ಮೂಲ ವಿಜ್ಞಾನದಿಂದ ತಂತ್ರಜ್ಞಾನ ಪ್ರಗತಿ

7

ಮೂಲ ವಿಜ್ಞಾನದಿಂದ ತಂತ್ರಜ್ಞಾನ ಪ್ರಗತಿ

Published:
Updated:
ಮೂಲ ವಿಜ್ಞಾನದಿಂದ ತಂತ್ರಜ್ಞಾನ ಪ್ರಗತಿ

ಮಾನ್ವಿ: ಇಂದಿನ ತಂತ್ರಜ್ಞಾನದ ಬೆಳವಣಿಗೆಗೆ ಮೂಲವಿಜ್ಞಾನವೇ ಕಾರಣ. ಅದಾಗ್ಯೂ ಮೂಲವಿಜ್ಞಾನವನ್ನು ನಿರ್ಲಕ್ಷಿಸಲಾಗುತ್ತಿದೆ. ಶಿಕ್ಷಕರು ಹಾಗೂ ಪಾಲಕರು ತಮ್ಮ ಮಕ್ಕಳಿಗೆ ಮೂಲ ವಿಜ್ಞಾನ ಕಲಿಸಲು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ರಾಯಚೂರು ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಪ್ರೊ. ಸಿ.ಡಿ.ಪಾಟೀಲ್ ಹೇಳಿದರು.ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಮಟ್ಟದ ಪ್ರೌಢಶಾಲಾ ವಿಜ್ಞಾನ ಮೇಳದಲ್ಲಿ ‘ಮೂಲ ವಿಜ್ಞಾನದ ಅವಶ್ಯಕತೆ’ ಕುರಿತು ಅವರು ಉಪನ್ಯಾಸ ನೀಡಿದರು.ಇಂದಿನ ಕಂಪ್ಯೂಟರ್, ಮೊಬೈಲ್ ಸೇರಿದಂತೆ ಹಲವು ಉಪಕರಣಗಳ ತಂತ್ರಜ್ಞಾನ ಮೂಲವಿಜ್ಞಾನದ ಶೋಧನೆಯಾಗಿದೆ. ಮೂಲವಿಜ್ಞಾನದಿಂದ ಮಾತ್ರ ಒಳ್ಳೆಯ ತಂತ್ರಜ್ಞಾನದ ಸೃಷ್ಟಿ ಸಾಧ್ಯ. ಈ ಕುರಿತು ಶಿಕ್ಷಕರು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.ಮುಂದಿನ ದಿನಗಳಲ್ಲಿ ಮೂಲ ವಿಜ್ಞಾನ ಕ್ಷೇತ್ರದಲ್ಲಿ ವಿಪುಲವಾದ ಅವಕಾಶಗಳು ಬರಲಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡುವತ್ತ ಪಾಲಕರು ಮತ್ತು ಬೋಧಕರು ಗಮನ ಹರಿಸಬೇಕು ಎಂದು ಸಲಹೆ ಮಾಡಿದರು.ಶಾಸಕ ಜಿ.ಹಂಪಯ್ಯ ನಾಯಕ ವಿಜ್ಞಾನ ಮೇಳ ಉದ್ಘಾಟಿಸಿದರು. ಜಿ.ಪಂ. ಸದಸ್ಯ ಹನುಮೇಶ ಮದ್ಲಾಪುರ, ಎಪಿಎಂಸಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಯಾದವ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಾಂಜನೇಯ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಗದ್ದೆಪ್ಪ, ಬಿಆರ್‌ಸಿ ಸಮನ್ವಯಾಧಿಕಾರಿ ಚಂದ್ರಶೇಖರ, ಡಯಟ್ ಪ್ರಾಚಾರ್ಯ ಜಿ.ಎಚ್.ಈರಣ್ಣ ವೇದಿಕೆಯಲ್ಲಿದ್ದರು.ನಂತರ ಅಗಸ್ತ್ಯ ಫೌಂಡೇಶನ್‌ನ ಸಿಬ್ಬಂದಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಡೆಸಿಕೊಟ್ಟರು.ಗಂಗಾ ಹಾಗೂ ಶ್ವೇತಾ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ವಲಿಬಾಬು ನಿರೂಪಿಸಿ ವಂದಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry