ಮೂಲ ನಕ್ಷತ್ರವೂ... ಶತಾಯುಷಿ ಜೀವನದ ಥಳಕು

7

ಮೂಲ ನಕ್ಷತ್ರವೂ... ಶತಾಯುಷಿ ಜೀವನದ ಥಳಕು

Published:
Updated:

ತಿಪಟೂರು: ವಯಸ್ಸೆಷ್ಟು ಅಜ್ಜ ಎಂದು ಕೇಳಿದರೆ `ಒಂದು ಒಗ್ದು ಹತ್ತೋ, ಹದಿನೈದು ಆಗೈತೆ. ಸ್ವಾತಂತ್ರ್ಯ ಸಿಕ್ಕಾಗ ಮದುವೆಗೆ ಬಂದಿದ್ದ ಮೂವರು ಮಕ್ಕಳಿದ್ರು. ನಮ್ ಸುತ್ತಲ ಯಾವ ಹಳ್ಳೀಲೂ ನನ್ನ ವಾರಗೆಯವ್ರ ಈಗ ಉಳಿದಿಲ್ಲ. ಊರಿನ ಎಷ್ಟೋ ಮನೆ ಎರಡ್ಮೂರು ತಲೆಮಾರು ಕಳೆದಿವೆ ಎಂದು ಅರಳು ಹುರಿದಂತೆ ಮಾತನಾಡಿದ ಅಜ್ಜನ ದನಿ ತಗ್ಗಿರಲಿಲ್ಲ. ಕಣ್ಣು ಸ್ವಲ್ಪ ಮಂದವಾದರೂ ಕಿವಿ ಹಿತ್ತಾಳೆ.ಇಂಥ ಗುಡ್ಡಜ್ಜನನ್ನು ಕಾಣಲು ತಾಲ್ಲೂಕಿನ ಹಾಲ್ಕುರಿಕೆಗೆ ಹೋದಾಗ ಮೊಮ್ಮಗನ ಹೊಲದ ಮರದ ಕೆಳಗೆ ಕುಳಿತಿದ್ದರು. ತಾನೇ ಮಾಡಿದ ಕೊಳಲನ್ನು ಬೊಚ್ಚು ಬಾಯಲ್ಲಿ ಉಸಿರು ಸೋರದಂತೆ ಬಿಗಿ ಹಿಡಿದು ಊದುತ್ತಿದ್ದ ಅಜ್ಜನ ಸುತ್ತ ಮುಮ್ಮಕ್ಕಳು ಕಿವಿ ಅಗಲಿಸಿದ್ದವು. ಪೌರಾಣಿಕ ನಾಟಕ, ಯಕ್ಷಗಾನ, ಹಳೆ ಸಿನೆಮಾ ಹಾಡು ಸುಶ್ರಾವ್ಯವಾಗಿ ಹೊರ ಹೊಮ್ಮುತ್ತಿದ್ದವು. ಕೊಳಲು ಇಳಿಸಿದ ಅಜ್ಜ `ಇದಿಲ್ಲದಿದ್ದರೆ ಕಾಲ ಕಳೆಯುವುದು ಕಷ್ಟ~ ಎಂದು ಹೇಳಿ ಅತ್ಯುತ್ಸಾಹದಿಂದ ಮಾತಿಗೆ ಇಳಿದರು.ಸುಮಾರು 110 ವರ್ಷ ದಾಟಿದ ಅಜ್ಜನ ತತ್ವ, ತಮಾಷೆ, ಅನುಭವ, ತಿಂದುಂಡ ನೋವು-ನಲಿವಿನ ಮಾತು ಚಿಲುಮೆ. ಆಯಸ್ಸಿನ ಬಗ್ಗೆ ಕೇಳಿದ್ದೇ ತಡ `ಹೊಟ್ಟೆ ತುಂಬ ಮುದ್ದೆ ಊಟ, ರಟ್ಟೆ ತುಂಬಾ ಕೆಲಸ, ಮನಸ್ಸು ಮಾಗಿಸೋಕೆ ಒಂದಷ್ಟು ವಾದ್ಯಗೀದ್ಯ~ ಎಂದು ಗುಟ್ಟು ಬಿಚ್ಚಿಟ್ಟರು.ಹಾಲ್ಕುರಿಕೆ ಗ್ರಾಮದ ನರಸಯ್ಯ ಎಂಬುವರಿಗೆ ಏಕೈಕ ಮಗನಾಗಿ ಹುಟ್ಟಿದ ಗುಡ್ಡಜ್ಜನಿಗೆ ಕಣ್ಣು ಬಿಡುತ್ತಲೇ ಗಂಡಾಂತರ ಕಾದಿತ್ತಂತೆ. ಮೂಲ ನಕ್ಷತ್ರದಲ್ಲಿ ಹುಟ್ಟಿರೋದ್ರಿಂದ ಹೆತ್ತವರಿಗೆ ಆಪತ್ತು ಎಂದು ಯಾರೋ ಶಾಸ್ತ್ರದವರು ಹೇಳಿದ್ದಕ್ಕೆ ಹೆತ್ತವರು ಮಗನ ಆಸಕ್ತಿ ತೊರೆದಿದ್ದರಂತೆ. ಆದರೆ ಹಟ್ಟಿ ಅನುಭವಸ್ಥರು `ಇಂಥದ್ದಕ್ಕೇ ಆಯಸ್ಸು ಜಾಸ್ತಿ, ಚೆನ್ನಾಗಿ ಸಾಕಿ ಎಂದು ಹೇಳಿದ್ದಕ್ಕೆ ನಾನು ಬದುಕುಳಿದೆ. ಇಷ್ಟು ಬಾಳಿದ್ದೇನೆ. ಅವ್ವ-ಅಪ್ಪನೂ ತೀರಾ ವಯಸ್ಸಾಗಿಯೇ ಸತ್ತಿದ್ದರು ಎಂದು ಹೇಳಿದ ಬುಡ್ಡಜ್ಜ ಒಂದು ರೀತಿ ಜನಪದ ಅಧ್ಯಾತ್ಮಿಕ ಜೀವಿ. ಶಾಲೆ ಮೆಟ್ಟಿಲು ಕಾಣದಿದ್ದರೂ ಇಂದಿನ ಎಡವಟ್ಟುಗಳನ್ನು ಬಿಚ್ಚಿ ಒದರುವ ಲೋಕತತ್ವಜ್ಞಾನಿ.ತನ್ನ ಅಪ್ಪನಿಂದ ಬಳುವಳಿ ಬಂದ ಅರೆ ಮತ್ತು ಮೌರಿ ಕಲಿತು ಜೀವನ ಆರಂಭಿಸಿದ ಗುಡ್ಡಜ್ಜ ಅದಕ್ಕೇ ಅಂಟಿ ಕೂರಲಿಲ್ಲ. ಮರಗೆಲಸವನ್ನು ಆಸಕ್ತಿಯಿಂದ ಕಲಿತು ಕುಶಲತೆ ಸಂಪಾದಿಸಿದವರು. ಮರದಲ್ಲಿ ಗೊಂಬೆ, ಕುಂಕುಮ ಬಟ್ಟಲು, ಚಕ್ಕುಲಿ ಓಳು ಮಾಡುವುದರಿಂದ ಹಿಡಿದು ಯಾವ ಕುಶಲಕರ್ಮಿಗೂ ಕಡಿಮೆ ಇಲ್ಲದಂತೆ ಮನೆ ಕಟ್ಟುವುದನ್ನು ಕಲಿತ ಅಜ್ಜನಿಗೆ ಯಾವತ್ತೂ ಬದುಕು ಕಷ್ಟ ಎನಿಸಲಿಲ್ಲವಂತೆ.ಐದು ಹೆಣ್ಣು, ನಾಲ್ವರು ಗಂಡು ಮಕ್ಕಳು. ಇದರಲ್ಲಿ ಇಬ್ಬರು ಗಂಡು ಮಕ್ಕಳು ಮೃತಪಟ್ಟಿದ್ದಾರೆ. ಮೊದಲ ಮಗನಿಗೆ ಸೊಸೆ ಬಂದಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಮೊಮ್ಮಕ್ಕಳು, ಮುಮ್ಮಕ್ಕಳು ಇದ್ದಾರೆ. ಸುಮಾರು ನಾಲ್ಕು ಕಿಮೀ ದೂರದಲ್ಲಿರುವ ಮೊಮ್ಮಗನ ಹೊಲಕ್ಕೆ ನಡೆದೆ ಹೋಗುತ್ತಾರೆ. ಶಾಲೆಯ ಕಾರ್ಯಕ್ರಮಗಳಲ್ಲಿ ಗಾಂಧಿ ವೇಷ ಹಾಕಿ, ಕೊಳಲು ಊದಿ ಮಕ್ಕಳೊಂದಿಗೆ ಬೆರೆಯುತ್ತಾರೆ. ನೂರಾರು ಹಾಡು ನಾಲಿಗೆ ತುದಿಯಲ್ಲಿವೆ. ಮಾತು-ಮಾತಿಗೂ ತಮಾಷೆ ಮಾಡುವ ಅಜ್ಜನ ಗುಟ್ಟೂ ಅದರಲ್ಲೇ ಅಡಗಿದೆ ಎಂದೆನಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry