ಭಾನುವಾರ, ಮೇ 22, 2022
21 °C

ಮೂಳೆ ಚಿಕಿತ್ಸೆ: ಇನ್ನಷ್ಟು ಸಾಧನೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: `ಕೀಲು, ಮೂಳೆ ಚಿಕಿತ್ಸಾ ಕ್ಷೇತ್ರದಲ್ಲಿ ರಾಜ್ಯದ ವೈದ್ಯರು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ವೈದ್ಯಕೀಯ ಕ್ಷೇತ್ರದ ಗಮನ ಸೆಳೆದಿದ್ದಾರೆ. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಕಳೆದ ಕೆಲವರ್ಷಗಳಿಂದ ಎಲ್ಲ ವೈದ್ಯರೂ ಕರ್ನಾಟಕದತ್ತ ದೃಷ್ಟಿ ನೆಟ್ಟಿದ್ದಾರೆ~ ಎಂದು ಭಾರತೀಯ ಕೀಲು ಮತ್ತು ಮೂಳೆತಜ್ಞರ ಸಂಘದ ಅಧ್ಯಕ್ಷ ಡಾ. ರಾಜೀವ್ ನಾಯಕ್ ನುಡಿದರು.ಕೀಲು ಮತ್ತು ಮೂಳೆ ತಜ್ಞರ ಸಂಘ ಮತ್ತು ವೈದ್ಯಕೀಯ ಕಾಲೇಜುಗಳ ಸಹಯೋಗದಲ್ಲಿ ಶನಿವಾರ ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.`ಕೀಲು ಮತ್ತು ಮೂಳೆ ವಿಭಾಗದ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅನೇಕ ವಿದೇಶಿ ವಿದ್ಯಾರ್ಥಿ ವೇತನಗಳು ಲಭ್ಯ ಇವೆ. ಹಿಂದೆ ಇವುಗಳ ಬಗ್ಗೆ ಅನೇಕರಿಗೆ ಮಾಹಿತಿ ಇರಲಿಲ್ಲ. ಇಂಥ ಅನುದಾನ ಬಳಸಿಕೊಂಡು ನಮ್ಮ ವೈದ್ಯರು ಹಾಗೂ ವಿದ್ಯಾರ್ಥಿಗಳು ಇನ್ನಷ್ಟು ಸಾಧನೆ ಮಾಡಬೇಕು~ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ. ಆರ್.ಎಸ್. ಪ್ರಸಾದ್, `ಕಳೆದ ಒಂದೂವರೆ ದಶಕದಲ್ಲಿ ಕೀಲು ಮತ್ತು ಮೂಳೆ ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ಅತಿ ಹೆಚ್ಚು ಕೌಶಲವನ್ನು ಬಯಸುವ ಕ್ಷೇತ್ರಗಳಲ್ಲಿ ಒಂದಾಗಿ ಇದನ್ನು ಪರಿಗಣಿಸಲಾಗುತ್ತಿದೆ~ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕೀಲು, ಮೂಳೆತಜ್ಞರ ಸಂಘದ ರಾಜ್ಯ ಘಟಕ ಅಧ್ಯಕ್ಷ ಡಾ.ವಿ.ಜಿ.ಮುರಕಿಬಾವಿ, `ರಾಷ್ಟ್ರೀಯ ಸಮಾವೇಶ  ನಡೆಯದಂಥ ಸಣ್ಣ ನಗರದ ವಿದ್ಯಾರ್ಥಿಗಳಿಗೆ ಹಾಗೂ ವೈದ್ಯರಿಗೂ ಅನುಕೂಲವಾಗಲೆಂಬ ಉದ್ದೇಶದಿಂದ ಇಂಥ ವಿಚಾರಸಂಕಿರಣವನ್ನು ಆಯೋಜಿಸಲಾಗುತ್ತಿದೆ~ ಎಂದರು. ಸಂಘದ ರಾಜ್ಯ ಘಟಕದ ಪದಾಧಿಕಾರಿಗಳು ಹಾಗೂ ವಿವಿಧ ಭಾಗಗಳಿಂದ ಬಂದ ವೈದ್ಯರು ಉಪಸ್ಥಿತರಿದ್ದರು. ತಜ್ಞ ವೈದ್ಯರು ಉಪನ್ಯಾಸ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.