ಭಾನುವಾರ, ಏಪ್ರಿಲ್ 11, 2021
30 °C

ಮೂಲೆಗುಂಪಾದ ಗಿರಿಜನರ ಸೂರು ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು: ಗಿರಿಜನರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿದ ಮಹತ್ವಾಕಾಂಕ್ಷಿ ಯೋಜನೆ ಯೊಂದು ಮೈಸೂರು ಜಿಲ್ಲೆಯಲ್ಲಿ ಮೂಲೆಗುಂಪಾಗಿದೆ.ಗಿರಿಜನರಿಗೆ ಸೂರು (ಸಿಸಿಡಿ) ಕಲ್ಪಿಸಲು ಕೇಂದ್ರ ಸರ್ಕಾರ ಎರಡು ವರ್ಷದ ಹಿಂದೆ ಯೋಜನೆಯೊಂದನ್ನು ರೂಪಿಸಿತು.ಹುಣಸೂರು ತಾಲ್ಲೂಕಿನ ಬಿಲ್ಲೇನಹೊಸಹಳ್ಳಿ ಹಾಡಿಯಲ್ಲಿ 2011ರ ಅಕ್ಟೋಬರ್ 18ರಂದು ಭೂಮಿಪೂಜೆ ನೆರ ವೇರಿಸುವ ಮೂಲಕ ರಾಜ್ಯದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು. ಕೇಂದ್ರ ಸರ್ಕಾರ ಈ ಯೋಜನೆಗೆ ರಾಜ್ಯಕ್ಕೆ ರೂ. 175 ಕೋಟಿ ಅನುದಾನ ನೀಡಿದೆ.ಇದರೊಂದಿಗೆ ಮೈಸೂರು ಜಿಲ್ಲೆಯಲ್ಲೂ ರೂ. 50 ಕೋಟಿ ಅನುದಾನದಲ್ಲಿ 2983 ಮನೆಗಳನ್ನು ನಿರ್ಮಿಸಲು ನೀಲನಕ್ಷೆ ತಯಾರಿಸ ಲಾಗಿದೆ. ಆದರೆ, ಜಿಲ್ಲೆಯಲ್ಲಿ ಈವರೆಗೆ ನಿರ್ಮಿಸಿದ್ದು ಕೇವಲ 800 ಮನೆಗಳು. ಅತ್ಯಂತ ಕಡಿಮೆ ವೆಚ್ಚದಲ್ಲಿ ಅಂದರೆ, ರೂ. 1 ಲಕ್ಷ ಮೊತ್ತದಲ್ಲಿ ಒಂದು ಮನೆ ನಿರ್ಮಿಸುವ ಉದ್ದೇಶ ಹೊಂದ ಲಾಗಿತ್ತು (ನಂತರ ಇದನ್ನು 1.25 ಲಕ್ಷಕ್ಕೆ ಏರಿಸ ಲಾಗಿದೆ).

 

ಹೀಗಾಗಿ ಮನೆಗಳನ್ನು ಮಾತ್ರ ನಿರ್ಮಿಸಿ ಉಳಿದ ಯಾವುದೇ ಮೂಲ ಸೌಲಭ್ಯ ಕಲ್ಪಿಸಲು ಆಗಿಲ್ಲ. ಇದರಿಂದಾಗಿ ಗಿರಿಜನರ ಸ್ವಂತ ಸೂರಿನ ಕನಸು ಕನಸಾಗೇ ಉಳಿದಿದೆ.ಸಮಿತಿಯ ನಿರ್ಲಕ್ಷ್ಯ: ಗಿರಿಜನರ ಸೂರು ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯದ ಆಯಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ `ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ~ ರಚಿಸಲಾಗಿದೆ.

 

ಮೈಸೂರು ಜಿಲ್ಲೆಯಲ್ಲೂ ಈ ಸಮಿತಿ ನಿರ್ಮಾಣಗೊಂಡಿದೆ. ಪ್ರತಿ ತಿಂಗಳು ಗಿರಿಜನರ ಸಭೆ ಕರೆದು ಯೋಜನೆಯ ಪ್ರಗತಿ ಮೌಲ್ಯಮಾಪನ ಮಾಡಬೇಕು. ಆದರೆ, 2011ರ ಆಗಸ್ಟ್‌ನಲ್ಲಿ ನಡೆದ ಸಮಿತಿ ಸಭೆ ನಂತರದಲ್ಲಿ ನಡೆದ ಉದಾಹರಣೆ ಇಲ್ಲ. ಆದಿವಾಸಿಗಳ ಅಭಿವೃದ್ಧಿಗೆ ಅಧಿಕಾರಿಗಳು ಯಾವಮಟ್ಟಿನ ಕಾಳಜಿ ಹೊಂದಿದ್ದಾರೆ ಎಂಬುದಕ್ಕೆ ಇದು ಉದಾಹರಣೆ.ಜಾಗೃತಿ ಸಮಿತಿ ಸೊಲ್ಲೆತ್ತದ ಕಾರಣ ಜಿಲ್ಲೆಯಲ್ಲಿ ಗಿರಿಜನರು ಸೂರು ಕಾಣದಂತಾಗಿದೆ. ಕಾಮಗಾರಿ ಗುತ್ತಿಗೆ ಪಡೆದವರು ಕೆಲ ಹಾಡಿಗಳಲ್ಲಿ ಮನೆಗಳನ್ನು ನಿರ್ಮಿಸಿ ತಮ್ಮ ಪಾಲಿನ ಹಣ ಎತ್ತಿಕೊಂಡಿದ್ದಾರೆ. ಆದರೆ, ಗಿರಿಜನರು ಮಾತ್ರ ಇನ್ನೂ ಗುಡಿಸಲುಗಳಲ್ಲಿ ವಾಸಿಸಬೇಕಾಗಿದೆ.ಗಿರಿಜನರ ದಯನೀಯ ಸ್ಥಿತಿ: ಇಡೀ ದೇಶ ಈಗ 66ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದೆ. ಆದರೆ, ಗಿರಿಜನರ ಬದುಕು ಮಾತ್ರ ತೀರ ದಯನೀಯವಾಗಿದೆ. ನಾಗರಿಕತೆಗೆ ಬೇಕಾಗುವ ಕನಿಷ್ಠ ಸೌಲಭ್ಯಗಳೂ ಇವರಿಗೆ ಸಿಕ್ಕಿಲ್ಲ. ಗಿರಿಜನರ ಉದ್ಧಾರಕ್ಕಾಗಿ ಹಲವು ಯೋಜನೆಗಳನ್ನು ಸರ್ಕಾರಗಳು ಹಮ್ಮಿಕೊಳ್ಳುತ್ತವೆ. ಆದರೆ, ಯಾವುದೂ ಈವರೆಗೆ ಜಾರಿಯಾಗಿಲ್ಲ. ಸರ್ಕಾರದ ಹಣ ಮಾತ್ರ ಸೋರುತ್ತಲೇ ಇದೆ ಎನ್ನುತ್ತಾರೆ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಎಂ.ಬಿ. ಪ್ರಭು.ಆದಿವಾಸಿಗಳಿಗೆ ಮೀಸಲಿಟ್ಟ ಹಣ ಯಾರದೋ ಪಾಲಾಗುತ್ತಿದೆ. ಸರ್ಕಾರ ಈವರೆಗೆ ಘೋಷಿಸಿರುವ ಯಾವ ಯೋಜನೆಯೂ ಸರಿಯಾಗಿ ಅನುಷ್ಠಾನಗೊಂಡಿಲ್ಲ. ನಾಗಾಪುರ ಪುನರ್ವಸತಿ ಕೇಂದ್ರದ ಗಿರಿಜನರಿಗೆ ಭೂಮಿ ಹಕ್ಕುಪತ್ರ ವಿತರಣೆ, ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ, ಗುಣಮಟ್ಟದ ಶಿಕ್ಷಣ ಪಡೆಯುವ ಹಕ್ಕು, ಆರೋಗ್ಯ ಘಟಕ- ಹೀಗೆ ಒಂದೇ ಒಂದು ಯೋಜನೆ ಕೂಡ ಸರಿಯಾಗಿ ಕಾರ್ಯಗತವಾಗಿಲ್ಲ ಎನ್ನುತ್ತಾರೆ ಅವರು.ಯೋಜನೆಗೆ ಶೀಘ್ರ ಚಾಲನೆ

ಗಿರಿಜನರಿಗೆ ಕಡಿಮೆ ವೆಚ್ಚದಲ್ಲಿ ಸೂರು ನಿರ್ಮಿಸುವ ಯೋಜನೆಗೆ ಚಾಲನೆ ಸಿಕ್ಕು ಎರಡು ವರ್ಷವಾಗಿದೆ. ಆರಂಭದಲ್ಲಿ ಕೇವಲ 1 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ, ಇದರಲ್ಲಿ ಗುಣಮಟ್ಟದ ಮನೆ ನಿರ್ಮಿಸುವ ಬಗ್ಗೆ ಆಕ್ಷೇಪಗಳು ಕೇಳಿಬಂದಿದ್ದರಿಂದ ಯೋಜನೆ ತಡೆಹಿಡಿಯಲಾಗಿತ್ತು.

 

ನಂತರದಲ್ಲಿ ಸಮಿತಿ ನಿರ್ಮಿತಿ ಕೇಂದ್ರ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಮನೆ ನಿರ್ಮಾಣದ ಮೊತ್ತವನ್ನು 1.25 ಲಕ್ಷಕ್ಕೆ ಏರಿಸಲಾಯಿತು.ಇದಕ್ಕೆ     ಸರ್ಕಾರದಿಂದ ಮಂಜೂರಾತಿ ಬಂದ ನಂತರ ಮನೆ ನಿರ್ಮಾಣ ಮುಂದುವರೆಯಲಿದೆ. ಜಿಲ್ಲೆಯಲ್ಲಿ ಈಗ 800 ಮನೆಗಳು ನಿರ್ಮಿಸಲಾಗಿದ್ದು, ಫಲಾನುಭವಿಗಳಿಗೆ ಹಸ್ತಾಂತರಿಸುವ ಬಗ್ಗೆ ದಿನಾಂಕ ನಿಗದಿಯಾಗಬೇಕಿದೆ.

-ನಾಗರಾಜ್, ಜಿಲ್ಲಾ ಮಟ್ಟದ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.