ಮೂಲ ಸೌಕರ್ಯ: ಬಂಡವಾಳ ಆಕರ್ಷಣೆಗೆ ಒತ್ತು

7

ಮೂಲ ಸೌಕರ್ಯ: ಬಂಡವಾಳ ಆಕರ್ಷಣೆಗೆ ಒತ್ತು

Published:
Updated:

ನವದೆಹಲಿ (ಪಿಟಿಐ): ಮೂಲ ಸೌಕರ್ಯಗಳ ಅಭಿವೃದ್ಧಿ ವಲಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸಲು ಈ ಬಾರಿಯ ಬಜೆಟ್‌ನಲ್ಲಿ ಒತ್ತು ನೀಡಿರುವ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಈ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಪ್ರಕಟಿಸಿದ್ದಾರೆ.ಮುಂಬರುವ ಆರ್ಥಿಕ ವರ್ಷದಲ್ಲಿ ಈ ವಲಯದಲ್ಲಿ ಶೇ 9ರಷ್ಟು ಪ್ರಗತಿ ಸಾಧಿಸುವ ನಿರೀಕ್ಷೆಯನ್ನು ಪ್ರಕಟಿಸಿರುವ ಅವರು, ಈ ದಿಸೆಯಲ್ಲಿ ರೂ 30 ಸಾವಿರ ಕೋಟಿಗಳ ತೆರಿಗೆ ರಿಯಾಯ್ತಿ ಬಾಂಡ್‌ಗಳನ್ನು ನೀಡುವ ಗುರಿ ಹೊಂದಲಾಗಿದೆ ಎಂದಿದ್ದಾರೆ.ಮೂಲ ಸೌಕರ್ಯಗಳ ಅಭಿವೃದ್ಧಿ ವಲಯದಲ್ಲಿ ತೆರಿಗೆ ರಿಯಾಯ್ತಿಗಾಗಿ ಮಾಡುವ ಗರಿಷ್ಠ ರೂ 20 ಸಾವಿರಗಳ ಹೂಡಿಕೆಯನ್ನು ಮುಂದಿನ ವರ್ಷಕ್ಕೂ ಅವರು ವಿಸ್ತರಿಸಿದ್ದಾರೆ.ಮೂಲ ಸೌಕರ್ಯಗಳ ಅಭಿವೃದ್ಧಿ ವಲಯಕ್ಕೆ ರೂ 2.14 ಲಕ್ಷ ಕೋಟಿಗಳಷ್ಟು ಬಜೆಟ್ ಬೆಂಬಲವನ್ನು ಪ್ರಕಟಿಸಿರುವ ಅವರು, ಈ ವಲಯದಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರನ್ನು ಉತ್ತೇಜಿಸಲು ‘ಮೂಲ ಸೌಕರ್ಯ ಅಭಿವೃದ್ಧಿ ಸಾಲ ನಿಧಿ’ಯನ್ನು ಸ್ಥಾಪಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.ಭಾರತೀಯ ರೈಲ್ವೆ ಹಣಕಾಸು ನಿಗಮ (ಐಆರ್‌ಎಫ್‌ಸಿ) ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಂಡಿಯಾ ಲಿಮಿಟೆಡ್‌ಗಳು (ಎನ್‌ಎಚ್‌ಎಐ) ತಲಾ ರೂ 10 ಸಾವಿರ ಕೋಟಿಗಳ ತೆರಿಗೆ ರಿಯಾಯಿತಿ ಬಾಂಡ್‌ಗಳನ್ನು ವಿತರಿಸಲಿದ್ದು, ಹುಡ್ಕೊ ಮತ್ತು ಬಂದರು ವಲಯಗಳು ತಲಾ ರೂ 5 ಸಾವಿರ ಕೋಟಿಗಳ ಬಾಂಡ್‌ಗಳನ್ನು ವಿತರಿಸಲಿವೆ. ವಿದೇಶಿ ಬಂಡವಾಳವನ್ನು ಭಾರತೀಯ ಷೇರು ನಿಯಂತ್ರಣ ಮಂಡಳಿಯಲ್ಲಿ (ಸೆಬಿ) ನೋಂದಣಿಯಾಗಿರುವ  ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಅನುಮತಿ ನೀಡಲಾಗಿದ್ದು, ಮೂಲ ಸೌಕರ್ಯಗಳ ಅಭಿವೃದ್ಧಿ ವಲಯದಲ್ಲಿ ಹೂಡಿಕೆ ಮಾಡುವ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ)  ಬಂಡವಾಳದ ಮಿತಿಯನ್ನು 2 ಸಾವಿರ ಕೋಟಿ ಡಾಲರ್‌ಗಳಿಗೆ ಏರಿಸಲಾಗಿದೆ.ಭಾರತೀಯ ಮೂಲ ಸೌಕರ್ಯಗಳ ಅಭಿವೃದ್ಧಿ ಹಣಕಾಸು ಕಂಪೆನಿ ಲಿಮಿಟೆಡ್ (ಐಐಎಫ್‌ಸಿಎಲ್) ಮುಂದಿನ ಆರ್ಥಿಕ ವರ್ಷದಲ್ಲಿ ರೂ 25 ಸಾವಿರ ಕೋಟಿ ಸಾಲ ವಿತರಿಸುವ ಗುರಿ ಹೊಂದಿದೆ ಎಂದು ಮುಖರ್ಜಿ ಹೇಳಿದ್ದಾರೆ. ಶೈತ್ಯಾಗಾರಗಳ ನಿರ್ಮಾಣವನ್ನು ಸಹ ಮೂಲ ಸೌಕರ್ಯಗಳ ಅಭಿವೃದ್ಧಿ ವಲಯಕ್ಕೆ ತರಲಾಗುವುದು ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry