ಶುಕ್ರವಾರ, ನವೆಂಬರ್ 22, 2019
19 °C
ಬಿಜೆಪಿಗೆ ಮುಳುವಾದಿತೇ `ಕಸ್ತೂರಿಯ ಕಂಪು'

ಮೂಲ್ಕಿ-ಮೂಡುಬಿದಿರೆ ಕ್ಷೇತ್ರ- ಬಿಲ್ಲವರ ನಡೆ ಬಲ್ಲವರಾರು?

Published:
Updated:

ಸುರತ್ಕಲ್: ಬಿಜೆಪಿಯ ಪಾಲಿಗೆ ಮೂಲ್ಕಿ-ಮೂಡುಬಿದಿರೆ ಕ್ಷೇತ್ರ ಸವಾಲಿನ ಕಣವಾಗಿ ಪರಿಣಮಿಸಿದೆ. ಬಿಲ್ಲವರೇ ನಿರ್ಣಾಯಕ ಮತದಾರ ರಾಗಿರುವ ಈ ಕ್ಷೇತ್ರದಲ್ಲಿ ಬಿಜೆಪಿಯ ತಲೆನೋವು ಕಡಿಮೆಯಾಗುವ ಲಕ್ಷಣ ಸದ್ಯಕ್ಕೆ ಕಾಣಿಸುತ್ತಿಲ್ಲ.ಮೂರು ದಶಕಗಳಿಂದ ಬಿಲ್ಲವರ `ಕೈ'ಯಲ್ಲೇ ಇದ್ದ ಮೂಲ್ಕಿ ಮೂಡುಬಿದಿರೆ ಕ್ಷೇತ್ರಕ್ಕೆ ಕಾಂಗ್ರೆಸ್ ಆಧಿಪತ್ಯವೇ ಇತ್ತು. ಇದೇ ಪಕ್ಷದಲ್ಲಿದ್ದು ಗೆದ್ದು ಬಂದಿರುವ ಬಿಲ್ಲವರು ಈ ಭಾಗದಲ್ಲಿ ತಮ್ಮ ಸ್ಥಾನವನ್ನು ಭದ್ರಗೊಳಿಸಿದ್ದರು. ಆದರೆ ಕಳೆದ ಎರಡು ಅವಧಿಯಲ್ಲಿ ಕಾಂಗ್ರೆಸ್ ಪ್ರಬಲ ಬಿಲ್ಲವ ಅಭ್ಯರ್ಥಿ ಇಲ್ಲದ ಕಾರಣ ಜೈನ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಅವರು ನಿರಾಯಾಸವಾಗಿ ಗೆದ್ದು ಬಂದಿದ್ದರು. ಆದರೆ ಈ ಬಾರಿ `ಬಿಲ್ಲವ'ರ ಮುನಿಸು ಈ ಬಾರಿ ಅಭಯಚಂದ್ರ ಜೈನ್‌ಗೆ ತೊಡಕಾಗುವ ಸಾಧ್ಯತೆ ಇದೆ. ಇದರ ಸುಳಿವು ಪಡೆದ ಜೈನ್ ಆರಂಭದಲ್ಲಿ  ಸ್ಪರ್ಧೆಯಿಂದ ವಿಮುಖರಾಗುವ ಸೂಚನೆ ನೀಡಿದ್ದರು. ಬಿಲ್ಲವರಿಗೆ ಅವಕಾಶ ನೀಡುವೆ ಎಂದಿದ್ದರು. ಆದರೆ ಕೊನೆಗೆ ಕ್ಷಣದಲ್ಲಿ ಜೈನ್ ವರಸೆ ಬದಲಿಸಿದ್ದರು. ಈ ಭಾಗದ ಸ್ಥಾನ ಬಿಲ್ಲವರಿಗೆ ಮೀಸಲು ಎಂದು ಬಿಲ್ಲವರ ಮೊಣಕೈಗೆ ಬೆಣ್ಣೆ ಹಚ್ಚಿದ ಕಾಂಗ್ರೆಸ್ ಅಂತಿಮ ಕ್ಷಣದಲ್ಲಿ ಕೈ ಕೊಟ್ಟಿದೆ ಎಂಬುದು ಬಿಲ್ಲವರ ಅಸಮಾಧಾನ.ಕಾಂಗ್ರೆಸ್ ಧೋರಣೆಯಿಂದ ಬಿಲ್ಲವರು ಅಸಮಾಧಾನಗೊಂಡಿರುವ ಸುಳಿವು ಪಡೆದ ಬಿಜೆಪಿ ಇದರ ಲಾಭ ಪಡೆಯಲು ಮುಂದಾಗಿದೆ. ಈ ಕ್ಷೇತ್ರದಲ್ಲಿ ಬಿಲ್ಲವರಿಗೆ ಅವಕಾಶ ನೀಡಿ ಜೈನ್ ಅವರ ನಾಲ್ಕನೇ ಬಾರಿ ಗೆಲ್ಲುವ ಕನಸನ್ನು ಛಿದ್ರಗೊಳಿಸುವ ಲೆಕ್ಕಾಚಾರ ಬಿಜೆಪಿಯದು. ಸಾಕಷ್ಟು ಹಿಂದೆಯೇ ಬಿಜೆಪಿ ಮೂಲ್ಕಿ ಮೂಡುಬಿದಿರೆ ಕ್ಷೇತ್ರ ಬಿಲ್ಲವರಿಗೆ ಎಂದೇ ಸುದ್ದಿ ಹಬ್ಬಿಸಿತ್ತು. ಯಾರು ಹಿತವರು ಈ ಮೂವರೊಳಗೆ:ಸಂಭಾವ್ಯ ಬಿಲ್ಲವ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸವನ್ನೂ ನಡೆಸಿದೆ. ಈ ಪಟ್ಟಿಯಲ್ಲಿ ಸತ್ಯಜಿತ್ ಸುರತ್ಕಲ್, ಉಮಾನಾಥ ಕೋಟ್ಯಾನ್, ಈಶ್ವರ ಕಟೀಲ್ ಮುಂತಾದವರ ಹೆಸರುಗಳಿವೆ.ಈ ಮೂವರೊಳಗೆ ತೀವ್ರ ಸ್ಪರ್ಧೆ ವ್ಯಕ್ತವಾಗುತ್ತಿರುವಂತೆ ಬಿಜೆಪಿ ತಲೆ ಬಿಸಿ ಮತ್ತಷ್ಟು ಹೆಚ್ಚಿದೆ. ಬಿಲ್ಲವ ಅಭ್ಯರ್ಥಿಯೇ ಬೇಡ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಅವಕಾಶ ನೀಡುವ ಬಗ್ಗೆಯೀ ಬಿಜೆಪಿ ಚಿಂತನೆ ನಡೆಸಿತ್ತು. ಆದರೆ ಆ ವೇಳೆ ಗುಪ್ತ ಸಭೆ ನಡೆಸಿದ ಬಂಟರು, ನಳಿನ್ ಅವರನ್ನು ಸ್ಪರ್ಧಿಸದಂತೆ ತಡೆ ಹಿಡಿದರು. ಒಂದು ವೇಳೆ ನಳಿನ್ ನಿಂತರೆ ಎಲ್ಲಾ ಬಿಲ್ಲವರು ಒಂದಾಗಿ ನಳಿನ್‌ರನ್ನು ಸೋಲಿಸುವ ಸಾಧ್ಯತೆ ಇದೆ. ಹೀಗಾಗಿ ಇದ್ದ ಅವಕಾಶ ಕಳೆದುಕೊ ಳ್ಳುವುದಕ್ಕಿಂತ ಸುಮ್ಮನಿರುವುದೇ ಲೇಸೆಂದು ಕಿವಿಮಾತು ಹೇಳಿದ್ದರು.ಇದಕ್ಕೆ ನಳಿನ್ ಧ್ವನಿಗೂಡಿಸಿದ ಕಾರಣ ಅವರ ಬದಲು ಸದ್ಯಕ್ಕೆ ಕಸ್ತೂರಿ ಪಂಜ ಅವರ ಹೆಸರು ಕೇಳಿಬರುತ್ತಿದೆ. ಮಹಿಳೆಗೆ ಅವಕಾಶ ನೀಡಿದಂತೆಯೂ ಆಗುತ್ತದೆ, ಬಿಲ್ಲವರ ಒಲವು ಗಳಿಸಿದಂತೆಯೂ ಆಗುತ್ತದೆ ಎನ್ನುವುದು ಬಿಜೆಪಿ ಲೆಕ್ಕಾಚಾರ. ಆದರೂ ಇದೂ ಬಿಜೆಪಿಗೆ ಮುಳುವಾಗುವ ಸಾಧ್ಯತೆಯೇ ಅಧಿಕ ಎನ್ನುತ್ತಾರೆ ರಾಜಕೀಯ ಪಂಡಿತರು. ಒಂದು ಕಡೆ ಬಿಲ್ಲವರು ಒಂದಾಗುತ್ತಾರೆ ಇನ್ನೊಂದು ಕಡೆ ಸತ್ಯಜಿತ್, ಉಮಾನಾಥ್, ಈಶ್ವರ್ ಕಟೀಲ್ ಅವರ ಬೆಂಬಲಿಗರೂ ಒಂದಾಗಿ ಬಿಜೆಪಿಗೆ ತಿರುಗೇಟು ನೀಡುವುದು ಖಂಡಿತ. ಹೀಗಾಗಿ ಗೆಲ್ಲುವ ಸಾಧ್ಯತೆ ಅಧಿಕವಾಗಿರುವ ಕ್ಷೇತ್ರವನ್ನು ಬಿಜೆಪಿ ಸುಖಾಸುಮ್ಮನೆ ಕಳೆದುಕೊಳ್ಳುವುದು ಬಿಜೆಪಿಗೆ ಬೇಕಾಗಿಲ್ಲ ಎನ್ನುತ್ತವೆ ಪಕ್ಷದ ಮೂಲಗಳು. ಈ ಕಾರಣದಿಂದ ಲೆಕ್ಕಾಚಾರದ ಆಟ ಇನ್ನೂ ಮುಂದುವರಿಯುತ್ತಲೇ ಇದೆ.ಏನೇ ಆದರೂ ಬಿಜೆಪಿಯ ಈ ಕ್ಷೇತ್ರಲದಲ್ಲಿ ಬಿಲ್ಲವರತ್ತವೇ ಒಲವು ತೋರುವ ಸಾಧ್ಯತೆ ಅಧಿಕ. ಏಕೆಂದರೆ ಇಲ್ಲಿ ಬಿಲ್ಲವರೇ ನಿರ್ಣಾಯಕ. ತಮಗೂ ರಾಜಕೀಯ ಸ್ಥಾನಮಾನ ಬೇಕು ಎಂದು ಬಿಲ್ಲವರೂ ಒಂದಾಗಿದ್ದಾರೆ. ಈ ಕಾರಣದಿಂದ ಬಿಜೆಪಿಯ ಮುಂದೆ ಉಮಾನಾಥ ಕೋಟ್ಯಾನ್ ಮತ್ತು ಸತ್ಯಜಿತ್ ಹೆಸರಿದೆ. ಈ ಪೈಕಿ ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿದ್ದಾರೆ. ಅದೇ ರೀತಿ ಉಮಾನಾಥ ಕೋಟ್ಯಾನ್ ತುಳು ಅಕಾಡೆಮಿಯ ಅಧ್ಯಕ್ಷರಾದ ಬಳಿಕ ಬಹುತೇಕ ಗ್ರಾಮಗಳಲ್ಲಿ ತಿರುಗಾಡಿದ ಅನುಭವ ಹೊಂದಿದ್ದಾರೆ. ಹಲವಾರು ಬಿಲ್ಲವ ಸಂಘಟನೆಗಳ ಜೊತೆ ನಿಕಟ ಸಂಪರ್ಕ ಇರಿಸಿಕೊಂಡಿ ದ್ದಾರೆ.ಗ್ರಾಮೀಣ ಪ್ರದೇಶಗಳಲ್ಲೂ ಇವರ ಮುಖದರ್ಶನವಾಗಿದೆ. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಗುರುತಿಸಿಕೊಮಡ ಅವರಿಂದ ಅಭಿವೃದ್ಧಿ ಕೆಲಸ ನಿರೀಕ್ಷಿಸಬಹುದು ಎನ್ನುವ ಲೆಕ್ಕಾಚಾರ ಬಿಜೆಪಿಯದು. ಇದೆಲ್ಲವನ್ನೂ ಅವಲೋಕಿಸಿ ಬಿಜೆಪಿ ಇಡುವ ನಡೆ ಗಮನಾರ್ಹವಾಗಿದೆ.

ಪ್ರತಿಕ್ರಿಯಿಸಿ (+)