ಮಂಗಳವಾರ, ಜೂನ್ 15, 2021
20 °C
ತೀರದ ಮಲೆಕುಡಿಯ ಜನರ ಬವಣೆ

ಮೂಲ ಸೌಕರ್ಯ ಇಲ್ಲಿ ಮರೀಚಿಕೆ

ಪ್ರಜಾವಾಣಿ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ನಾಪೋಕ್ಲು: ತಡಿಯಂಡಮೋಳ್ ಬೆಟ್ಟವು ಕೊಡಗಿನ ಅತ್ಯಂತ ಎತ್ತರದ ಶಿಖರವೆಂಬ ಖ್ಯಾತಿಗೆ ಪಾತ್ರವಾಗಿದೆ. ಆದರೆ, ಆ ಬೆಟ್ಟದ ಸಾಲಿನಲ್ಲಿರುವ ಗಿರಿಜನ ಮಲೆಕುಡಿಯರ ಬದುಕು ಮಾತ್ರ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ.ಕೊಡಗಿನ ಮೂಲ ನಿವಾಸಿಗಳಾಗಿರುವ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ವಸತಿ ನಿರ್ಮಾಣ, ನೀರು ಪೂರೈಕೆ ರಸ್ತೆಗಳ ನಿರ್ಮಾಣ ಮುಂತಾದ ಹಲವು ಯೋಜನೆಗಳಿದ್ದರೂ, ಮೂಲ ಸೌಕರ್ಯಗಳು ದೊರಕದೆ ಅವರ ಪರಿಸ್ಥಿತಿ ಶೋಚನೀಯವಾಗಿದೆ.ಕಕ್ಕಬೆ ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಾದಂಡ ಅಬ್ಬಿಯ ಜಲಪಾತದ ಸಮೀಪ ಇರುವ ಕರಡಿಮೊಟ್ಟೆಯಲ್ಲಿ ಮಲೆಕುಡಿಯ ಜನಾಂಗದ ಹಲವು ಮನೆಗಳಿದ್ದು, ಸರ್ಕಾರದ ಸೌಲಭ್ಯಗಳು ಅವರ ಪಾಲಿಗೆ ಗಗನಕುಸುಮವಾಗಿ ಉಳಿದಿವೆ.

ಸುಮಾರು ಹತ್ತು ವರ್ಷಗಳ ಹಿಂದೆ ಗಿರಿಜನ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ (ಐಟಿಡಿಪಿ)  ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮಾಡಲಾದ ರಸ್ತೆಗಳು ಸಮರ್ಪಕವಾಗಿಲ್ಲದೆ ಇರುವುದರಿಂದ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ.ಸುಮಾರು 5 ಕಿ.ಮೀ. ದೂರದ ಈ ರಸ್ತೆಯಲ್ಲಿ ಮೋರಿಗಳನ್ನು ನಿರ್ಮಿಸದಿರುವುದರಿಂದ ಮಳೆಗಾಲದಲ್ಲಿ ರಸ್ತೆಗಳು ಮುಳುಗಡೆಯಾಗುತ್ತವೆ. ಆಗ ವಿದ್ಯಾರ್ಥಿಗಳು ಹಾಗೂ ನಿವಾಸಿಗಳು ಪರ್ಯಾಯ ದಾರಿಯಲ್ಲಿ ಸುತ್ತು ಬಳಸಿ ಹೋಗುವ ಅನಿವಾರ್ಯ ಪರಿಸ್ಥಿತಿ ಇದೆ.ಸಮರ್ಪಕ ಕುಡಿಯುವ ನೀರಿನ ಯೋಜನೆಯನ್ನು ಐಟಿಡಿಪಿಯಿಂದಲೇ ಮಾಡಿದ್ದು, ಕಾಮಗಾರಿ ಸಂಪೂರ್ಣ ಕಳಪೆಯಾಗಿರುವುದರಿಂದ ನೀರು ಸಂಗ್ರಹಕ್ಕೆ ನಿರ್ಮಿಸಿದ ಟ್ಯಾಂಕ್‌ಗಳು ಬಿರುಕು ಬಿಟ್ಟು ನಿಷ್ಪ್ರಯೋಜಕವಾಗಿವೆ. ಗ್ರಾಮೀಣ ಮಂದಿ  ತಮ್ಮ ವೆಚ್ಚದಲ್ಲೇ ನೀರಿನ ಪೈಪುಗಳನ್ನು ಅಳವಡಿಸಿಕೊಂಡು ನೈಸರ್ಗಿಕ ನೀರನ್ನು ಉಪಯೋಗಿಸುತ್ತಿದ್ದಾರೆ. ಆದರೆ, ಕಾಡು ಪ್ರಾಣಿಗಳ ಹಾವಳಿಯಿಂದ ನೀರಿಗೆ ತೊಡಕಾಗುತ್ತಿದೆ.ಇದುವರೆಗೆ ಅವರ ಮನೆಗಳಿಗೆ ವಿದ್ಯುತ್ ಭಾಗ್ಯ ಲಭಿಸಿಲ್ಲ. ಪೂರ್ವಜರ ಕಾಲದಿಂದಲೇ ಅಲ್ಪಸ್ವಲ್ಪ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿರುವ ಅವರಿಗೆ ಹಕ್ಕುಪತ್ರ ಭಾಗ್ಯ ಕೂಡ ಇದುವರೆಗೆ ದೊರೆತಿಲ್ಲ. ಕೂಲಿಯೇ ಜೀವನಕ್ಕೆ ಆಧಾರಾ.‘ಜನಪ್ರತಿನಿಧಿಗಳು ಚುನಾವಣೆ ಸಂದರ್ಭ ಮಾತ್ರ ಭೇಟಿ ನೀಡಿ ಆಶ್ವಾಸನೆಗಳನ್ನು ನೀಡುತ್ತಾರೆ. ಬಳಿಕ ನಮ್ಮನ್ನು ಕಡೆಗಣಿಸುತ್ತಾರೆ. ನಂತರ ಮುಂದಿನ ಚುನಾವಣೆಗೆ ಮಾತ್ರ ಹಾಜರಾಗುತ್ತಾರೆ. ನಮ್ಮ ಸಂಕಷ್ಟಗಳಿಗೆ ಯಾವುದೇ ಜನಪ್ರತಿನಿಧಿ ಸ್ಪಂದಿಸಿಲ್ಲ’ ಎಂದು ನಿರಾಶರಾಗಿ ನುಡಿಯುತ್ತಾರೆ ಕರಡಿ ಮೊಟ್ಟೆ ನಿವಾಸಿ ಕುಡಿಯರ ಬೋಜ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.