ಗುರುವಾರ , ಮಾರ್ಚ್ 4, 2021
30 °C

ಮೂಲ ನಂಬಿಕೆಗೆ ಮಹತ್ವ ನೀಡಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಲ ನಂಬಿಕೆಗೆ ಮಹತ್ವ ನೀಡಲು ಸಲಹೆ

ಪುತ್ತೂರು: ಆರಾಧನೆ ಮತ್ತು ಆಚರಣೆಗಳಿಗೆ ವೈಜ್ಞಾನಿಕವಾದ ನೆಲೆಗಟ್ಟಿದ್ದು, ಇದರ ಮಹತ್ವವನ್ನು ತಿಳಿದುಕೊಂಡು ಸಾರ್ವಕಾಲಿಕ ಮೌಲ್ಯಗಳನ್ನು ತುಂಬುವ ಕೆಲಸ ಆಗಬೇಕಿದೆ. ಆರಾಧನೆ ಮತ್ತು ಆಚರಣೆಯಲ್ಲಿ ಮೂಢನಂಬಿಕೆಗೆ ಮಹತ್ವ ನೀಡದೆ ಮೂಲ ನಂಬಿಕೆಗೆ ಮಹತ್ವ ನೀಡಬೇಕಾಗಿದೆ ಎಂದು ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಭಿಪ್ರಾಯಪಟ್ಟರು.ಕರ್ನಾಟಕ ಮತ್ತು ಕೇರಳ ರಾಜ್ಯದ ಸಮಸ್ತ ಮೋಗೇರ ಸಂಘಗಳ ನಮ್ಮಿಲನದೊಂದಿಗೆ ದ,ಕ,­ಜಿಲ್ಲಾ ಮೊಗೇರರ ಸಂಘ, ಪುತ್ತೂರು ತಾಲೂಕು ಮೊಗೇರ ಸಂಘ, ಮೊಗೇರ ಮಹಿಳಾ ಸಂಘ ,ಯುವ ವೇದಿಕೆ ಮತ್ತು ಬಂಟ್ವಾಳ ತಾಲೂಕು ಮೊಗೇರ ಸಂಘದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಪುತ್ತೂರಿನ ಪುರಭವನದಲ್ಲಿ ನಡೆದ `ನಮ್ಮ ಧ್ವನಿ' ತ್ರೈಮಾಸಿಕ ಪತ್ರಿಕೆಯ ಬಿಡುಗಡೆ ಮತ್ತು `ಸಾಂಸ್ಕೃತಿಕ ಸೌರಭ' ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.ಈ ನೆಲದ ಸಂಸ್ಕೃತಿಯನ್ನು ಬೆಳೆಸಿದ ಮೊಗೇರರು ಕೃಷಿ ಹಿಡುವಳಿದಾರರಲ್ಲದಿದ್ದರೂ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡವರು. ಮೊಗೇರರ ಇತಿಹಾಸ ಬಹಳಷ್ಟು ಪ್ರಾಚೀನವಾದುದು ಎಂದರು.

ರಾಜ್ಯ ಮೊಗೇರ ಸಂಘದ ಗೌರವಾಧ್ಯಕ್ಷ ಡಾ. ರಘು ಬೆಳ್ಳಿಪ್ಪಾಡಿ ಅವರು ಉದ್ಘಾಟಿಸಿದರು. ಮೊಗೇರ ಜನಾಂಗದವರು ಪ್ರಸ್ತುತ ಶೈಕ್ಷಣಿಕವಾಗಿ ಮುಂದುವರಿದಿದ್ದು, ಬಹಳಷ್ಟು ಮಂದಿ ಉದ್ಯೋಗ­ದಲ್ಲಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಸಂಸ್ಕೃತಿ ಮತ್ತು ತುಳು ಮಾತೃ ಭಾಷೆಯನ್ನು ಉಳಿಸಬೇಕಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಮೊಗೇರ ಸಂಘದ ಅಧ್ಯಕ್ಷ ಸುಂದರ ಮೇರ ಹೊಸಬೆಟ್ಟು ಅವರು ನಮ್ಮ ಸಮಾಜದಲ್ಲಿ ತುಂಬಿ­ರುವ ಅಜ್ಞಾನ,ಮೂಢನಂಬಿಕೆಗಳನ್ನು ಕಿತ್ತೆಸೆಯಲು ಪ್ರತಿಭಟನೆಯು ಅಸ್ತ್ರವಾಗಬೇಕಿದೆ ಎಂದರು.ಖ್ಯಾತ ಜಾನಪದ ಪಾಡ್ದನ ಕಲಾವಿದೆ ಗಿಡಿಗೆರೆ ರಾಮಕ್ಕ ಅವರನ್ನು ಸನ್ಮಾನಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು ಅವರು ನಾವು ನಮ್ಮೊಳಗೆ ಉಳ್ಳವರು ಇಲ್ಲದವರನ್ನು ಮೇಲಕ್ಕೆತ್ತುವ ಮೂಲಕ ಸಮಾಜದ ಸುಧಾರಣೆಗೆ ಕಟಿಬದ್ಧರಾದರೆ ಹೊರಗಿನ ಸಮಾಜದ ಮುಂದೆ ಕೈಚಾಚುವ ಅಗತ್ಯ ಬರುವುದಿಲ್ಲ, ಸ್ವಾಭಿಮಾನಿಗಳಾಗಿ ಬದುಕಲು ಸಾಧ್ಯ ಎಂದರು.ಖ್ಯಾತ ಜಾನಪದ ಪಾಡ್ದನ ಕಲಾವಿದೆ ಗಿಡಿಗೆರೆ ರಾಮಕ್ಕ  ಅವರು ‘ನಮ್ಮ ಧ್ವನಿ’ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ನಮ್ಮ ಧ್ವನಿ ಪತ್ರಿಕೆಯ ವೆಬ್‌ಸೈಟ್‌ ಅನ್ನು ಶಾಸಕಿ ಶಕುಂತಳಾ ಶೆಟ್ಟಿ ಅವರು ಉದ್ಘಾಟಿಸಿದರು.ರಾಜ್ಯ ಮೊಗೇರ ಸಂಘದ ಗೌರವಾಧ್ಯಕ್ಷ ಕೃಷ್ಣಪ್ಪ ದೇರೆಬೈಲ್, ರಾಜ್ಯ ಮೊಗೇರ ಸಂಘದ ಗೌರವ ಕಾರ್ಯದರ್ಶಿ ಸೀತಾರಾಮ ಕೊಂಚಾಡಿ , ಕಾಸರಗೋಡು ಜಿಲ್ಲಾ ಮೊಗೇರ ಸಂಘದ ಗೌರವಾಧ್ಯಕ್ಷ ರಾಮಪ್ಪ ಎಂ.ಪಿ.­ಮಂಜೇಶ್ವರ, ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಪ್ಪ ಸೋಮವಾರಪೇಟೆ, ರಾಜ್ಯ ಮೊಗೇರ ಸಂಘದ ಗೌರವಾಧ್ಯಕ್ಷರಾದ ನಿವೃತ್ತ ಶಿಕ್ಷಕ ಕೆ.­ಕುಮಾರ್, ಪತ್ರಿಕೆಯ ಪ್ರಧಾನ ಸಂಪಾದಕ ಉದಯ ಸಾರಂಗ, ಕಾಸರಗೋಡು ಜಿಲ್ಲಾ ಮೊಗೇರ ಸರ್ವಿಸ್ ಸೊಸೈಟಿಯ ಅಧ್ಯಕ್ಷೆ ಗಿರಿಜಾ ತಾರಾನಾಥ್ ಕುಂಬ್ಳೆ, ಕೊಡಗು ಜಿಲ್ಲಾ ಮೊಗೇರ ಸಂಘದ ಅಧ್ಯಕ್ಷ ರವಿ.­ಪಿ.ಎಂ, ಕಾಸರಗೋಡು, ಜಿಲ್ಲಾ ಮೊಗೇರ ಸಂಘದ ಅಧ್ಯಕ್ಷ ಹರಿರಾಮ್ ಕುಳೂರು, ಹಾಸನ ಜಿಲ್ಲಾ ಮೊಗೇರ ಸಂಘದ ಅಧ್ಯಕ್ಷ ಅಣ್ಣಪ್ಪ ಬಾಳ­ಪೇಟೆ ಅತಿಥಿಗಳಾಗಿ ಮಾತನಾಡಿದರು.ದೀಪಿಕಾ ಸುಳ್ಯ ಪ್ರಾರ್ಥನೆ ಹಾಡಿದರು. ಪತ್ರಿಕೆಯ ಕಾರ್ಯ­ನಿರ್ವಾಹಕ ನಿರ್ದೇಶಕ ವೆಂಕಟೇಶ್ ಸ್ವಾಗತಿಸಿದರು. ಶಿವಪ್ರಸಾದ್ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.