ಮೂಲ ಸೌಕರ್ಯವಿಲ್ಲದ ಬಡಾವಣೆ: ಶಾಸಕ ಬೇಸರ

7

ಮೂಲ ಸೌಕರ್ಯವಿಲ್ಲದ ಬಡಾವಣೆ: ಶಾಸಕ ಬೇಸರ

Published:
Updated:
ಮೂಲ ಸೌಕರ್ಯವಿಲ್ಲದ ಬಡಾವಣೆ: ಶಾಸಕ ಬೇಸರ

ಕೆ.ಆರ್.ನಗರ: ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಖಾಸಗಿ ಬಡಾವಣೆಗಳು ಕನಿಷ್ಠ ಮೂಲ ಸೌಕರ್ಯಗಳನ್ನೂ ಹೊಂದಿಲ್ಲ. ಮಾದರಿ ಪಟ್ಟಣವಾದ ಕೃಷ್ಣರಾಜನಗರಕ್ಕೆ ಇಂತಹ ಬಡಾವಣೆಗಳು ಕಪ್ಪು ಚುಕ್ಕೆಯಾಗುತ್ತಿವೆ ಎಂದು ಶಾಸಕ ಸಾ.ರಾ.ಮಹೇಶ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದರು.ಪಟ್ಟಣದ ಪುರಸಭೆ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ ಕೆ.ಆರ್.ನಗರ ಪುರಸಭೆ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಗತ್ಯ ಮೂಲ ಸೌಲಭ್ಯಗಳು ಇಲ್ಲದ ನೂತನ ಬಡಾವಣೆಗಳನ್ನು ಪುರಸಭೆ ವ್ಯಾಪ್ತಿಗೆ ಸೇರಿಸಿಕೊಳ್ಳಬಾರದು. ಖಾಸಗಿ ಬಡಾವಣೆಗಳ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ಹಣ ಸುರಿದರೂ ಅಭಿವೃದ್ಧಿಯಾಗುತ್ತಿಲ್ಲ. ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಖಾಸಗಿ ಬಡಾವಣೆಗಳು ಕನಿಷ್ಠ 40 ಅಡಿಗಳ ರಸ್ತೆ, ಸಮರ್ಪಕ ಕುಡಿಯುವ ನೀರು, ವಿದ್ಯುತ್ ಹೊಂದಿರಬೇಕು ಎಂದು ಹೇಳಿದರು.ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಪಟ್ಟಣದ ಕೃಷ್ಣರಾಜೇಂದ್ರ ಕ್ರೀಡಾಂಗಣದಲ್ಲಿ ರೂ.1.60 ಕೋಟಿಯಲ್ಲಿ ಈಜುಕೊಳ, ರೂ.5 ಕೋಟಿ ವೆಚ್ಚದಲ್ಲಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ ಕಲಾಭವನ ನಿರ್ಮಾಣ ಮಾಡಲಾಗುತ್ತದೆ ಎಂದರು. ಪುರಸಭೆ ಅಧ್ಯಕ್ಷ ತಮ್ಮನಾಯಕ, ಕಾಗಿನೆಲೆ ಕನಕಗುರು ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ಗಾವಡಗೆರೆ ಮಠದ ನಟರಾಜ ಸ್ವಾಮೀಜಿ, ಡೋರ‌್ನಹಳ್ಳಿ ಫಾದರ್ ಗಿಲ್ಬರ್ಟ್ ಡಿಸಿಲ್ವಾ, ಜಾಮೀಯಾ ಮಸೀದಿ ಮೌಲಾನಾ ಇಬ್ರಾಹಿಂ ರಜಾ ಸಾಹೇಬ್, ಕೆ.ಪಿ.ಪ್ರಭುಶಂಕರ್ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷರು ಮತ್ತು ಮಾಜಿ ಸದಸ್ಯರನ್ನು ಸನ್ಮಾನಿಸಲಾಯಿತು.ಇದಕ್ಕೂ ಮೊದಲು ವಿವಿಧ ಶಾಲಾ ಮಕ್ಕಳು, ಕಲಾ ತಂಡಗಳು, ಪುರಸಭೆ ಸದಸ್ಯರು, ಮುಖಂಡರು ಪುರಸಭೆ ಕಚೇರಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ತೆರಳಿದರು. ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಪ್ರತಿಮೆ ಅನಾವರಣ ಮಾಡಲಾಯಿತು.

ತರಕಾರಿ ಮಾರುಕಟ್ಟೆ ಮತ್ತು ಮಟನ್ ಮಾರುಕಟ್ಟೆ ಉದ್ಘಾಟಿಸಲಾಯಿತು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ರವಿಶಂಕರ್, ನವನಗರ ಕೋ-ಆಪರೇವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ವಿ.ದೇವರಹಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ವೈ.ಆರ್.ಪ್ರಕಾಶ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಶಂಕರ್, ಬಿಜೆಪಿ ಮುಖಂಡ ದೊಡ್ಡಸ್ವಾಮೇಗೌಡ, ಡಾ.ಮೆಹಬೂಬ್ ಖಾನ್, ತಹಶೀಲ್ದಾರ್ ಡಿ.ಬಿ.ನಟೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಕೆ.ಚಿನ್ನಸ್ವಾಮಿ, ನಿವೃತ್ತ ಉಪನ್ಯಾಸಕ ಕೆ.ಆರ್.ಲಕ್ಕೇಗೌಡ, ಎಸ್.ಪಿ.ತಮ್ಮಯ್ಯ, ಸಾಹಿತಿ ತೇ.ಸಿ.ವಿಶ್ವೇಶ್ವರಯ್ಯ, ಡಾ.ಮಂಜುರಾಜ್, ಪುರಸಭೆ ಮುಖ್ಯಾಧಿಕಾರಿ ನಾಗಶೆಟ್ಟಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry