ಮೂಲ್ಕಿ: ರಸ್ತೆ ವಿಸ್ತರಣೆ ಗೊಂದಲ:ಫ್ಲೈಓವರ್ ನಿರ್ಮಾಣಕ್ಕೆ ತೀವ್ರ ಒತ್ತಡ

7

ಮೂಲ್ಕಿ: ರಸ್ತೆ ವಿಸ್ತರಣೆ ಗೊಂದಲ:ಫ್ಲೈಓವರ್ ನಿರ್ಮಾಣಕ್ಕೆ ತೀವ್ರ ಒತ್ತಡ

Published:
Updated:

ಮೂಲ್ಕಿ; ಸುರತ್ಕಲ್ ಮತ್ತು ಕುಂದಾಪುರದ ನಡುವೆ ಮೂಲ್ಕಿಯಲ್ಲಿ ಉಂಟಾಗಿರುವ ರಸ್ತೆ ವಿಸ್ತರಣೆಯ ಗೊಂದಲಕ್ಕೆ ತೆರೆ ಎಳೆಯಲು ಫ್ಲೈಓವರ್ ನಿರ್ಮಾಣಕ್ಕೆ ತೀವ್ರ ಒತ್ತಡ ಹಾಕುವ ಬಗ್ಗೆ ಭಾನುವಾರ ಗೋಪ್ಯವಾಗಿ ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.ಮೂಲ್ಕಿಯ ಸ್ವಾಗತ್ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಆರಂಭದಲ್ಲಿ ಸ್ಥಳೀಯ ವೈದ್ಯರಾದ ಡಾ.ಅಚ್ಚುತ ಕುಡ್ವಾ ಅವರು ತಾವೇ ಎಂಜಿನಿಯರ್ ಒಬ್ಬರಿಂದ ತಯಾರಿಸಿದ ನಕ್ಷೆಯನ್ನು ಸಭೆಯಲ್ಲಿ ಮಂಡಿಸಿದರಲ್ಲದೇ ಅದರಲ್ಲಿ ದಾಖಲಿಸಿದಂತೆ ಮೂಲ್ಕಿ ಬಿಲ್ಲವ ಸಂಘದ ಬಳಿ ಮತ್ತು ಗೌರವ್ ಬಾರ್‌ನ ಬಳಿಯಲ್ಲಿ ಅಂಡರ್ ಪಾಸ್ ನಿರ್ಮಾಣ ಮತ್ತು ಸಣ್ಣ ಫ್ಲೈಓವರ್‌ಗೆ ಆದ್ಯತೆ ನೀಡಬೇಕು, ಆಗ ಎಲ್ಲಾ ಸಮಸ್ಯೆಗೆ ಪರಿಹಾರ ಸಾಧ್ಯ ಎಂದರು ಎನ್ನಲಾಗಿದೆ.ಆದರೆ ಸಭೆಯಲ್ಲಿ ಈ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿ ಇದು ಯಾವುದೇ ರೀತಿಯಲ್ಲಿ ಉಪಕಾರಿ ಆಗಿಲ್ಲ, ನಕ್ಷೆ ಏಕಪಕ್ಷೀಯವಾಗಿದೆ, ಜತೆಗೆ ಮೂಲ್ಕಿ ಪೇಟೆಯೇ ಇಬ್ಬಾಗವಾಗುತ್ತದೆ ಎಂದು ಆರೋಪಿಸಿ ಕೊನೆಗೆ ಬಿಸಿ ಬಿಸಿ ಚರ್ಚೆ ನಡೆಯಿತು ಎಂದು ಸಭೆಯಲ್ಲಿ ಭಾಗವಹಿಸಿದ್ದ ಉದ್ಯಮಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಮೂಲ್ಕಿಯಲ್ಲಿ ಬೈಪಾಸ್‌ಗೆ ಬಪ್ಪನಾಡು ದೇವಳದ ಮುಖಾಂತರ ಜನರ ಪ್ರಬಲ ವಿರೋಧವಿದ್ದು, ಯೋಜನೆಯಲ್ಲಿ ಹೆಚ್ಚು ವೆಚ್ಚವಾದರೂ ಸರಿ ಫ್ಲೈಓವರ್ ನಿರ್ಮಾಣವೇ ಇದಕ್ಕೆ ಸೂಕ್ತ ಎಂಬ ಮಾತು ಕೇಳಿಬಂದಿದೆ. ಅದನ್ನು ಶಾಸಕ ಅಭಯಚಂದ್ರರ ಮೂಲಕ ಕೇಂದ್ರ ಸರ್ಕಾರಕ್ಕೆ ಒತ್ತಡ ತರುವ ಬಗ್ಗೆ ಪರಸ್ಪರ ಚರ್ಚೆ ನಡೆಸಲಾಯಿತು. ಸೋಮವಾರ ಶಾಸಕರನ್ನು ನಿಯೋಗದ ಮೂಲಕ ಭೇಟಿ ಮಾಡಿ ಈ ಯೋಜನೆಯ ಬಗ್ಗೆ ಒತ್ತಡ ಹಾಕಲು ತೀರ್ಮಾನಿಸಲಾಯಿತು ಎಂದು ತಿಳಿದು ಬಂದಿದೆ.ಫ್ಲೈಓವರ್‌ಗೆ ಮೂಲ್ಕಿಯ ರಿಕ್ಷಾ, ಕಾರು, ಟೆಂಪೋ ಚಾಲಕ ಮಾಲೀಕರು ಸಹ ಒಮ್ಮತ ವ್ಯಕ್ತಪಡಿಸುವ ಸಾಧ್ಯತೆ ಇದೆ. ಅವರಿಗೆ ಪಾರ್ಕಿಂಗ್‌ಗೆ ಮುಕ್ತ ಅವಕಾಶ ಇದೆ. ಸುರತ್ಕಲ್ ಪೇಟೆಯಲ್ಲಿ ಇರುವಂತೆ ಫ್ಲೈಓವರ್ ನಿರ್ಮಸಬಹುದು ಎಂಬ ಚರ್ಚೆ ನಡೆಯಿತು.ಈ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಿದಲ್ಲಿ ಯಾರ ವಿರೋಧವೂ ಎದುರಾಗುವುದಿಲ್ಲ ಎಂದು ನಿರ್ಧರಿಸಿ ಫ್ಲೈಓವರ್‌ನ್ನೇ ನಿರ್ಮಿಸಲು ಒತ್ತಡ ಹಾಕುವ ಬಗ್ಗೆ ಅಂತಿಮ ತೀರ್ಮಾನ ಕೈಗೋಳ್ಳಲಾಯಿತು ಎಂದು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.ಈ ವಿಶೇಷ ಗೋಪ್ಯ ಸಭೆಯಿಂದ ಮಾಧ್ಯಮದವರನ್ನು ಹಾಗೂ ಮೂಲ್ಕಿ ಬೈಪಾಸ್ ವಿರೋಧಿ ಸಮಿತಿಯವರನ್ನು ದೂರ ಇಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry