ಗುರುವಾರ , ಆಗಸ್ಟ್ 22, 2019
21 °C
ಐವರು ಉದ್ಯಮಿಗಳಿಗೆ `ವಾಣಿಜ್ಯ ರತ್ನ' ಪ್ರಶಸ್ತಿ ಪ್ರದಾನ

`ಮೂಲ ಸೌಕರ್ಯಗಳ ಅಭಿವೃದ್ಧಿ ಅವಶ್ಯ'

Published:
Updated:

ಹುಬ್ಬಳ್ಳಿ:  `ವಾಣಿಜ್ಯ ನಗರಿ ಎನಿಸಿರುವ ಹುಬ್ಬಳ್ಳಿಯಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾದ ಮೂಲ ಸೌಕರ್ಯಗಳನ್ನು ವಿಸ್ತರಿಸುವ ಅಗತ್ಯ ಇದೆ' ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಪ್ರವಾಸೋದ್ಯಮ) ಅರವಿಂದ ಜಾಧವ ಹೇಳಿದರು.ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ಹಾಗೂ `ವಾಣಿಜ್ಯ ರತ್ನ' ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಏಕೀಕರಣಕ್ಕಿಂತ ಮುಂಚೆ ಹುಬ್ಬಳ್ಳಿಯು ಮುಂಬೈ ಪ್ರಾಂತ್ಯದ ಎರಡನೇ ವಾಣಿಜ್ಯ ನಗರಿ ಆಗಿತ್ತು. ಏಕೀಕರಣದ ನಂತರ ಆ ಸ್ಥಾನ ಹೊರಟುಹೋಗಿದೆ. ಇಲ್ಲಿದ್ದ ಏಜೆನ್ಸಿಗಳು ಮುಂಬೈ, ಬೆಂಗಳೂರಿಗೆ ಹೊರಟಿವೆ. ಹೀಗಾಗಿ ಇಲ್ಲಿ ವಾಣಿಜ್ಯದ ಜೊತೆಜೊತೆಗೆ ಪ್ರವಾಸೋದ್ಯಮಕ್ಕೆ ಅಗತ್ಯವಾದ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕಿದೆ' ಎಂದು ನುಡಿದರು.`ಪ್ರವಾಸೋದ್ಯಮದಲ್ಲಿ ಕರ್ನಾಟಕ ದೇಶದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದು, ವರ್ಷಕ್ಕೆ ದೇಶದ 9 ಕೋಟಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದೇ ಅವಧಿಯಲ್ಲಿ 5 ಲಕ್ಷ ವಿದೇಶಿ ಪ್ರವಾಸಿಗರು ರಾಜ್ಯದ ಪ್ರೇಕ್ಷಣೀಯ ಸ್ಥಳಗಳಿಗೆ ಬರುತ್ತಾರೆ. ಗೋವಾಕ್ಕೆ ಬಂದ ಬಹುತೇಕ ಪ್ರವಾಸಿಗರು ಹುಬ್ಬಳ್ಳಿಯ ಮೂಲಕ ಹಂಪಿಗೆ ತೆರಳಿ ಅಲ್ಲಿಂದ ಹೈದರಾಬಾದ್‌ಗೆ ಹೋಗುತ್ತಾರೆ.ಇಷ್ಟು ಮಂದಿ ಈ ನಗರದ ಮೂಲಕ ಹಾದು ಹೋಗುತ್ತಿದ್ದರೂ ಅವರನ್ನು ಸೆಳೆಯುವ ಪ್ರಯತ್ನವಾಗಿಲ್ಲ. ಕುಟುಂಬಗಳು ಉಳಿದುಕೊಳ್ಳಲು ಯೋಗ್ಯವಾದ ಹೋಟೆಲ್‌ಗಳು ಇಲ್ಲಿಲ್ಲ. ದೇಶದ ಪ್ರಮುಖ ನಗರಗಳಿಂದ ವಿಮಾನಯಾನ ಸೌಲಭ್ಯಗಳಿಲ್ಲ. ಇವುಗಳನ್ನು ಅಭಿವೃದ್ಧಿ ಪಡಿಸುವತ್ತ ಉದ್ಯಮಿಗಳು ಆಸಕ್ತಿ ವಹಿಸಬೇಕು' ಎಂದು ಸಲಹೆ ನೀಡಿದರು.`ಹಾಸ್ಪಿಟಾಲಿಟಿ, ಆಹಾರೋದ್ಯಮ ಕ್ಷೇತ್ರವು ಪ್ರತಿವರ್ಷ ಶೇ 40ರಷ್ಟು ಪ್ರಗತಿ ಕಾಣುತ್ತಿದೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳಿವೆ. ಉದ್ಯಮಿಗಳು ಈ ಕ್ಷೇತ್ರಗಳತ್ತ ಗಮನ ಹರಿಸಬೇಕು. ಪ್ರವಾಸೋದ್ಯಮ ಇಲಾಖೆಯಿಂದ ದೊರೆಯುವ ಸಲವತ್ತುಗಳನ್ನು ಬಳಸಿಕೊಳ್ಳಬೇಕು' ಎಂದು ಅವರು ಕಿವಿಮಾತು ಹೇಳಿದರು.`ಹುಬ್ಬಳ್ಳಿಯ ವಿಮಾನನಿಲ್ದಾಣ ರನ್‌ವೇ ವಿಸ್ತರಣೆ ಕಾಮಗಾರಿ ನಂತರ ಇಲ್ಲಿ ಕಾರ್ಗೋ ವಿಮಾನ ಸೇವೆ ಆರಂಭ ಸಾಧ್ಯವಾಗಲಿದೆ. ಈ ಕುರಿತು ವಿಮಾನ ನಿಲ್ದಾಣದ ಅಧಿಕಾರಿಗಳ ಜೊತೆ ಮಾತುಕತೆ ನಡೆದಿದೆ' ಎಂದು ತಿಳಿಸಿದರು.`ಕಾರವಾರವನ್ನು ಕೇಂದ್ರವಾಗಿರಿಸಿಕೊಂಡು ಪ್ರವಾಸೋದ್ಯಮ ಪ್ಯಾಕೇಜ್, ಹುಬ್ಬಳ್ಳಿಯಿಂದ ಹಂಪಿ-ಪಟ್ಟದಕಲ್ಲು ಮೊದಲಾದ ತಾಣಗಳಿಗೆ ಪ್ರಯಾಣ, ಹುಬ್ಬಳ್ಳಿಯಿಂದ ತಿರುಪತಿಗೆ ನೇರ ಪ್ರವಾಸದ ಪ್ಯಾಕೇಜ್ ಹಾಗೂ ಹುಬ್ಬಳ್ಳಿಯಲ್ಲಿ ಕೆಎಸ್‌ಟಿಡಿಸಿ ಕಚೇರಿ ಆರಂಭ ಸೇರಿದಂತೆ ಕೆಸಿಸಿಐ ಇಟ್ಟಿರುವ ಬೇಡಿಕೆಗಳನ್ನು ಪರಿಶೀಲಿಸಲಾ ಗುವುದು' ಎಂದು ಭರವಸೆ ನೀಡಿದರು.`ಉಚಿತ'ಕ್ಕೆ ಬೆಲೆ ಇಲ್ಲ: `ಇಂದು ಉಚಿತವಾಗಿ ನೀಡುವ ಯಾವುದೇ ಸರಕಿಗೆ ಬೆಲೆ ಇಲ್ಲ. ಬೌದ್ಧಿಕತೆಯನ್ನು ಉದ್ಯಮವನ್ನಾಗಿ ಪರಿವರ್ತಿಸು ವವನೇ ಯಶಸ್ವಿ ಉದ್ಯಮಿ ಆಗುತ್ತಿದ್ದಾನೆ' ಎಂದು ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಡಾ. ಎಚ್.ಬಿ. ವಾಲೀಕಾರ ಅಭಿಪ್ರಾಯಪಟ್ಟರು.`ಅಕ್ಷರ-ಮಾತನ್ನು ಹಣವನ್ನಾಗಿ ಪರಿವರ್ತಿಸುವ ಕಾಲ ಇದು. ಹೀಗಾಗಿ ಪುಸ್ತಕೋದ್ಯಮವು ಒಂದು ದೊಡ್ಡ ಉದ್ದಿಮೆಯಾಗಿ ಬೆಳೆಯುತ್ತಿದೆ. ಚೇತನ್ ಭಗತ್‌ರಂತಹ ಲೇಖಕರು ಅಕ್ಷರದಿಂದಲೇ ಕೋಟಿಗಟ್ಟಲೆ ಹಣ ಸಂಪಾದಿಸುತ್ತಿದ್ದಾರೆ. ಕನ್ನಡದಲ್ಲಿ ಎಸ್.ಎಲ್. ಭೈರಪ್ಪನಂತಹವರಿಗೆ ಮಾತ್ರ ಇದು ಸಾಧ್ಯವಾಗುತ್ತಿದೆ' ಎಂದರು.ಪ್ರಶಸ್ತಿ ಪ್ರದಾನ

