ಮೂಲೆಗುಂಪಾದ ಹೋರಾಟಗಾರರು

7
ಇಂದು ಹೈ.ಕ ವಿಮೋಚನಾ ದಿನಾಚರಣೆ

ಮೂಲೆಗುಂಪಾದ ಹೋರಾಟಗಾರರು

Published:
Updated:

ಗಜೇಂದ್ರಗಡ: ಹೈದ್ರಾಬಾದ್‌ ನಿಜಾಮರ ಕಪಿಮುಷ್ಠಿಯಲ್ಲಿದ್ದ ಈ ಭಾಗದ ಕೆಲ ಗ್ರಾಮಗಳನ್ನು ಸ್ವತಂತ್ರಗೊಳಿಸಲು ಪ್ರಾಣದ ಹಂಗು ತೊರೆದು ಹೋರಾಡಿದವರು ಜೀವಂತವಾಗಿದ್ದರೂ, ಜಿಲ್ಲಾಡಳಿತ ಮಾತ್ರ ಹೈದ್ರಾಬಾದ್‌ ವಿಮೋಚನಾ ದಿನಾಚರಣೆಗೆ ಮುಂದಾಗದಿರುವುದು ಹೋರಾಟಗಾರರಲ್ಲಿ ಬೇಸರ ಮೂಡಿಸಿದೆ.

1947 ರಲ್ಲಿ ರಾಷ್ಟ್ರಕ್ಕೆ ಸ್ವಾತಂತ್ರ್ಯ ದೊರೆತರೂ ಹೈದ್ರಾಬಾದ್‌ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ನಿಜಾಮರು ಆಳ್ವಿಕೆ ಮುಂದುವರೆಸಿದ್ದರು. ಅವುಗಳಲ್ಲಿ ರೋಣ ತಾಲ್ಲೂಕಿನ ಇಟಗಿ, ಹೊಸಳ್ಳಿ, ಮಗಳಿ, ಗುಳಗುಳಿ, ಶಾಂತಗೇರಿ, ಸರ್ಜಾಪುರ, ಬಳಗೋಡ, ಹಿರೇಅಳಗುಂಡಿ, ಚಿಕ್ಕ ಅಳಗುಂಡಿ ಸೇರಿದಂತೆ ಮುಂತಾದ ಗ್ರಾಮಗಳು ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದವು.

ನಿಜಾಮರ ಆಳ್ವಿಕೆ ಅತ್ಯಂತ ದುರಾಡಳಿತದಿಂದ ಕೂಡಿತ್ತು. ಕೊಲೆ, ಸುಲಿಗೆ, ಆಸ್ತಿ ಲೂಟಿ, ಮಾನಭಂಗದಂತಹ ನೀಚ ಕೃತ್ಯಗಳು ಎಗ್ಗಿಲ್ಲದೆ ನಡೆದಿದ್ದವು. ನಿಜಾಮರ ಹೀನ ಕೃತ್ಯಗಳಿಂದ ಬೇಸತ್ತ ಜನತೆ ಆಸ್ತಿ–ಪಾಸ್ತಿಗಳನ್ನು ಬಿಟ್ಟು ಬೇರೆಡೆ ವಲಸೆ ಹೋಗುವಂತಹ ದುಸ್ಥಿತಿ ನಿರ್ಮಾಣವಾಗಿತ್ತು. ನಿಜಾಮರ ದುರಾಡಳಿತಕ್ಕೆ ರೊಚ್ಚಿಗೆದ್ದ ನಾಗರಿಕರು ನಿಜಾಮರ ಸರ್ಕಾರದ ವಿರುದ್ಧ ಪ್ರತಿಭಟಿಸಲು ಸಜ್ಜಾದರು.

ನಿಜಾಮರ ಸರ್ಕಾರದ ದುಷ್ಕೃತ್ಯವನ್ನು, ವಿಷಮ ಪರಿಸ್ಥಿತಿಯನ್ನು ಭಾರತ ಸರ್ಕಾರ ಎದುರಿಸುತ್ತಿತ್ತು. ಇದೇ ವೇಳೆಗೆ 1947 ರ ಸೆಪ್ಟೆಂಬರ್‌ 3 ರಂದು ಹೈದರಾಬಾದ್‌ ಕಾಂಗ್ರೆಸ್ಸಿನ ಆದೇಶದ ಮೆರೆಗೆ ಅಂದು ‘ರಾಷ್ಟ್ರೀಯ ದಿನ’ ವೆಂದು ಆಚರಿಸಲಾಯಿತು. ಎಲ್ಲೆಡೆ ಆಚರಣೆಗೊಳಪಟ್ಟ ಆ ರಾಷ್ಟ್ರೀಯ ದಿನ ಸತ್ಯಾಗ್ರಹದ ರೂಪ ತಳೆದು ಇಡೀ ಹೈದರಾಬಾದ್‌ ಸಂಸ್ಥಾನದ ತುಂಬೆಲ್ಲಾ ತನ್ನಿಂದ ತಾನೆ ಹಬ್ಬಿತು.

ಹೋರಾಟಗಾರರೆಲ್ಲ ಖಾದಿ ಬಟ್ಟೆ ಧರಿಸಿ, ಗಾಂಧಿ ಟೊಪ್ಪಿಗೆ ಹಾಕಿಕೊಂಡು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಮೆರವಣಿಗೆ ನಡೆಸಿದರು. ಇದನ್ನೆಲ್ಲ ಕಂಡ ನಿಜಾಮರ ಸರ್ಕಾರ ಹೋರಾಟಗಾರರನ್ನೆಲ್ಲ ಬಂಧಿಸಿ ಜೈಲಿಗಟ್ಟಿತು.

ಶಿಬಿರಗಳ ಸ್ಥಾಪನೆ:ನಿಜಾಮರ ಸರ್ಕಾರದ ವಿರುದ್ಧ ಹೋರಾಟದಲ್ಲಿ ತೊಡಗಿದವರ ಮಾರ್ಗದರ್ಶನ ಮತ್ತು ಸವಲತ್ತುಗಳಿಗಾಗಿ ಗಡಿ ಭಾಗದಲ್ಲಿ ಶಿಬಿರಗಳನ್ನು ಸ್ಥಾಪಿಸಲಾಯಿತು. ಈ ಶಿಬಿರಗಳು ಹೋರಾಟಗಾರರನ್ನು ಸಂಘಟಿಸಿ ಯೋಗ್ಯ ಮಾರ್ಗದರ್ಶನ ನೀಡಲು ಸಹಕಾರಿಯಾದವು.

‘ಚಿಕ್ಕ ಅಳಗುಂಡಿ, ಹಿರೇಅಳಗುಂಡಿ, ಶಾಂತಗೇರಿ, ಗುಳಗುಳಿ, ಮುಗಳಿ, ಹೊಸಳ್ಳಿ, ಸೇರಿದಂತೆ ಮುಂತಾದ ಗ್ರಾಮಗಳ ಛಾವಣಿ ಕಛೇರಿಗಳನ್ನು ಸುಟ್ಟು ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದ ಈ ಭಾಗದ ಎಲ್ಲ ಗ್ರಾಮಗಳನ್ನು ಸ್ವತಂತ್ರವೆಂದು ಸಾರಿ ನಾವೇ ಆಡಳಿತ ನಡೆಸಿದೆವು’ ಎನ್ನುತ್ತಾರೆ ಹೊಸಳ್ಳಿ ಗ್ರಾಮದ 86 ವರ್ಷದ ಹೋರಾಟಗಾರ ವಿರೂಪಾಕ್ಷಯ್ಯ ಹಿರೇಮಠ.

ಕೈ ಬಾಂಬ್‌ ತಯಾರಿಕೆ: ನೆಲ್ಲೂರ ಗ್ರಾಮದ ಹಿರಿಕ ನೆಲ್ಲೂರ ಶಿವಪ್ಪ ಎಂಬುವವರು ಕೈಬಾಂಬ್‌ ತಯಾರಿಸುತ್ತಿದ್ದರು, ಗಡಿಯಲ್ಲಿದ್ದ ಹಳ್ಳಿಗಳಿಗೆ ರಜಾಕರು ಅಷ್ಟು ಸುಲಭವಾಗಿ ನುಗ್ಗದಂತೆ ಎಲ್ಲ ಗ್ರಾಮಗಳಲ್ಲಿ ಸೇವಾ ದಳ ರಚಿಸಿ ಕಾವಲು ಇಟ್ಟರು. ನೆರೆಯ ಕುಷ್ಟಗಿ ತಾಲ್ಲೂಕಿನ ಮಾಲಗಿತ್ತಿ ಗ್ರಾಮದಲ್ಲಿ ನೆಲೆಯೂರಿದ್ದ ನಿಜಾಮ ಸೈನಿಕರ ಮೇಲೆ ದಾಳಿ ಮಾಡಿದ ಏಳು ಜನ ಸೈನಿಕರು ಮೃತಪಟ್ಟರು. ಅವರಿಂದ ಪ್ರತಿಯಾಗಿ ಬಾಂಬ್‌ ದಾಳಿ ನಡೆದಾಗ ಸೇವಾದಳದ ಕೆಲವರಿಗೆ ಸಣ್ಣ–ಪುಟ್ಟ ಗಾಯಗಳಾಗಿದ್ದವು ಎಂದು ಅವರು ಹೋರಾಟದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ರಾಜ್ಯದ ಮೂಲೆ ಮೂಲೆಗಳಿಂದ ಸ್ವಾತಂತ್ರ್ಯ ಹೋರಾಟಗಾರರು ಇಟಗಿ ಗ್ರಾಮದ ಶಿಬಿರಗಳಿಗೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿದರು. ಈ ಭಾಗದ ಪ್ರಮುಖ ಹೋರಾಟಗಾರರಾಗಿದ್ದ ದಿ.ಅಂದಾನಪ್ಪ ದೊಡ್ಡಮೇಟಿ, ನೀಲಗಂಗಯ್ಯ ಪೂಜಾರ, ಮುಗಳಿ ಗುರುಗಳು ಸೇರಿದಂತೆ ಅನೇಕ ಮುಖಂಡರು ಕಾಲ್ನಡಿಗೆಯಲ್ಲಿ ಹಳ್ಳಿ ಹಳ್ಳಿಗೆ ತೆರಳಿ ಜನರನ್ನು ಸಂಘಟಿಸಿ ಹೋರಾಟಕ್ಕೆ ಧುಮುಕುವಂತೆ ಪ್ರೇರೆಪಿಸಿದರು.

ಈ ಭಾಗದ ಹೈದರಾಬಾದ್‌ ವಿಮೋಚನಾ ಹೋರಾಟಗಾರರ ಪೈಕಿ ತಾಲ್ಲೂಕಿನಲ್ಲಿ ಸದ್ಯ ಐದು ಜನ ಜೀವಂತವಾಗಿದ್ದಾರೆ. ನಿಜಾಮರ ಆಳ್ವಿಕೆಯಿಂದ ಹೈದರಾಬಾದ್‌ ಪ್ರಾಂತ್ಯಕ್ಕೆ ಮುಕ್ತಿ ದೊರೆತು ಸೆಪ್ಟೆಂಬರ್‌ 17 ಕ್ಕೆ 65 ವರ್ಷಗಳು ಸಂದಿವೆ. ಆದರೆ, ಇಂದು ಹೈದರಾಬಾದ್‌ ವಿಮೋಚನಾ ದಿನಾಚರಣೆಗೆ ಜಿಲ್ಲಾಡಳಿತ ಹಾಗೂ ತಾಲ್ಲೂಕಾಡಳಿತ ಮುಂದಾಗದಿರುವುದು ಹೋರಾಟಗಾರರಲ್ಲಿ ಬೇಸರ ಮೂಡಿಸಿದೆ.

ಸ್ವಾತಂತ್ರ್ಯ ಸಂಗ್ರಾಮದ ಮಾದರಿಯಲ್ಲಿ ನಡೆದ ‘ಹೈದರಾಬಾದ್‌ ವಿಮೋಚನಾ’ ಹೋರಾಟಕ್ಕೂ ಸ್ವಾತಂತ್ರ್ಯ ಸಂಗ್ರಾಮಕ್ಕೆ ದೊರೆತ ಮಾನ್ಯತೆ ದೊರೆಯಬೇಕು ಎಂಬುದು ಇಟಗಿ ಗ್ರಾಮದ ಹೋರಾಟಗಾರರಾದ ಭೀಮಪ್ಪ ಪಲ್ಲೇದ, ಅಂದಾನಯ್ಯ ಹಿರೇಮಠ ಅವರ ಆಶಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry