ಭಾನುವಾರ, ಆಗಸ್ಟ್ 18, 2019
22 °C
ಗ್ರಾಮಾಯಣ

ಮೂಲ ಸೌಲಭ್ಯ ವಂಚಿತ ಚನಪನಹಳ್ಳಿ

Published:
Updated:

ಕುಕನೂರು: ಯಲಬುರ್ಗಾ ತಾಲ್ಲೂಕು ಭೂವಿಸ್ತಾರದಲ್ಲಿ ಹಾಗೂ ಜನಸಾಂದ್ರತೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿಯೇ ಅತೀ ದೊಡ್ಡ ತಾಲ್ಲೂಕು ಎಂದು ಪ್ರಖ್ಯಾತಿ ಗಳಿಸಿದೆ.ಇಂತಹ ದೊಡ್ಡ ತಾಲ್ಲೂಕಿನಲ್ಲಿ ಕೆಲವು ಗ್ರಾಮಗಳು ಇನ್ನೂ ಮೂಲ ಸೌಲಭ್ಯದಿಂದ ವಂಚಿತವಾಗಿವೆ. ಇದಕ್ಕೆ ತಾಜಾ ನಿದರ್ಶನ ಕುಕನೂರು ಸಮೀಪದ ಚನಪನಹಳ್ಳಿ.ಕುಕನೂರಿನಿಂದ ಸುಮಾರು 3 ಕಿ.ಮೀ. ದೂರದಲ್ಲಿರುವ ಚನಪನಹಳ್ಳಿ ಗ್ರಾಮದಲ್ಲಿ ಸುಮಾರು 110 ಕುಟುಂಬಗಳು ವಾಸಿಸುತ್ತಿದ್ದು, ಆರು ನೂರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಜೀವನ ನಿರ್ವಹಿಸಲು ಬಹುತೇಕರು ಮಳೆಯಾಧಾರಿತ ಕೃಷಿಯನ್ನೇ ಅವಲಂಬಿಸಿದ್ದಾರೆ. ಆದರೆ ಸಮಯಕ್ಕೆ ಸರಿಯಾಗಿ ಮಳೆ ಬೀಳದ ಕಾರಣದಿಂದ ಬಡತನ, ದಾರಿದ್ರ್ಯ ಮನೆಮಾಡಿದ್ದು ಮೇಲ್ನೋಟಕ್ಕೆ ಕಂಡುಬರುತ್ತದೆ.ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಇದ್ದು, ನಾಲ್ವರು ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. 1ರಿಂದ 5ನೇ ವರ್ಗದಲ್ಲಿ 57 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.ನೀರಿನ ಸಂಗ್ರಹಕ್ಕಾಗಿ ಒಂದು ಕೊಳಾಯಿ ಟ್ಯಾಂಕ್ ನಿರ್ಮಿಸಿದ್ದು, ಕುಡಿಯಲು ಹಾಗೂ ಬಟ್ಟೆ ತೊಳೆಯಲು ನಿವಾಸಿಗಳು ಇದೇ ನೀರನ್ನು ಬಳಸುತ್ತಿದ್ದಾರೆ. ನೀರಿನ ಟ್ಯಾಂಕ್, ಕೈಪಂಪ್ ಸುತ್ತಮುತ್ತಲು ಹರಡಿರುವ ಗಲೀಜು, ಅಲ್ಲಲ್ಲಿ ಶೇಖರಗೊಂಡ ಮಲೀನ ನೀರು ಹಾಗೂ ಎಲ್ಲೆಂದರಲ್ಲಿ ಹಾಕಲಾಗಿರುವ ತಿಪ್ಪೆಗಳಿಂದ ಗ್ರಾಮ ಸಂಪೂರ್ಣವಾಗಿ ಮಲೀನಗೊಂಡಿದೆ. ಇದರಿಂದಾಗಿ ಸಾರ್ವಜನಿಕರು ಜ್ವರ, ವಾಂತಿ, ಭೇದಿಯಂತಹ ಸಾಂಕ್ರಾಮಿಕ ರೋಗದಿಂದ ಬಳಲುವಂತಾಗಿದೆ.ಗ್ರಾಮಕ್ಕೆ ರಸ್ತೆ ಸಾರಿಗೆ ಸೌಲಭ್ಯ ಇಲ್ಲದ ಕಾರಣ ಈಗಲೂ ಕುಕನೂರಿಗೆ ನಡೆದುಕೊಂಡು ಹೋಗಬೇಕಾಗಿದೆ.  

Post Comments (+)