ಹುಬ್ಬಳ್ಳಿಯ ಕರ್ನಾಟಕ ಕನ್ವೇಯರ್ಸ್ ಅಂಡ್ ಸಿಸ್ಟಮ್ಸ ಪ್ರೈ. ಲಿ. ನ ಮುಖ್ಯಸ್ಥ ಎಂ.ವಿ. ಕರಮರಿ, ಇಂಟರ್‌ಕಾಂಟಿನೆಂಟಲ್ ಸೀಡ್ ಎಕ್ಸ್‌ಪೋರ್ಟ್ಸ್ ಮಾಲೀಕ ರಾಘವೇಂದ್ರ ಪೋಣಾರ್ಕರ, ಶಿರಸಿಯ ಪೂರ್ಣಿಮಾ ಕೋಕೋನಟ್ ಪ್ರೊಡಕ್ಟ್ಸ್ ಪ್ರೈ. ಲಿ. ಮಾಲೀಕ ಅಶೋಕ ಹಬೀಬ, ಕೊಪ್ಪಳದ ಶಂಕರ ಟ್ರೇಡಿಂಗ್ ಕಂಪನಿಯ ಪ್ರಭು ಹೆಬ್ಬಾಳ ಹಾಗೂ ವಿಜಾಪುರದ ಅನಿಲ್‌ಕುಮಾರ್ ಅಂಡ್ ಕಂಪೆನಿ ಮುಖ್ಯಸ್ಥ ಪ್ರಭು ಅಣೆಪ್ಪನವರ ಅವರಿಗೆ ಸಂಸ್ಥೆ ವತಿಯಿಂದ `ವಾಣಿಜ್ಯ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಂಸ್ಥೆಯ ಅಧ್ಯಕ್ಷ ಎನ್.ಪಿ. ಜವಳಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ವಸಂತ ಲದವಾ, ಅಂದಾನಪ್ಪ ಸಜ್ಜನರ, ಮಹೇಂದ್ರ ಲದ್ದಡ, ಗೌರವ ಕಾರ್ಯದರ್ಶಿ ವಿಶ್ವನಾಥ ಗಿಣಿಮಾವ, ಸಿ.ಎನ್.ಕರಿಕಟ್ಟಿ, ಸಂಸ್ಥಾಪಕರ ದಿನಾಚರಣೆ ಸಮಿತಿ ಅಧ್ಯಕ್ಷ ಎಸ್.ಎಫ್. ಗದ್ದಿಕೇರಿ, ಮಾಜಿ ಅಧ್ಯಕ್ಷರಾದ ಸಿ.ಬಿ. ಪಾಟೀಲ, ಡಿ.ಎಸ್. ಗುಡ್ಡೋಡಗಿ, ಮದನ ದೇಸಾಯಿ, ವಿ.ಪಿ. ಲಿಂಗನಗೌಡರ, ಎಂ.ಸಿ. ಹಿರೇಮಠ ಇತರರು ಪಾಲ್ಗೊಂಡಿದ್ದರು.

Post Comments (+)