ಮೂಲ-ವಲಸಿಗರ ಕಂದಕವೇ ಸವಾಲು

7

ಮೂಲ-ವಲಸಿಗರ ಕಂದಕವೇ ಸವಾಲು

Published:
Updated:

ಕೊಪ್ಪಳ: ಹಾಲಿ ಶಾಸಕ ಸಂಗಣ್ಣ ಕರಡಿ ಅವರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನೀಡುವುದು ಬಿಜೆಪಿಯ ಮೂಲ ಕಾರ್ಯಕರ್ತರಿಗೆ ಇಷ್ಟವಿಲ್ಲ. ಆದರೆ, ಅವರ ಕಟ್ಟಾ ಬೆಂಬಲಿಗರಿಗೆ ಸಂಗಣ್ಣ ಅವರು ಕಾಂಗ್ರೆಸ್ ಸೇರುವುದು ಅಷ್ಟಾಗಿ ಇಷ್ಟವಿಲ್ಲ. ಒಂದು ವೇಳೆ ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿದರೂ ಈ ಹಿಂದಿನ ಹಾಗೆ ಎಲ್ಲ ಸಮುದಾಯಗಳ ಜನರ ಬೆಂಬಲ ಸಿಗುವುದೇ ಎಂಬ ಅನುಮಾನವೂ ಇದೆ.ಪಕ್ಷದಲ್ಲಿನ ಇಂತಹ ಆಂತರಿಕ ಬೇಗುದಿಯ ನಡುವೆ ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಡಿ. 24ರಂದು ನಗರಕ್ಕೆ ಆಗಮಿಸಿ, ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ.ಕಳೆದ ವರ್ಷ ವರ್ಷ ಜೆಡಿಎಸ್‌ಗೆ ವಿದಾಯ ಹೇಳಿ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಸಂಗಣ್ಣ ಕರಡಿ ಸೆಪ್ಟಂಬರ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಗೆದ್ದು ಬಂದಿದ್ದರು. ಆ ದಿನಗಳಿಂದಲೇ ಕ್ರಮೇಣ ಬಿಜೆಪಿಯಲ್ಲಿ ಮೂಲ ಕಾರ್ಯಕರ್ತರು, ವಲಸಿಗರು ಎಂಬ ಬಿರುಕು ಕಾಣಿಸಿಕೊಂಡಿತು ಎಂಬುದನ್ನು ಪಕ್ಷದ ಕಾರ್ಯಕರ್ತರು ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ.ಅದರಲ್ಲೂ, ಕ್ಷೇತ್ರದಲ್ಲಿ ನಡೆಯುತ್ತಿರುವ ಬಹುತೇಕ ಕಾಮಗಾರಿಗಳನ್ನು ಸಂಗಣ್ಣ ಅವರು ತಮ್ಮ ಬೆಂಬಲಿಗರಿಗೆ ಗುತ್ತಿಗೆ ಕೊಡಿಸುವಲ್ಲಿ ಕಾಳಜಿ ತೋರಿದ್ದಾರೆ. ಗುತ್ತಿಗೆದಾರರೂ ಆಗಿರುವ ಪಕ್ಷದ ಮೂಲ ಕಾರ್ಯಕರ್ತರನ್ನು ಸಂಪೂರ್ಣ ಮೂಲೆ ಗುಂಪು ಮಾಡಲಾಗಿದೆ ಎಂಬ ಅಸಮಾಧಾನವನ್ನೂ ಹೊರಹಾಕುತ್ತಿದ್ದಾರೆ. ಆದರೆ, ಶಾಸಕ ಸಂಗಣ್ಣ ಅವರ ಆಪ್ತ ವಲಯ ಮಾತ್ರ ಈ ಮಾತನ್ನು ಒಪ್ಪಿಕೊಳ್ಳುತ್ತಿಲ್ಲ.ಇನ್ನು, ನಗರ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ಸಂಗಣ್ಣ ಸಾಕಷ್ಟು ಅನುದಾನ ತಂದಿದ್ದಾರೆ. ಅವರ ನಿಷ್ಠಾವಂತ ಮತದಾರರಲ್ಲದೇ, ಬಿಜೆಪಿಯ ಪಾರಂಪರಿಕ ಮತದಾರರ ಒಲವು ಇದೆ. ಹೀಗಾಗಿ ಸಂಗಣ್ಣ ಅವರಿಗೆ ಪಕ್ಷದ ಟಿಕೆಟ್ ನೀಡಬೇಕು ಎಂಬುದು ಅವರ ನಿಷ್ಠರಾಗಿರುವ ಕಾರ್ಯಕರ್ತರ ಒತ್ತಾಸೆಯಾಗಿದೆ. ಆದರೆ, ತಮ್ಮನ್ನು ಮೂಲೆ ಗುಂಪು ಮಾಡಲಾಗಿದೆ. ಜೊತೆಗೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಬಹುತೇಕ ನಿರ್ಧರಿಸಿರುವ ಸಂಗಣ್ಣ ಅವರಿಗೆ ಆ ಪಕ್ಷದಿಂದಲೂ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂಬ ಮಾತು ಮೂಲ ಕಾರ್ಯಕರ್ತರದು. ಹೀಗಾಗಿ ಒಂದು ವೇಳೆ ಸಂಗಣ್ಣಗೆ ಬಿಜೆಪಿಯಿಂದ ಟಿಕೆಟ್ ನೀಡುವ ನಿರ್ಧಾರ ಕೈಗೊಂಡಿದ್ದೇ ಆದರೆ, ಆ ಪಕ್ಷದವರೇ ಅವರನ್ನು ಸೋಲಿಸಲು ನಡೆಸುವ ಪ್ರಯತ್ನಕ್ಕೆ ತಡೆಯೊಡ್ಡುವ ಸವಾಲು ಪಕ್ಷದ ವರಿಷ್ಠರ ಮುಂದಿದೆ ಎಂದು ಹೇಳಲಾಗುತ್ತದೆ.ಇನ್ನು, ಕೆಲ ಕಾರ್ಯಕರ್ತರು ಹೇಳುವ ಪ್ರಕಾರ, ಸಂಗಣ್ಣ ಅವರನ್ನು ಪಕ್ಷದಿಂದಲೇ ಕಣಕ್ಕಿಳಿಸಬೇಕು ಎಂಬುದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಗಿರೇಗೌಡರ ಇರಾದೆ. ಒಂದು ವೇಳೆ ಗಿರೇಗೌಡರಿಗೆ ಗಂಗಾವತಿಯಿಂದ ಸ್ಪರ್ಧಿಸುವ ಅವಕಾಶ ಸಿಕ್ಕಿದ್ದೇ ಆದಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಇರಕಲ್ಲಗಡ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಅನುಕೂಲ ಪಡೆಯುವ ಲೆಕ್ಕಾಚಾರವಿದೆ. ಈ ಕ್ಷೇತ್ರದಲ್ಲಿ ಸಂಗಣ್ಣ ಅವರಿಗಿರುವ ಪ್ರಭಾವ ತಮ್ಮ ವರವಾಗಲಿದೆ ಎಂಬುದು ಗಿರೇಗೌಡರ ನಿಲುವು ಎಂದೂ ಇದೇ ಕಾರ್ಯಕರ್ತರು ಹೇಳುತ್ತಿದ್ದಾರೆ.ಇನ್ನು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೂತನ ಪಕ್ಷವು ಕ್ಷೇತ್ರದಲ್ಲಿರುವ ಲಿಂಗಾಯತ ಸಮುದಾಯದ ಮತಗಳನ್ನು ಒಡೆಯುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಇನ್ನು, ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ್ ಅವರೇ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಟಿಕೆಟ್ ಆಕಾಂಕ್ಷಿ. ಹೀಗಾಗಿ ಕುರುಬ ಸಮಾಜದ ಮತಗಳು ಸಹ ನಿರ್ಣಾಯಕ ಪಾತ್ರ ವಹಿಸುತ್ತವೆ.ಕ್ಷೇತ್ರದಲ್ಲಿ ಕುರುಬ ಸಮಾಜದಷ್ಟೆ ಮಾದಿಗ ಸಮಾಜದ ಮತಗಳು ಇರುವುದರಿಂದ ಆ ಮತಗಳನ್ನು ಯಾವ ಪಕ್ಷಗಳೂ ಕಡೆಗಣಿಸುವಂತಿಲ್ಲ. ಅಲ್ಲದೆ ಕ್ಷೇತ್ರದಲ್ಲಿರುವ ಎಸ್.ಟಿ. ಮತಗಳ ಮೇಲೆ ಬಿ.ಎಸ್.ಆರ್ ಕಾಂಗ್ರೆಸ್ ಕಣ್ಣಿಟ್ಟಿರುವುದು ಗಮನಾರ್ಹ ಸಂಗತಿ. ಈಚೆಗಷ್ಟೇ ಜೆಡಿಎಸ್‌ಗೆ ಸೇರ್ಪಡೆಗೊಂಡಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್ ಅಭ್ಯರ್ಥಿ ಪಾಲಾಗದಂತೆ ತಡೆಯುವಲ್ಲಿ ಎಷ್ಟರ ಮಟ್ಟಿಗೆ ಸಫಲರಾಗುತ್ತಾರೆ ಎಂಬುದು ಮುಖ್ಯ.

ಇವೇ ಸವಾಲುಗಳು ಸಹ ಬಿಜೆಪಿ ಅಭ್ಯರ್ಥಿಯ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದು ಖಚಿತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry