದೆ. ವಿದ್ಯುತ್ ಕಡಿತವಾದಾಗ ಜನ, ಜಾನುವಾರುಗಳಿಗೆ ಅವಶ್ಯವಾಗಿರುವ ಕೈಪಂಪು ಸಹ ಇಲ್ಲದೆ ನೀರಿನ ತೊಂದರೆ ಕಾಡುತ್ತಿದೆ.ನೀರಿನ ಸಂಗ್ರಹಕ್ಕಾಗಿ ತೊಟ್ಟಿಗಳನ್ನು ನಿರ್ಮಿಸಲಾಗಿದ್ದು, ಅದನ್ನೇ ಜನರು ಬಳಸುತ್ತಿದ್ದರು. ಅವೂ ಸಹ ಬಿರುಕು ಬಿಟ್ಟು, ಸೋರುತ್ತಿರುವುದರಿಂದ ನೀರು ಸಂಗ್ರಹವಾಗದೆ ತೊಂದರೆ ಆಗುತ್ತಿದೆ. ಬಿಸಿಲ ತಾಪದಲ್ಲಿ ಜನ ಮತ್ತು ಜಾನುವಾರುಗಳು ನೀರಿಗಾಗಿ ಅಲೆದಾಡಬೇಕಾಗಿದೆ ಎಂಬುದು ಗ್ರಾಮಸ್ಥರ ಆರೋಪ.ಗ್ರಾಮದಲ್ಲಿ ಸಾಮೂಹಿಕ ಶೌಚಾಲಯವಿಲ್ಲ. ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆಯೂ ಇಲ್ಲ. ಹೀಗಾಗಿ ಗ್ರಾಮಸ್ಥರು ಶಾಲೆ ಮತ್ತು ಅಂಗನವಾಡಿ ಕೇಂದ್ರಕ್ಕಾಗಿ ನಿರ್ಮಿಸಲಾಗಿರುವ ಶೌಚಾಲಯವನ್ನೇ ಬಳಸುತ್ತಾರೆ. ಸಾರ್ವಜನಿಕರ ಬಳಕೆಯಿಂದಾಗಿ ಶಾಲೆಗಳ ಶೌಚಾಲಯಗಳು ತೀರಾ ಹೊಲಸಾಗಿವೆ. ಅದು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.ಗ್ರಾಮದ ಮುಖ್ಯಬೀದಿಯಲ್ಲಿನ ಚರಂಡಿಗಳಲ್ಲಿ ಕಸ, ಕಲ್ಲು ತುಂಬಿಕೊಂಡಿವೆ. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಚರಂಡಿ ನೀರು ಕಾಲುವೆಯಲ್ಲಿ ನಿಲ್ಲುವುದರಿಂದ ಸೊಳ್ಳೆಗಳು ಹೆಚ್ಚಾಗಿವೆ. ಶಾಲೆ ಪಕ್ಕದಲ್ಲಿಯೇ ಕೊಳಚೆ ಗುಂಡಿ ಇರುವುದರಿಂದ ಸೊಳ್ಳೆಗಳು ಮಕ್ಕಳಿಗೆ ಕಚ್ಚಿ ವಿವಿಧ ಕಾಯಿಲೆಗಳಿಗೆ ಕಾರಣವಾಗಿವೆ.ಗ್ರಾಮದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಇದುವರೆಗೆ ಗ್ರಾಮದ ಸಮಸ್ಯೆಗೆ ಯಾರೊಬ್ಬರೂ ಸ್ಪಂದಿಸಿ, ಕೆಲಸ ಮಾಡಿಲ್ಲ ಎಂದು ಗ್ರಾಮಸ್ಥರಾದ ಕರಿಯಪ್ಪ ಮತ್ತು ಇತರರು ದೂರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry